ಉಜಿರೆ: “ವ್ಯಸನವೆಂಬುದು ಮಾಯಾಲೋಕ. ಅದರೊಳಗೆ ಹೋದರೆ ಹೊರಬರುವುದು ಕಷ್ಟ. ವ್ಯಸನದದಾಸರಾಗುವುದೆಂದರೆ ದುಷ್ಚಟಗಳಿಗೆ ಆವರಿಸಿ ಶರಣಾಗುವುದು ಎಂದು ಅರ್ಥ. ನಾವೊಮ್ಮೆ ಇದರಿಂದ ವಿಮುಕ್ತರಾಗಬೇಕೆಂದು ಬಯಸಿದರೂ ಅದುವೇ ನಮ್ಮನ್ನು ಅಂಟಿಕೊಂಡಿರುತ್ತದೆ. ಇದನ್ನು ಬಿಡಬೇಕೆಂದರೆ ಅಂತರಂಗ ದರ್ಶನವಾಗುವುದರ ಜೊತೆಗೆ ಆತ್ಮಸಾಕ್ಷಿಗೆ ಸರಿಯಾಗಿ ವಿಶ್ವಾಸದೊಂದಿಗೆ ಮುನ್ನಡೆಯಬೇಕಾಗಿದೆ. ಈ ಹಂತಕ್ಕೆ ತಲುಪಲು ಸಾಧ್ಯವಾಗುವಂತೆ ಮಾಡುವುದೇ ಶಿಬಿರಗಳ ಉದ್ದೇಶ ಹಾಗೂ ಸವಾಲಾಗಿದೆ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು ಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯವರ್ಜನದ ಚಿಕಿತ್ಸೆ ಪಡೆದ 175ನೇ ವಿಶೇಷ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಿಬಿರದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ 74 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಸಾಮಾನ್ಯವಾಗಿ ಎಲ್ಲಾ ಶಿಬಿರಾರ್ಥಿಗಳಿಗೆ ಆತ್ಮವಲೋಕನ, ಕುಟುಂಬ ಜೀವನದ ಮಹತ್ವ, ಹಾಗೂ ಅವರ ಜೀವನದಲ್ಲಿ ಬದಲಾವಣೆಯಾಗಬೇಕಾದ ಹಂತಗಳು ಮತ್ತು ವ್ಯಸನಮುಕ್ತ ಜೀವನೋಪಾಯಕ್ಕೆ ಬೇಕಾದ ವಿವಿಧ ಪಾಠಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ, ಈ ಹಿಂದಿನ ನವಜೀವನ ಸದಸ್ಯರಿಂದ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ.ಟ್ರಸ್ಟ್ (ರಿ.) ನ ಮುಖ್ಯ ನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್.ರವರು ಆಗಮಿಸಿ ಮಾಹಿತಿಯನ್ನು ನೀಡಿರುತ್ತಾರೆ. ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಿಂದ ಮನೋವೈದ್ಯಕೀಯ ವಿಭಾಗದ ವೈದ್ಯರು ಮತ್ತು ಸಲಹೆಗಾರರ ಚಿಕಿತ್ಸಾತಂಡ ಆಗಮಿಸಿ ಈ ಕಾರ್ಯಕ್ರಮಕ್ಕೆ ಸಹಕರಿಸಿರುತ್ತಾರೆ. ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ರುಡ್‍ಸೆಟ್ ಸಂಸ್ಥೆಯ ಮುಖ್ಯಸ್ಥರಾದ ಗಿರಿಧರ ಕಲ್ಲಾಪುರ, ಸುರೇಶ್ ಎಂ. ಉಪಸ್ಥಿತರಿದ್ದರು. ಶಿಬಿರದಲ್ಲಿ ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ, ಆರೋಗ್ಯ ಸಹಾಯಕಿ ನೇತ್ರಾವತಿ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ:02.05.2022 ರಿಂದ ಪ್ರಾರಂಭವಾಗಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.