ಬಜಪೆ: ಇಂದಿನ ದಿನಗಳಲ್ಲಿ ಕೃಷಿಯ ಎಲ್ಲಾ ಚಟುವಟಿಕೆಗಳು ಯಾಂತ್ರಿಕರಣಗೊಂಡು ಹೊಲಗದ್ದೆಗಳ ಲ್ಲಿ ಯಂತ್ರ ಹಾಗೂ ಎಂಜಿನ್ ಗಳ ಸದ್ದುಗಳು ಕೇಳಿ ಬರುತ್ತಿದ್ದು,ಇಲ್ಲೊಂದು ಕಡೆಯಲ್ಲಿ ಕೃಷಿ ಕಾರ್ಯವನ್ನು ಸಾಂಪ್ರದಾಯಿಕ ವಾಗಿ ಮಾಡುತ್ತ ಬಂದಿರುವುದು ವಿಶೇಷ.ಪಡುಪೆರಾರ ಗ್ರಾಮದ ಕಬೆತ್ತಿಗುತ್ತುವಿನಲ್ಲಿ ಕಂಬಳದ ಗದ್ದೆಗೆ (ಬಾರೆಪಾಡು ಕಂಬಳ)ಕಾಪು ಇಡುವ ಪದ್ದತಿಯು ದುಗ್ಗಣ ಬೈದರ ಕಾಲದಿಂದಲೂ ನಡೆದುಕೊಂಡು ಬಂದಿದೆ.ಸುಮಾರು ಶತಮಾನದ  ಇತಿಹಾಸವಿರುವ ಪದ್ದತಿ ಇದಾಗಿದೆ.ಕಬೆತ್ತಿಗುತ್ತುವಿನಲ್ಲಿ ಎಣೇಲು ಸಾಗುವಳಿಗೆ ಕಂಬಳ ಗದ್ದೆಗೆ ತಳಿರು ಹೂಗಳಿಂದ ಅಲಂಕೃತವಾದ ಕಾಪು ಇಡುವ ಪದ್ದತಿ  ಪರಂಪರೆಯಿಂದ ನಡೆದುಕೊಂಡು ಬಂದಿದೆ.ಮಾವಿನ ಎಲೆ,ಕಾವೇರಿ ಮರದೆಲೆ,ದಾಸವಾಳ ಹೂ,ರಥ ಪುಷ್ಪ,ತೆಂಗಿನ ಗರಿ ಹೀಗೆ ಐದು ಬಗೆಯ ಎಲೆ ಚಿಗುರು ಗಳನ್ನು ಕೋಲುಗಳಿಂದ ಕಟ್ಟಿದ ಅಟ್ಟೆಗೆ ರಥವನ್ನು ಹೋಲುವಂತೆ ಅಲಂಕರಿಸಿ ಕಂಬಳ ಗದ್ದೆಯ ಮಂಜೊಟ್ಟಿಯಲ್ಲಿ ಇರಿಸುತ್ತಾರೆ. ನೇಜಿ ನೆಟ್ಟು ಮುಗಿಯುತ್ತಿದ್ದಂತೆ ಮನೆ ಯಾಜಮಾನ ತಲೆಗೆ ಮುಂಡಾಸು ಕಟ್ಟಿಕೊಂಡು ಕಾಪುವನ್ನು ಹೊತ್ತು ಕಂಬಳಗದ್ದೆಯ ಮಧ್ಯಭಾಗಕ್ಕೆ ತಂದು ನೆಡುತ್ತಾರೆ. ದುಷ್ಟ ಶಕ್ತಿಗಳ ಪ್ರಾಣೆಪಕ್ಷಿಗಳ ಜಂತುಗಳ ಹಾವಳಿ ಬಾರದಿರಲಿ ಎಂಬ ದೈವಶಕ್ತಿಗಳನ್ನು ಸಂಕಲ್ಪಿಸಿ ಕಾವಲು ಸಂಕೇತವಾಗಿ ಕಾಪುವನ್ನು ಇಡುತ್ತಾರೆ.

ಗದ್ದೆಗೆ ಕಾಪು ಇಡುವ ಸಂದರ್ಭದಲ್ಲಿ ಕೃಷಿಗದ್ದೆಯಲ್ಲಿ ಕೃಷಿಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರು ತುಂಬಾ ಬಗೆಯ ಪಾಡ್ದಣಗಳನ್ನುಹೇಳುತ್ತಾರೆ.ಜಾನಪದ ಕಲಾವಿದೆ ಭವಾನಿ ಪೆರಾರ ಅವರ ಮುಂದಾಳುತ್ವದಲ್ಲಿ ಪಾಡ್ದಣ ವನ್ನು ಹೇಳುತ್ತಾರೆ.ಇವರು  ಕಳೆದ 58 ವರ್ಷಗಳಿಂದ ಕಬೆತ್ತಿಗುತ್ತಿನ ನಾಟಿ ಕಾರ್ಯದಲ್ಲಿ ಪಾಲ್ಗೊಂಡು ಪಾಡ್ದಣ ಹಾಗೂ ಕೃಷಿ ಗೀತೆಗಳನ್ನು ಹಾಡುತ್ತಿದ್ದಾರೆ. ಇವರೊಂದಿಗೆ ಗದ್ದೆಯಲ್ಲಿ ಕೃಷಿ ಕಾರ್ಯವನ್ನು ಮಾಡುವ ಇತರ ಮಹಿಳೆಯರೂ ದನಿಗೂಡಿಸುತ್ತಾರೆ.

ಗದ್ದೆಗೆ ಕಾಪು ಇಡುವ ದಿನದಂದು ಮನೆಯ ಯಾಜಮಾನ ಉಪವಾಸದಿಂದ ಇರುತ್ತಾರೆ.ಆ ದಿನ ಊಟಕ್ಕೆ ಹಲಸಿನ ಪದಾರ್ಥವು ಪ್ರಧಾನ ಪದಾರ್ಥ ವಾಗಿರುತ್ತದೆ.

ಇಂತಹ ಸಂಪ್ರದಾಯ ಬದ್ದವಾಗಿ ನಡೆಯುವಂತಹ ಕೃಷಿ ಪದ್ದತಿಯು ಮುಂದೆಯೂ ನಡೆಯುತ್ತ ಬರಬೇಕು ಎಂದು ಕಬೆತ್ತಿಗುತ್ತು ಮನೆತನದ ಈಗಿನ ಯಜಮಾನ ರಾಗಿರುವ ಮೋಹನ ಪೂಜಾರಿ ಕಬೆತ್ತಿಗುತ್ತು ಅವರು ಹೇಳಿದ್ದಾರೆ.

Article by Sudeep Dsouza, Kinnigoli