ಮಂಗಳೂರು, ಮೇ 20: ದೇಶದಲ್ಲೇ ಅತಿ ಹೆಚ್ಚು 76 ಲಕ್ಷ ಸದಸ್ಯರನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸದಸ್ಯರಾಗಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೂಮುಕ್ಕಾಲು ಲಕ್ಷ ಸದಸ್ಯರ ನೇಮಕ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.
ಜೋದಪುರ ಮಾದರಿಯಲ್ಲಿ ಬೇಗನೆ ರಾಜ್ಯದಲ್ಲಿ ಚಿಂತನ ಶಿಬಿರ ನಡೆಯಲಿದೆ. ರಾಜೀವ್ ಗಾಂಧಿ ಚಿಂತನ ಯಾತ್ರೆ ನಡೆಯಲಿದೆ. ಈ ಇಡೀ ವರುಷ ಪಕ್ಷದ ಸಂಘಟನೆಯಲ್ಲಿ ನಾವೆಲ್ಲ ತೊಡಗಿಕೊಳ್ಳುತ್ತೇವೆ ಎಂದು ಸಲೀಂ ಅಹ್ಮದ್ ಹೇಳಿದರು.
ಎಲ್ಲ ವಿಭಾಗದಲ್ಲೂ ವಿಫಲವಾದ ಬಿಜೆಪಿಯು ಸರಕಾರವು 40% ಭ್ರಷ್ಟಾಚಾರ ನಡೆಸಿದೆ. ಆ ಪಕ್ಷದವರೇ ಹೇಳುತ್ತಿದ್ದಾರೆ. ಸಂತೋಷ ಪಾಟೀಲ್ ಎಂಬವರು ಉಡುಪಿಗೆ ಬಂದು ಆತ್ಮಹತ್ಯೆ ಮಾಡಿಕೊಂಡರು. ಈ ಸರಕಾರವು ಕೇಂದ್ರದ್ದೂ ಸೇರಿ ಲೂಟಿಕೋರ ಸರಕಾರವಾಗಿದ್ದು, ಜನರ ನೆಮ್ಮದಿ ಕೆಡಿಸಿದೆ ಎಂದು ಸಲೀಂರು ಹೇಳಿದರು.
ರಾಜ್ಯದಲ್ಲಿ ಸೋಲುವ ಭಯದಿಂದ ವರುಷದಿಂದ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಚುನಾವಣೆ ನಡೆಸಿಲ್ಲ. ಹೇಗಿದ್ದರೂ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದರೂ ಇವರು ಮುಂದೂಡುವ ನಾಟಕ ಆಡುತ್ತಿದ್ದಾರೆ. ನಿತ್ಯ ಪತ್ರಿಕೆಗಳಲ್ಲಿ ಇವರ ಭ್ರಷ್ಟಾಚಾರ ಮತ್ತು ಮಂತ್ರಿ ಮಂಡಲ ಸುದ್ದಿ ಇರುತ್ತದೆ ಎಂದು ಅವರು ಹೇಳಿದರು.
ಪಾಠದಲ್ಲಿ ನಾರಾಯಣ ಗುರುಗಳು ಬೇಡ, ಟಿಪ್ಪು ಸುಲ್ತಾನ್ ಬೇಡ, ಭಗತ ಸಿಂಗ್ ಬೇಡ ಎಂಬ ವಿತಂಡ ವಾದದ ಆಡಳಿತ ನಡೆಸಿದೆ ಬಿಜೆಪಿ ಸಂಘ ಪರಿವಾರ. ಕರ್ನಾಟಕ ಶಾಂತಿಯ ತೋಟ, ಇಲ್ಲಿ ಶಾಂತಿ ಕದಡುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ಅವರು ಹೇಳಿದರು.
ಪ್ರಮೋದ್ ಮಧ್ವರಾಜ್, ಹೊರಟ್ಟಿಯಂಥವರು ಅಧಿಕಾರಕ್ಕಾಗಿ ಅತ್ತ ಹಾರಿದ್ದಾರೆ. ಅವರು ಚುನಾವಣೆ ಬಳಿಕ ಭ್ರಮನಿರಸನಗೊಳ್ಳುವರು ಎಂದು ಸಲೀಂ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜೀ ಮಂತ್ರಿ ಯು. ಟಿ. ಖಾದರ್, ಮಾಜೀ ಶಾಸಕ ಜೆ. ಆರ್. ಲೋಬೋ, ಟಿ.ಕೆ. ಸುಧೀರ್, ಮುಸ್ತಫಾ, ನೀರಜ್ ಪಾಲ್, ಇಬ್ರಾಹಿಂ ಕೋಡಿಜಾಲ್ ಮೊದಲಾದವರು ಉಪಸ್ಥಿತರಿದ್ದರು.