ಮುಂಬಯಿ, ಜ.25: ಯಕ್ಷಗಾನವನ್ನು ಇತರ ಕಲೆಗಳಂತೆ ಸಮಾನ ಮಾಡಲು ಅಸಾಧ್ಯ. ಅದಕ್ಕಾಗಿ ಯಕ್ಷಗಾನದಲ್ಲಿ ತಳಮಟ್ಟದ ಪಾಠದ ಅವಶ್ಯಕತೆಯಿದೆ. ವಿಶ್ವರಂಗಭೂಮಿಯಲ್ಲಿ ಮಿಂಚುತ್ತಿರುವ ಯುಗದಲ್ಲೂ ಪ್ರಯೋಗವಿಲ್ಲದೆ ಯಾವುದೇ ಕಲೆಗಳು ಬದುಕಲಾರವು. ಯಕ್ಷಗಾನಲ್ಲಿ ಒಪ್ಪಂದದ ಅವಶ್ಯಕತೆಯಾಗಬೇಕು ಆದರೆ ಯಕ್ಷಗಾನದ ಪ್ರತ್ಯೇಕತೆಯನ್ನು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಕಳಪೆ ಬಾರದಹಾಗೆ ಕಲೆಯನ್ನು ಬೆಳೆಸಬೇಕು. ಯಕ್ಷಗಾನ ರಂಗಭೂಮಿ, ಸಾಹಿತಿಕ ಹೌದು. ಅದರೆ ನಾಟಕ, ಕೂಚಿಪಡಿಯಂತಲ್ಲ.ಕಲೆಯಲ್ಲಿ ಹೊಸತನವು ಗಂಭೀರ ವಿಷಯವಾಗಿದೆ. ಆದರೆ ಸಂಪ್ರದಾಯಿಕ ಕಲೆಗಳನ್ನು ಆಧುನಿಕವಾಗಿ  ಅಲಂಕರಿಸುವುದು ಸುಲಭವಲ್ಲ ಕರ್ನಾಟಕ ಕರಾವಳಿಯ ಹಿರಿಯ ಯಕ್ಷಗಾನ ಕಲಾವಿದ, ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ತಿಳಿಸಿದರು.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಮೈಸೂರು ಅಸೋಸಿಯೇಶನ್ ಮತ್ತು ಕನ್ನಡಿಗ ಕಲಾವಿದರ ಪರಿಷತ್ ಮಹಾರಾಷ್ಟ್ರ ಇವುಗಳು ಸಂಯುಕ್ತ ಆಶ್ರಯದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಆಯೋಜಿಸಿದ್ದ ಯಕ್ಷಗಾನ ಸಂವಾದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಡಾ| ಜೋಶಿ ಮಾತನಾಡಿದರು.

ಮುಂಬಯಿ ಯಕ್ಷಗಾನ, ರಂಗಭೂಮಿ ಪರಂಪರೆ ಮತ್ತು ಸವಾಲುಗಳು ಸಂವಾದ ಕಾಠ್ಯಕ್ರಮ ವಿಷಯದಲ್ಲಿ ನಡೆಸಲ್ಪಟ್ಟ ಯಕ್ಷಗಾನ ಸಂವಾದ ಗೋಷ್ಠಿಯಲ್ಲಿ ಯಕ್ಷಗಾನ ಪ್ರಸಂಗಗಳು ಮತ್ತು ಹಿಮ್ಮೇಳ ಕುರಿತು ಹೆಸರಾಂತ ಕಲಾವಿದ ಪೊಲ್ಯ ಲಕ್ಷಿ ನಾರಾಯಣ ಶೆಟ್ಟಿ, ತಾಳಮ ದ್ದಳೆ ಕೂಟಗಳು ಮತ್ತು ಅರ್ಥಗಾರಿಕೆ ಕುರಿತು ಕಲಾವಿದ ವಾಸುದೇವ ಶೆಟ್ಟಿ ಮಾರ್ನಾಡ್, ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಪ್ರದರ್ಶನಗಳು ಕುರಿತು ಕನ್ನಡಿಗ ಕಲಾವಿದರ ಪರಿಷತ್ ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ, ಯಕ್ಷಗಾನ ಮಂಡಳಿಗಳು ಮತ್ತು ಪ್ರದರ್ಶನಗಳು ಕುರಿತು ಹಿರಿಯ ಕಲಾವಿದ ದಾಮೋದರ ಶೆಟ್ಟಿ ಇರುವೈಲು ಹಾಗೂ ಮುಂಬಯಿ ಯಕ್ಷಗಾನ ರಂಗಭೂಮಿ ವಿಷಯದ ಕುರಿತು ಕಲಾವಿದ ಡಾ| ವೈ.ವಿ ಮಧುಸೂದನ ರಾವ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಡಾ| ವೈ. ಮಧುಸೂದನ ಅವರು ರಚಿತ ಮುಂಬಯಿ ಯಕ್ಷಗಾನದ ಬಗೆಗಿನ ಮಹಾಪ್ರಬಂಧ ಹಾಗೂ ಕೊಲ್ಯಾರು ರಾಜು ಶೆಟ್ಟಿ ರಚಿತ ಕುಮಾರವ್ಯಾಸದಲ್ಲಿ ಕರ್ಣ ಮತ್ತು ದಾಮೋದರ ಶೆಟ್ಟಿ ಇರುವೈಲ್ ರಚಿಸಿದ ಪುರಾಣದ ನೂರೊಂದು ಶಾಪಗಳು  ಕೃತಿಗಳನ್ನು ಡಾ| ಜೋಶಿ ಬಿಡುಗಡೆ ಗೊಳಿಸಿದರು.

