ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಹಂಡೇಲು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆಂಗ್ಲ ಮಾಧ್ಯಮ ತರಗತಿ ಜುಲೈ 16ರಂದು ಪ್ರಾರಂಭವಾಯಿತು. ತರಗತಿಯ ಉದ್ಘಾಟನೆಯನ್ನು ಮಾಜಿ ತಾಲೂಕು ಪಂಚಾಯತ್ ಸದಸ್ಯ ನ್ಯಾಯವಾದಿ ಪ್ರಕಾಶ್ ದೀಪ ಬೆಳಗಿ ಉದ್ಘಾಟಿಸಿದರು. ಅವರು ತಮ್ಮ ಭಾಷಣದಲ್ಲಿ ಈಗಾಗಲೇ ಈ ಶಾಲೆಯಲ್ಲಿ ಆರು ಮತ್ತು ಏಳನೇ ತರಗತಿ ಕಳೆದ ಹಲವಾರು ವರ್ಷಗಳಿಂದ ಆಂಗ್ಲ ಮಾಧ್ಯಮದಲ್ಲಿ ನಡೆಯುತ್ತಿದ್ದು ಪ್ರಸ್ತುತ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟೋದಕ್ಕೆ ಸರಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಸರಕಾರದ ಉದ್ದೇಶವಾದ ಸಮಾನ ಶಿಕ್ಷಣ ವ್ಯವಸ್ಥೆ ಈ ರೀತಿಯಲ್ಲಿ ಜಾರಿಗೆ ಬರುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ರವರು ತರಗತಿಯ ಉದ್ಘಾಟನೆಯನ್ನು ನೆರವೇರಿಸಿ ಮಕ್ಕಳನ್ನು ಕರೆದುಕೊಂಡು ಬರುವ ಪ್ರಯತ್ನ ಊರಿನವರ ಮುತುವರ್ಜಿಯಿಂದ ಆಗಬೇಕಾಗಿದೆ. ಸ್ಥಳೀಯ ಮಕ್ಕಳನ್ನೇ ಸೇರಿಸಿ ಇನ್ನಷ್ಟು ಉತ್ತಮವಾಗಿ ಶಾಲೆಯ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಹಾಜರಿದ್ದ ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯ ಮುರುಳಿಧರ ಮಾತನಾಡಿ ಪಂಚಾಯತ್ ಹಾಗೂ ಇತರ ದಾನಿಗಳ ಅನುದಾನದಿಂದ ಶಾಲೆಯನ್ನು ಅಭಿವೃದ್ಧಿ ಮಾಡಲು ಪ್ರಯತ್ನಿಸಲಾಗುತ್ತಿದೆ. ದಾನಿಗಳಿಂದ ಶಾಲಾ ಸಮವಸ್ತ್ರ, ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಗ್ರಿಗಳನ್ನು ವಿತರಿಸಲಾಗಿದೆ. ಗೌರವ ಶಿಕ್ಷಕರಿಗೆ ಸಂಬಳವನ್ನು ಕೂಡ ಹಳೆ ವಿದ್ಯಾರ್ಥಿಗಳು ಸಂಗ್ರಹಿಸಿ ನೀಡಿ ಶಾಲೆಯ ಅಭಿವೃದ್ಧಿಯನ್ನು ಮಾಡುತ್ತಿದ್ದೇವೆ ಎಂದು ಸಭೆಗೆ ತಿಳಿಸಿದರು.
ಆಂಗ್ಲ ಮಾಧ್ಯಮದ ಗೌರವ ಶಿಕ್ಷಕಿ ಮೋಕ್ಷ ಅವರನ್ನು ಸ್ವಾಗತಿಸಲಾಯಿತು. ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಶಾಲಾ ಪರಿಕರವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಮಾಜಿ ಉಪಾಧ್ಯಕ್ಷ
ಫಿರೋಜ್ ಖಾನ್, ಥೈರಾ ಬಾನು, ಪ್ರತಿಭಾ, ಖಜಾಂಚಿ ಜಯಂತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹೇಶ್ವರಿ, ಶಿಕ್ಷಣ ಸಂಯೋಜಕ ರಾಜೇಶ್ ಭಟ್ ಹಾಜರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಚಂದ್ರಕಾಂತಿ ಸ್ವಾಗತಿಸಿದರು, ಶಿಕ್ಷಕ ದೊರೆಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು, ಶಿಕ್ಷಕಿ ಚಿತ್ರಾವತಿ ವಂದಿಸಿದರು.