ಮೂಡುಬಿದಿರೆ: ಇಂದಿನ ಯುಗದಲ್ಲಿ ಕೃಷಿಯನ್ನು ವೃತ್ತಿಯಾಗಿ ಆಯ್ಕೆ ಮಾಡುವುದು ಕೇವಲ ಪರಂಪರೆಯ ನಿರ್ವಹಣೆಯಲ್ಲ, ಅದೊಂದು ಜಾಣ ಆಯ್ಕೆ ಎಂದು ಸಾವಯವ ಕೃಷಿಕ ಹಾಗೂ ಶಾಸಕ ರಾಜೇಶ್ ನಾಯ್ಕ್ ನುಡಿದರು.
ಅವರು ಆಳ್ವಾಸ್ ಮ್ಯಾನೆಜ್ಮೆಂಟ್ ವಿಭಾಗದ ಟ್ರೆöÊಬ್ಲೇಜ್ ವೇದಿಕೆ ಶುಕ್ರವಾರ, ಕುವೆಂಪು ಹಾಲ್‌ನಲ್ಲಿ ಆಯೋಜಿಸಿದ್ದ ವಿಶೇಷ ಅತಿಥಿ ಉಪನ್ಯಾಸ- ‘ನೆಲದಿಂದ ನೆಲೆವರೆಗೆ: ಕೃಷಿ ಉದ್ಯಮಿಯ ಯಶೋಗಾಥೆ’ ಕರ‍್ಯಕ್ರಮದಲ್ಲಿ ಮಾತನಾಡಿದರು.
ಕೃಷಿಯಲ್ಲಿ ವರ್ಷದಲ್ಲಿ ಕೇವಲ ಎರಡು ತಿಂಗಳು ಶ್ರಮಿಸಿದರೆ, ಉಳಿದ ಹತ್ತು ತಿಂಗಳು ಇತರ ಚಟುವಟಿಕೆಗಳಿಗೆ ಮೀಸಲಿಡಲು ಸಾಧ್ಯ. ಎಲ್ಲಾ ವೃತ್ತಿಗಳಿಗಿಂತಲೂ ಕೃಷಿಯೇ ಹೆಚ್ಚು ಸಂತಸ ಮತ್ತು ತೃಪ್ತಿ ನೀಡುವ ಉದ್ಯೋಗವಾಗಿದೆ ಎಂದು ಅವರು ಹೇಳಿದರು.
ಬಂಜರು ಭೂಮಿಯನ್ನು ಸಮೃದ್ಧ ಕೃಷಿಭೂಮಿಯಾಗಿಸಿದ ಪರಿ ಮಂಗಳೂರಿನ ಸಮೀಪ ಒಡ್ಡೂರಿನಲ್ಲಿರುವ 150 ಎಕರೆ ಬಂಜರು ಭೂಮಿಯನ್ನು ಸಾವಯವ ಕೃಷಿ ತೋಟವನ್ನಾಗಿ ಪರಿವರ್ತಿಸಿದ ಪರಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡರು. ಹಲವಾರು ಸವಾಲುಗಳನ್ನು ಎದುರಿಸಿದರೂ, ನಿರಂತರ ಶ್ರಮ, ಹೋರಾಟ ಮನೋಭಾವ ಮತ್ತು ಸದಾ ಆಶಾವಾದೊಂದಿಗಿನ ಮನಸ್ಥಿತಿಯಿಂದ ಈ ಸಾಧನೆ ಸಾಧ್ಯವಾಯಿತು ಎಂದರು.
ಇತ್ತೀಚೆಗೆ ತಮ್ಮ ಫಾರ್ಮಾಗೆ ಆಗಮಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡದಲ್ಲಿದ್ದ ವಿದ್ಯಾರ್ಥಿಯೊಬ್ಬ ತಮಗೆ ಹಾಕಿದ ಪ್ರಶ್ನೆಗೆ ಉತ್ತರಿಸಿದ ಸಂಧರ್ಭವನ್ನು ಸಭಿಕರೊಂದಿಗೆ ಹಂಚಿಕೊAಡರು. ಕೃಷಿಯಲ್ಲಿ ಯಶಸ್ಸು ಸಾಧಿಸಲು ಕೇವಲ ಭೂಮಿ ಸಾಕಾಗುವುದಿಲ್ಲ. ಅದರೊಂದಿಗೆ ನಿರಂತರ ಪರಿಶ್ರಮ, ನವೀನ ಆಲೋಚನೆ, ಸವಾಲುಗಳನ್ನು ಎದುರಿಸುವ ಮನೋಬಲ ಮತ್ತು ಉದ್ಯಮಶೀಲ ಮನೋಭಾವ ಅಗತ್ಯ. ಬೆಳೆಯ ಬಿತ್ತನೆದಿಂದ ಮಾರುಕಟ್ಟೆ ವಹಿವಾಟು ವರೆಗೆ ಪ್ರತಿಯೊಂದು ಹಂತದಲ್ಲೂ ಸಂಪೂರ್ಣ ತೊಡಗಿಸಿಕೊಂಡರೆ, ರೈತ ತನ್ನ ಆರ್ಥಿಕ ಸ್ಥಿತಿಯನ್ನು ಉನ್ನತ ಮಟ್ಟಕ್ಕೆ ಏರಿಸಬಲ್ಲ ಎಂಬುದಕ್ಕೆ ತಾನೇ ಉತ್ತಮ ಉದಾಹರಣೆ ಎಂದರು.
