ಮಂಗಳೂರು, ಮೇ 23: ಕೇಂದ್ರ ಸರಕಾರದ ದುರಾಡಳಿತದಿಂದಾಗಿ ಪೆಟ್ರೋಲ್, ಡೀಸೆಲ್‌ ಪಡಿತರದಂತೆ ನೀಡುವ ಪದ್ಧತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಇನ್ನು ದೇಶದಲ್ಲಿ ಹೇಗೋ ಎಂದು ಮಾಜೀ ಮಂತ್ರಿ ಯು. ಟಿ. ಖಾದರ್ ಅವರು ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ತೈಲದ ಮೇಲೆ ರೂ. 3 ತೆರಿಗೆ ಇದ್ದರೆ ಈಗ 30 ಇದೆ. ಮನಮೋಹನ್ ಸಿಂಗ್ ಕಾಲದಲ್ಲಿ ಒಂದೂವರೆ ಲಕ್ಷ ಕೋಟಿ ಸಬ್ಸಿಡಿ ನೀಡಿದ್ದರಿಂದ ತೈಲ ಕಂಪೆನಿಗಳು ಲಾಭದಿಂದಿದ್ದವು. ಈಗ ಸಬ್ಸಿಡಿ ಇಲ್ಲ, ಅಬಕಾರಿ ಸುಂಕ 30% ಏರಿಕೆ ಮಾಡಿ ಕಂಪೆನಿಗಳು ಕೇಳಿದವರಿಗೆ ಅಗತ್ಯದಷ್ಟು ಪೆಟ್ರೋಲ್, ಡೀಸೆಲ್‌ ನೀಡುತ್ತಿಲ್ಲ ಎಂದರೆ ಅಭಿವೃದ್ಧಿ ಎಲ್ಲಿಗೆ ಮುಟ್ಟಲಿದೆ ಎಂದು ಖಾದರ್ ಪ್ರಶ್ನಿಸಿದರು.

ಕಾಸಗಿ ಕಂಪೆನಿಗಳು ಬಂಕ್ ತೆರೆದು ಮುಚ್ಚಿಕೊಂಡು ಹೋಗಿವೆ. ಸರಕಾರಿ ಸ್ವಾಮ್ಯದ ಕಂಪೆನಿಗಳು ರೇಶನ್ ಎನ್ನುತ್ತಿವೆ. ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಬರುತ್ತಿರುವುದರಿಂದ ಮೋದಿ ಸರಕಾರವು ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಸಿದ ನಾಟಕ ನಡೆಸಿದೆ. ನೂರು ಏರಿಸಿ, ಮೂರು ಇಳಿಸಿ ರಾಜಕೀಯ ಮಾಡಿದರೆ ಜನರಿಗೇಕೆ ಪ್ರಯೋಜನ ಎಂದು ಖಾದರ್ ಕೇಳಿದರು.

ಕಡಲ ಕೊರೆತದ ಬಗೆಗೆ ಎಡಿಬಿ ಕೆಲಸ, ಇತ್ಯಾದಿ ಬಗೆಗೆ ನಾನು ಕಾಗದ ಬರೆದಿದ್ದೆ. ಅದಕ್ಕೆ ಉಪೇಕ್ಷೆ. ಬಜೆಟ್‌ನಲ್ಲಿ ಮೂರು ಜಿಲ್ಲೆಗಳ ಕಡಲ ಕೊರತೆ‌ ನಿವಾರಣೆಗೆ ಬರೇ ರೂ. 10 ಕೋಟಿ ಇಟ್ಟಿದ್ದಾರೆ. ಈಗ ಅರೆಬರೆ ಕೆಲಸ ನಡೆಸಿದ್ದಾರೆ. ಜೂನ್ ಕೊನೆ ಜುಲೈ ಆರಂಭದಲ್ಲಿ ಅನುಭವದ ಪ್ರಕಾರ ಕಡಲ ಕೊರೆತ ಜೋರಾಗಿರುತ್ತದೆ. ಜಿಲ್ಲಾಡಳಿತ ಕೂಡಲೆ ಈ ಬಗೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಯುಟಿಕೆ ಹೇಳಿದರು.

ಶಬ್ದ ಮಾಲಿನ್ಯ ತಡೆಯಲು, ಪರವಾನಗಿ ಬಗೆಗೆ ಮೇ 25 ಎಂದರು. ಅದಕ್ಕೆ ಕಟ್ಟುನಿಟ್ಟು ನಿಯಮ ಮಾಡಿಲ್ಲ. ಭಾರತದಲ್ಲಿ ಸಂಸ್ಕೃತಿ ಮತ್ತು ಮಾನವೀಯತೆಯ ಸಂಪ್ರದಾಯದ ಮೇಲೆ ಭಾರತ ನಡೆಯುತ್ತದೆ. ಇಲ್ಲಿ ತೆರಿಗೆ, ಕಾನೂನಿಗೆ ಎರಡನೇ ಸ್ಥಾನ.

ಇಡೀ ಜಗತ್ತಿನಲ್ಲಿ ನಮ್ಮದು ಅತಿ ದೊಡ್ಡ ವೈವಿಧ್ಯತೆಯಲ್ಲಿ ಏಕತೆಯ ದೇಶ. ಇದು ಬೇರೆ ದೇಶಗಳಲ್ಲಿ ಇಲ್ಲವಾದ್ದರಿಂದ ಇಲ್ಲಿ ನಿಯಮಗಳು ಸಹ ಸಂಕೀರ್ಣ ಎಂದು ಖಾದರ್ ತಿಳಿಸಿದರು.

ಆಟ, ಕೋಲ, ಉರೂಸ್, ಚರ್ಚ್ ಊರ್ಬಲಿ ಎಲ್ಲ ವೈವಿಧ್ಯತೆಗೆ ತಡೆ ಒಡ್ಡಿದರೆ ಜನರಲ್ಲಿ ವೈವಿಧ್ಯಮಯ ಸಂಸ್ಕೃತಿ ಉಳಿಯುವುದು ಹೇಗೆ? ಪೋಲೀಸರು ಯಾವುದೇ ನಿಯಮ ಬಂದಿಲ್ಲ ಎಂದಿದ್ದಾರೆ. ಒಟ್ಟಾರೆ ಜನರ ಆಚರಣೆಗಳಿಗೆ ತೊಂದರೆ ಇಲ್ಲದಂತೆ ನಡೆದುಕೊಳ್ಳಲಿ ಎಂದು ಖಾದರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಇಬ್ರಾಹಿಂ ಕೋಡಿಜಾಲ್, ಸದಾಶಿವ ಉಲ್ಲಾಳ್, ಕಲಾವತಿ, ಮೋನಾಕ ಮೊದಲಾದವರು ಉಪಸ್ಥಿತರಿದ್ದರು.