ಮುಂಬಯಿ, ಜು.29: ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ ಇಂಡಿಯಾ ಇದರ ೫೦ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಸಾಂಸ್ಕೃತಿಕ ವಿನಿಮಯದ ಅಂಗವಾಗಿ ಯುಎಇಯ ಜನಿಸಿಸ್ ಅಲ್ಟಿಮಾ ಮತ್ತು ದುಬೈಯ ಸೇಂಟ್ ಸಾಂಸ್ಕೃತಿಕ ಸಂಘಟನೆಯ ಸಹಕಾರದಲ್ಲಿ ಸುವರ್ಣ ಸೌರಭ ಕಾರ್ಯಕ್ರ ಮವನ್ನು ಬರ್‌ದುಬೈಯ ಪಾರ್ಕ್ ರಿಜಿಸ್ ಸಭಾಂಗಣದಲ್ಲಿ ಕಳೆದ ಭಾನುವಾರ  ಆಯೋಜಿಸಿತ್ತು. 

ಸುವರ್ಣ ಸೌರಭದ ಅಂಗವಾಗಿ, ಪುಸ್ತಕ ಬಿಡುಗಡೆ, ಕೊಡಲು ವಾದನ, ಭರತನಾಟ್ಯ ಮತ್ತು ಕವಿ ಗೋಷ್ಠಿ ಮುಂತಾದ ಕಾರ್ಯಕ್ರಮಗಳು ಜರುಗಿದವು. ಅಬುದಾಬಿ ಕನ್ನಡ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರು ಕೆ.ಎಂ.ಇಕ್ಬಾಲ್ ಬಾಳಿಲ ಅವರು ಬರೆದ "ಮಾದಕತೆ ಮಾರಣಾಂತಿಕ" ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ಕೃತಿ ಬಿಡುಗಡೆಗೈದು ಮಾತನಾಡಿದ ಅವರು ಸಾಮಾಜಿಕ ಪಿಡುಗನ್ನು ತೊಡೆದು ಹಾಕಲು ಈ ಕೃತಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಲಿ. ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಅಬುದಾಬಿ ಕನ್ನಡ ಸಂಘ ಮೂರು ದಶಕಗಳಿಂದ ಪ್ರೋತ್ಸಾಹಿಸುತ್ತಾ ಬಂದಿದೆ. ಅದು ನಿರಂತರವಾಗಿ ಸಾಗಲಿದೆ ಎಂದರು

ಐಸಿಎಫ್‌ಸಿ (ಐ) ಸ್ಥಾಪಕ ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ್ ಸಾಗರ್  ಪ್ರಾಸ್ತಾವಿಕ ಭಾಷಣಗೈದು ಅಂತರಾಷ್ಟ್ರೀ ಯ ಸಾಂಸ್ಕೃತಿಕ ಸೌರಭ ಪರಿಷತ್ (ಇಂಡಿಯಾ) 2004ರಿಂದ ಈವರೆಗೆ 40ಕ್ಕೂ ಹೆಚ್ಚು ದೇಶಗಳಲ್ಲಿ 50 ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಆಯೋಜಿಸುವ ಮೂಲಕ ಇಂದು ದುಬೈಯಲ್ಲಿ ಸುವರ್ಣ ಸೌರಭ ಸಮಾರಂಭವನ್ನು ಆಯೋಜಿಸುತ್ತಿದೆ. ಇದು ಸಂಸ್ಥೆಯ ಸಾಧನೆಯಾ ಮೈಲುಗಲ್ಲು ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ. ನಾವು ವಿಶ್ವ ಸೌಹಾರ್ದ ಪ್ರಿಯರು ಎನ್ನುವ ಧ್ಯೇಯವಾಕ್ಯದಡಿ ವಿಶ್ವ ಪರ್ಯಟನೆ ಮಾಡಲು ಸಾಧ್ಯವಾಯಿತು"  ಎಂದರು.

ವೇದಿಕೆಯಲ್ಲಿ ದುಬೈ ಉದ್ಯಮಿ ಉದಯಕುಮಾರ್, ದುಬೈ ಸೇಂಟ್ ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಶೋಧನ್ ಪ್ರಸಾದ್ ಅತ್ತಾವರ, ದುಬೈ ಬಿಲ್ಲವ ಫ್ಯಾಮಿಲಿ ಅಧ್ಯಕ್ಷ ದೀಪಕ್ ಎಸ್.ಪಿ ಮುಂತಾದವರು ಉಪಸ್ಥಿತರಿದ್ದರು.

ಸುವರ್ಣ ಸೌರಭ ಕಾರ್ಯಕ್ರಮಕ್ಕೆ ಗಲ್ಫ್ ನ ವಿವಿಧ ರಾಷ್ಟ್ರಗಳಿಂದ ಸಾಧಕರು ಮತ್ತು ಗಣ್ಯರು ಉಪಸ್ಥಿತರಿದ್ದು ಆರತಿ ಸುರೇಶ್ ಸ್ವಾಗತಿಸಿದರು. ಗಾಯತ್ರಿ ಮಹೇಶ್ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.