‘’ಪಾದಗಳಿಗೆ ಹಾಕುವ ಚಪ್ಪಲಿಯನ್ನು ಏರ್‌ಕಂಡೀಷನ್ ಕೊಠಡಿಯಲ್ಲಿ ಮಾರಲಾಗುತ್ತದೆ, ಆದರೆ ಹೊಟ್ಟೆಗೆ ತಿನ್ನುವ ಆಹಾರವನ್ನು ಏಕೆ ಬದಿ ಬೀದಿಯಲ್ಲಿ ಮಾರಲಾಗುತ್ತದೆ?” ಎಂಬ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿ ಕೊಳ್ಳುವವನ ಮನಸ್ಥಿತಿಯೇ ಮುಖ್ಯ. ಜನರು ಕಡಿಮೆ ಬೆಲೆಗೆ ಆಹಾರ ಪದಾರ್ಥಗಳನ್ನು ಪಡೆಯಬೇಕೆಂದು ಬಯಸುತ್ತಾರೆ. ಆದರೆ ಅದನ್ನು ಏರ್‌ಕಂಡೀಷನ್ ಅಂಗಡಿಯಲ್ಲಿ ಮಾರಾಟ ಮಾಡುವುದಾದರೆ, ವೆಚ್ಚ ಹೆಚ್ಚಾಗಿ, ಬೆಲೆಯೂ ಹೆಚ್ಚಾಗುತ್ತದೆ. ಆದ್ದರಿಂದ, ಹೆಚ್ಚು ದುಂದುವೆಚ್ಚವಿಲ್ಲದ ಬದಿ ಬೀದಿಯಲ್ಲೇ ಮಾರಾಟ ಮಾಡುವುದು ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೂ ಅನುಕೂಲಕರವಾಗಿರುತ್ತದೆ ಎಂದು ವಿವರಿಸಿದರು.
ತಾನು ರಾಜಕೀಯಕ್ಕೆ ಬೈ ಚಾನ್ಸ್ ಆಗಮಿಸಿದರೂ, ಸಂಪೂರ್ಣ ಸಮರ್ಪಣಾಭಾವದಿಂದ ಕೆಲಸಮಾಡಿದ ತೃಪ್ತಿ ತನಗಿದೆ. ಇನ್ನೂ ಕೆಲವು ವರ್ಷಗಳು ಸಕ್ರಿಯ ರಾಜಕೀಯದಲ್ಲಿದ್ದು, ಗೌರವಪೂರ್ವಕವಾಗಿ ಈ ಕ್ಷೇತ್ರದಿಂದ ನಿರ್ಗಮಿಸಬೇಕೆಂಬ ಹಂಬಲವಿದೆ ಎಂದರು.
ಕರ‍್ಯಕ್ರಮದ ಅಧ್ಯಕ್ಷತೆವಯಿಸಿ ಮಾತನಾಡಿದ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ದೇಶ ಕಟ್ಟುವ ಕೆಲಸ ಕೃಷಿ ಮೂಲಕ ಸಾಧ್ಯ. ಆಹಾರ ಭದ್ರತೆಯ ಕೊರತೆ ಯಾವುದೇ ರಾಷ್ಟ್ರದ ಪ್ರಗತಿಗೆ ದೊಡ್ಡ ತಡೆ. ಆದ್ದರಿಂದ, ಕೃಷಿ ಉತ್ಪಾದನೆ ಹೆಚ್ಚಿಸಿ, ಸಂಗ್ರಹಣೆ ಮತ್ತು ವಿತರಣೆ ವ್ಯವಸ್ಥೆ ಸುಧಾರಿಸುವ ಮೂಲಕ ಆಹಾರ ಭದ್ರತೆಯನ್ನು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಇಂತಹ ಸಾಧಕರಿಂದ ಪ್ರೇರಣೆಯನ್ನು ಪಡೆದು ಕೃಷಿಯಲ್ಲಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರಬೇಕು ಎಂದರು.
ಕರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಚರ‍್ಯ ಡಾ ಕುರಿಯನ್, ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ವೇದಿಕೆಯ ನಿರ್ದೇಶಕಿ ಸೋನಿ, ವಿದ್ಯಾರ್ಥಿ ಸಂಯೋಜಕರಾದ ನಿರೀಕ್ಷಣ್ ಶೆಟ್ಟಿ ಹಾಗೂ ಇಶಿಕಾ ಅಂಚನ್ ಇದ್ದರು.
ಮಾನಸ ಸ್ವಾಗತಿಸಿ, ಖುಷಿ ಶೆಟ್ಟಿ ನಿರೂಪಿಸಿ, ಸಮೀಕ್ಷಾ ವಂದಿಸಿದರು.