ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಆರ್ಮಿ ಮತ್ತು ಎನ್‍ಸಿಸಿ ಘಟಕ, ಸಂತ ಫಿಲೋಮಿನಾ ಪ್ರೌಢಶಾಲೆಯ ನೇವಿ ಮತ್ತು ಎನ್‍ಸಿಸಿ ಘಟಕಗಳ ಜಂಟಿ ಆಶ್ರಯದಲ್ಲಿ ಸಂತ ಫಿಲೋಮಿನಾ ಶಾಲಾ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ಉದಯ ಕಾನಯೋಗವು ವಿಶ್ವಕ್ಕೆ ಭಾರತ ನೀಡಿದ ಮಹತ್ವದ ಕೊಡುಗೆ, ಕಂಪ್ಯೂಟರ್, ಮೊಬೈಲ್ ಮೊದಲಾದ ಎಲೆಕ್ಟ್ರಾನಿಕ್ ಸಲಕರಣೆಗಳಲ್ಲಿಯೇ ನಮ್ಮ ದಿನದ ಬಹುಪಾಲು ಸಮಯ ಕಳೆಯುತ್ತಿದ್ದು ದೈಹಿಕ ಚಟುವಟಿಕೆ ಕಡಿಮೆಯಾಗಿ, ಸುದ್ದಿ ಗೊಂದಲಗಳೇ ಹೆಚ್ಚುತ್ತಿವೆ. ಯೋಗದ ಅನುಸರಣೆಯಿಂದ ದೇಹಕ್ಕೆ ಚಟುವಟಿಕೆ ಮತ್ತು ಮನಸ್ಸಿಗೆ ಸಮಾಧಾನಸಿಗುತ್ತದೆ. ಪ್ರತಿಯೊಬ್ಬರೂ ದಿನದಲ್ಲಿ ಒಂದಷ್ಟು ಹೊತ್ತು ಯೋಗಾಭ್ಯಾಸಕ್ಕೆ ಮೀಸಲಾಗಿಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ| ಫಾ| ಅಶೋಕ್ ರಾಯನ್ ಮಾತನಾಡಿ ಯೋಗಾಸನಗಳನ್ನು ಮಾಡುವುದರಿಂದ ದೈಹಿಕ ಕ್ಷಮತೆ ಹೆಚ್ಚಿತ್ತದೆ, ಮಾನಸಿಕ ದೃಢತೆ ವೃದ್ದಿಯಾಗುತ್ತದೆ. ನಮ್ಮದೇಹದ ಸ್ವಾಸ್ಥ್ಯ ನಮ್ಮದೇ ಜವಾಬ್ದಾರಿ. ಉತ್ತಮ ಆಹಾರ, ವಿಹಾರಗಳೊಂದಿಗೆ ಪ್ರತಿ ದಿನವೂ ಯೋಗಾಭ್ಯಾಸ ಮಾಡುವುದರಿಂದ ಬದುಕು ಹಸನಾಗುತ್ತದೆ ಎಂದು ಹೇಳಿದರು.
ಫಿಲೋಮಿನಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಕಾರ್ಮಿನ್ ಪಾಯಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಯೋಗಾಭ್ಯಾಸ ಆರೋಗ್ಯಕ್ಕೆ ರಹದಾರಿ. ಉತ್ತಮ ಕಾರ್ಯಗಳು ನಮ್ಮ ಜೀವನವನ್ನು ಮಾತ್ರವಲ್ಲ ಸಮಾಜವನ್ನು ಸಮೃದ್ಧಗೊಳಿಸುತ್ತದೆ. ಯೋಗದಿನಾಚರಣೆಯಿಂದ ಯೋಗಾಭ್ಯಾಸವನ್ನು ಆರಂಭಿಸಲು ಪ್ರೇರಣೆ ಸಿಗಲಿ ಎಂದು ಹೇಳಿ ಶುಭಹಾರೈಸಿದರು.
ಸಂತ ಫಿಲೋಮಿನಾ ಪ್ರೌಢಶಾಲೆಯ ಎನ್‍ಸಿಸಿ ಅಧಿಕಾರಿ ಕ್ಲೆಮೆಂಟ್ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು. ಎನ್‍ಸಿಸಿ ಕ್ಯಾಡೆಟ್ಟುಗಳಿಂದ ಯೋಗಸಾನಗಳ ಪ್ರಾತ್ಯಕ್ಷಿಕೆ ನಡೆಯಿತು. ಭಾಗವಹಿಸಿದ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಯೋಗಾಸನವನ್ನು ಮಾಡಿದರು. ಸಂತ ಫಿಲೋಮಿನಾ ಕಾಲೇಜಿನ ಎನ್‍ಸಿಸಿ ಅದಿಕಾರಿ ಮತ್ತು ಸಮಾಜ ವಿಜ್ಞಾನ ವಿಭಾಗ ಮುಖ್ಯಸ್ಥ ಲೆಫ್ಟಿನೆಂಟ್ ಜಾನ್ಸನ್ ಡೆವಿಡ್ ಸಿಕ್ವೆರಾ ಅವರು ಮತ್ತು ಪ್ರೌಢಶಾಲೆಯ ಎನ್ಸಿಸಿ ಅಧಿಕಾರಿಗಳಾದ ನರೇಶ್ ಲ್ಪ್ಬೋ ಮತ್ತು ರೋಶನ್ ಸಿಕ್ವೆರಾ ಸಹಕಾರದಲ್ಲಿ ಕಾರ್ಯಕ್ರಮವನ್ನು ಸಂಘಟಿಸಿದರು.