ಉಳ್ಳಾಲ: 'ಮಹಾಕವಿಗಳೇ ಮೆಚ್ಚಿದ ಸಾಹಿತ್ಯ ಚುಟುಕು ಪ್ರಕಾರ. ನಾಲ್ಕೇ ಸಾಲುಗಳಲ್ಲಿ ಜೀವನದಲ್ಲಿ ಸಂಸ್ಕಾರ ಕಲಿಸಿ ಕೊಡುವ ಸಾಮರ್ಥ್ಯ ಚುಟುಕಿಗಿದೆ' ಎಂದು ಹಿರಿಯ ಸಾಹಿತಿ  ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷರಾದ ಇರಾ ನೇಮು ಪೂಜಾರಿ ಅವರು ಹೇಳಿದರು.

ಅವರು ಭಾನುವಾರ ಬೀರಿಯಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಚುಟುಕು ಸಾಹಿತ್ಯ ಪರಿಷತ್ತಿನ ಉಳ್ಳಾಲ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಓದುಗ ವರ್ಗದ ಧಾವಂತದ ಕಾಲಘಟ್ಟದಲ್ಲಿ ಒಂದೇ ನಿಮಿಷದಲ್ಲಿ ಮಿಂಚು ಹರಿಸಬಲ್ಲ ಚುಟುಕುಗಳು ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಹಿಡಿತವನ್ನು ಸಾಧಿಸಿದೆ ಎಂದವರು ನುಡಿದರು.

ದಕ್ಷಿಣ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ರವರು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಎಡ್ವರ್ಡ್ ಲೋಬೋ ತೊಕ್ಕೊಟ್ಟು, ಕಾರ್ಯದರ್ಶಿ ವಾಣಿ ಲೋಕಯ್ಯ, ಉಪಾಧ್ಯಕ್ಷ ಎಂ.ಎಸ್.ವೆಂಕಟೇಶ್ ಗಟ್ಟಿ, ಜತೆ ಕಾರ್ಯದರ್ಶಿಗಳಾದ ಗುಣವತಿ ಕಿನ್ಯ, ಅರ್ಚನಾ ಎಂ.ಬಂಗೇರಾ ಕುಂಪಲ, ಕೋಶಾಧಿಕಾರಿ ಯೋಗೀಶ್ ಮಲ್ಲಿಗೆಮಾಡು, ಗೌರವ ಸಲಹೆಗಾರ ಗುಣಾಜೆ ರಾಮಚಂದ್ರ ಭಟ್, ಸಮಿತಿಯ ಬಶೀರ್ ಕಿನ್ಯ,ಎಸ್.ಕೆ.ಕುಂಪಲ,ವಲೇರಿಯನ್ ಸಿಕ್ವೇರಾ ಅವರಿಗೆ ಪದಗ್ರಹಣ ಮಾಡಿ ಮಾತನಾಡಿ, 'ಉದಯೋನ್ಮುಖ ಕವಿಗಳು ಅಧ್ಯಯನವನ್ನೇ ತನ್ನ ಗುಣಮಟ್ಟದ ಅಸ್ತ್ರ ಮಾಡಿಕೊಳ್ಳಬೇಕು. ಬರಹಗಳ ಸಂಖ್ಯೆಗಿಂತ ಬರವಣಿಗೆಯ ಗುಣಮಟ್ಟವೂ ಮುಖ್ಯ ಎಂಬುದನ್ನು ಅರಿತುಕೊಳ್ಳಬೇಕು' ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾರಾಂಗ್ ಎಫೆಮ್ ಇದರ ನಿರ್ದೇಶಕರಾದ ಫಾ| ಮೆಲ್ವಿನ್ ಪಿಂಟೋ 'ಕಾದಂಬರಿಯನ್ನು ಬೇಕಾದರೆ ಸುಲಭದಲ್ಲಿ ಬರೆಯಬಹುದು ಆದರೆ ಸಮರ್ಥ ಚುಟುಕನ್ನು ಬರೆಯುವುದು ಅಂದುಕೊಂಡಷ್ಟು ಸರಳ ಪ್ರಕಾರ ಅಲ್ಲ.ಸಮಾಜದ ಓರೆಕೋರೆಗಳನ್ನು ತಿದ್ದುವ ಚಾಟಿಯೇಟು ಚುಟುಕುಗಳು' ಎಂದರು.

