ಕಾಪು ಪುರಸಭೆಯ ಮಲ್ಲಾರುನಲ್ಲಿ ಗುಜರಿ ಅಂಗಡಿಯಲ್ಲಿ ಆದ ಸ್ಫೋಟ ಬೆಂಕಿಯಿಂದ ಇಬ್ಬರು ಜೀವಂತ ಸುಟ್ಟು ಹೋದರೆ, ಐವರು ತೀವ್ರ ಗಾಯಗೊಂಡರು.

ಚಂದ್ರನಗರದ ಶೇಖಬ್ಬ ಬ್ಯಾರಿಯವರ ಮಗ 44ರ ರಜಬ್ ಸತ್ತವರಲ್ಲಿ ಒಬ್ಬರು. ಕೊಲ್ಲಿಯಲ್ಲಿ ದುಡಿಯುತ್ತಿದ್ದ ಇವರು ಆರು ತಿಂಗಳ ಹಿಂದೆ ಊರಿಗೆ ಬಂದು ಗುಜರಿ ವ್ಯಾಪಾರದಲ್ಲಿ ಪಾಲುದಾರರಾಗಿ ಸೇರಿಕೊಂಡಿದ್ದರು.

ಸಾವಿಗೀಡಾದ ಇನ್ನೊಬ್ಬರು 43ರ ರಜಬ್, ಇವರು ಮಲ್ಲಾರು ಗುಡಿಕೇರಿ ಶಾಬಾನ್ ಬ್ಯಾರಿಯವರ ಮಗ. ಇಬ್ಬರೂ ಮಕ್ಕಳೊಂದಿಗರು.

ಇನ್ನೊಬ್ಬ ಪಾಲುದಾರ ಚಂದ್ರನಗರದ ಹಸನಬ್ಬ, ಸಾಗರ ಮೂಲದ ನಿಯಾಜ್, ಬೆಳಪು ಗ್ರಾಮ ಪಂಚಾಯತ್ ಸದಸ್ಯ ಫಹ, ಉತ್ತರ ಕರ್ನಾಟಕದ ಇಬ್ಬರು ಕಾರ್ಮಿಕರಾದ ಈರಪ್ಪ ಮತ್ತು ವೀರೇಶ್ ಈ ಐದು ಮಂದಿ ಗಾಯಗೊಂಡವರು.

ಹತ್ತು ಲಕ್ಷದಷ್ಟು ಮಾಲು‌ ಸುಟ್ಟು ಹೋಗಿದೆ. ಮಾಜೀ ಶಾಸಕ ವಿನಯಕುಮಾರ್ ಸೊರಕೆ ಸ್ಥಳಕ್ಕೆ ಭೇಟಿ ನೀಡಿದರು. ಸೂಕ್ತ ಪರಿಹಾರ ನೀಡುವಂತೆ ಸಂಬಂಧಿಸಿದವರನ್ನು ಒತ್ತಾಯ ಮಾಡಿದರು.