ಹಿರಿಯ ಕಲಾವಿದರುಗಳಾದ ಡಾ| ಬಿ.ಆರ್ ಮಂಜುನಾಥ್, ಕೆ.ಮಂಜುನಾಥಯ್ಯ, ಪ್ರಕಾಶ್ ಪಣಿಯೂರು, ಕೊಲ್ಯಾರು ರಾಜು ಶೆಟ್ಟಿ, ಶಂಕರ ಭಾಗವತ್ ಎಳ್ಳಾರೆ, ನ್ಯಾಯವಾದಿ ಗೀತಾ ಆರ್.ಎಲ್ ಭಟ್, ರಮೇಶ್ ಬಿರ್ತಿ, ಜಗನ್ನಾಥ ಶೆಟ್ಟಿ ಸಾಕಿನಾಕಾ, ಪ್ರಭಾಕರ ದೇವಾಡಿಗ, ಪದ್ಮನಾಭ ಸಿದ್ಧಕಟ್ಟೆ, ಅಶೋಕ ಎಸ್.ಸುವರ್ಣ, ಗಣೇಶ್ ಕುಮಾರ್, ಸುರೇಖಾ ಹೆಚ್.ದೇವಾಡಿಗ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮುಂಬಯಿಯ ಹಿರಿಯ ಯಕ್ಷಗಾನ ಮಂಡಳಿಗಳನ್ನು ಗೌರವಿಸಲಾಗಿದ್ದು, ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್ (೧೯೪೫) ಪರವಾಗಿ ನವೀನ್ ಎಂ.ಪೂಜಾರಿ ಪಡುಇನ್ನಾ, ಶ್ರೀ ಜನಪ್ರಿಯ ಯಕ್ಷಗಾನ ಮಂಡಳಿ (೧೯೫೮) ಪರವಾಗಿ ರವೀಂದ್ರ ಪೈ ಗಂಗೊಳ್ಳಿ, ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ (೧೯೬೭) ಪರವಾಗಿ ಪೊಲ್ಯ ಲಕ್ಷಿ ನಾರಾಯಣ ಶೆಟ್ಟಿ, ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಅಸಲ್ಫಾ (೧೯೬೮) ಪರವಾಗಿ ತುಂಬೆ ರಾಜ ಗೌರವ ಸ್ವೀಕರಿಸಿದರು.  

ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್.ಉಪಾಧ್ಯ ಸ್ವಾಗತಿಸಿ ಪ್ರಸ್ತಾವನೆಗೈದು ಕಲೆ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬಲವರ್ಧನೆಗೆ ಮೈಸೂರು ಅಸೋಸಿಯೇಶನ್ ಕೊಟ್ಟಂತಹ ಕೊಡುಗೆ ಅತ್ಯಂತ ಮಹತ್ವದ್ದು. ಕರ್ನಾಟಕ ಎಂದು ಹೆಸರು ಬಂತು. ಇಂತಹ ಕರ್ನಾಟಕ ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸಿದಂತಹ ಕಲಾಪ್ರಕಾರ ಇಂದೂ ಜೀವಾಳವಾಗಿದೆ. ಯಕ್ಷಗಾನ ಕರ್ನಾಟಕದ ಕರಾವಳಿಗೆ ಮಾತ್ರ ಸೀಮಿತವಾದ ಕಲೆ ಅಲ್ಲ ಇದು ನಾಡಿನ ಕಲೆ, ದೇಶದ ಕಲೆಯಾಗಿದೆ ಎಂದರು.

ಅಪಾರ ಸಂಖ್ಯೆಯ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಹಿರಿಯ ಕಲಾವಿದ, ಸಂಘಟಕ ಜಿ.ಟಿ ಆಚಾರ್ಯ ಮತ್ತು ಮುಂಬಯಿ ವಿವಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸಮನ್ವಯಕರಾಗಿ ಕಾರ್ಯಕ್ರಮ ನಿರೂಪಿಸಿದರು. ಮೈಸೂರು ಅಸೋಸಿಯೆ ಶನ್‌ನ ಗೌರವ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ ವಂದಿಸಿದರು.