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವರಾಮ ಕಾಸರಗೋಡು, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಗುಣಾಜೆ ರಾಮಚಂದ್ರ ಭಟ್ ಅವರನ್ನು ಕನ್ನಡ ಮತ್ತು ಹವ್ಯಕ ಭಾಷಾ ಸಾಹಿತ್ಯ ಸೇವೆಗಾಗಿ ಸನ್ಮಾನಿಸಲಾಯಿತು.ಈ ಸಂದರ್ಭ ಕವಿ ಡಾ.ಸುರೇಶ್ ನೆಗಳಗುಳಿ,ಪತ್ರಕರ್ತ ರೇಮಂಡ್ ಡಿಕುನಾ ಅವರು ಉಪಸ್ಥಿತರಿದ್ದರು. ಬಳಿಕ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರೂಪಕ ಪ್ರವೀಣ್ ಅಮ್ಮೆಂಬಳ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು.ಕವಿಗಳಾದ ಗುಣಾಜೆ ರಾಮಚಂದ್ರ ಭಟ್, ವಲೇರಿಯನ್ ಸಿಕ್ವೇರಾ,ಎಸ್.ಕೆ.ಕುಂಪಲ,ವಾಣಿ ಲೋಕಯ್ಯ,ಸುಮಂಗಲ ದಿನೇಶ್ ಶೆಟ್ಟಿ,ದೀಕ್ಷಿತಾ ಕೊಳ್ಯೂರು,ಲತಾ ವಿಕ್ರಮದತ್ತ,ಕಿರಣ್ ರಾಜ್,ಎಡ್ವರ್ಡ್ ಲೋಬೋ,ಎಂ.ಎಸ್ ವೆಂಕಟೇಶ್ ಗಟ್ಟಿ,ಯೋಗೀಶ್ ಮಲ್ಲಿಗೆಮಾಡು,ಗುಣವತಿ ಕಿನ್ಯ,ಆಕೃತಿ ಐ ಎಸ್ ಭಟ್,ರಮಿತಾ ಕುತ್ತಾರ್,ಪಂಕಜ ಕೆ.ಮುಡಿಪು,ಕಾಂಚನ ಕೋಟೆಕಾರ್, ಅರ್ಚನಾ ಎಂ.ಕುಂಪಲ, ಖುಷಿ ಕೊಂಡಾಣ, ಶ್ರೀನಿವಾಸ, ಮನ್ಸೂರ್ ಮುಲ್ಕಿ,ಕಾಂಚನ,ಉಮ್ಮರ್ ಫಾರೂಕ್, ಚಂದ್ರಿಕಾ, ಡಾ.ಸುರೇಶ್ ನೆಗಳಗುಳಿ, ರೇಮಂಡ್ ಡಿಕುನಾ ತಮ್ಮ ಕವಿತೆಗಳನ್ನು ವಾಚನ ಮಾಡಿದರು.

ಪರಿಸರ ದಿನದ ಪ್ರಯುಕ್ತ ಹವ್ಯಾಸಿ ಕಲಾವಿದ ರಾಮಾಂಜಿ ಅವರು ಪ್ರಕೃತಿ ಗೀತೆ ಹಾಡಿದರು ವಾಣಿ ಲೋಕಯ್ಯ ಸ್ವಾಗತಿಸಿದರು.ಎಂ ಎಸ್ ವೆಂಕಟೇಶ ಗಟ್ಟಿ ವಂದಿಸಿದರು.ಯೋಗೀಶ್ ಮಲ್ಲಿಗೆಮಾಡು ಮತ್ತು ಶ್ರೀಮತಿ ರೇಖಾ ನಾರಾಯಣ್ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಕೆರೋಲ್ ಲೋಬೊ ಅರ್ವಿನ್ ಲೋಬೊ ಸಹಕರಿಸಿದರು.