ನಗರಗಳು ದೊಡ್ಡದಾದಂತೆ ಜನರು ಜನನಿಬಿಡ ರಸ್ತೆ, ಉರುಟುಗಳನ್ನು ದಾಟಲು ಮೇಲು ಸೇತುವೆ, ಕೆಳ ಹಾದಿ ಇಲ್ಲವೇ ಸುರಂಗ ಮಾರ್ಗಗಳನ್ನು ರಚಿಸುತ್ತಾರೆ. ಅವುಗಳು ಜನೋಪಯೋಗಿ ಅಲ್ಲದೆ ಜ‌ನ ಬಳಕೆಯಾಗದೆ ಹೋಗುವುದಿದೆ.

ಬೆಂಗಳೂರು ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣ ಸಂಪರ್ಕದ ಸುರಂಗ ಮಾರ್ಗ, ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್ ಕಡೆಯಿಂದ ಬರುವ ಸುರಂಗ ಮಾರ್ಗ ಮತ್ತು ಮುಂಬಯಿ ಮೊದಲಾದ ನಗರಗಳ ಕೆಲವು ಕೆಳ ದಾರಿಗಳು ವ್ಯಾಪಾರಿಗಳಿಂದ ತುಂಬಿ ಹೋಗಿರುತ್ತವೆ. 

ಮೇಲು ದಾರಿಗಳಲ್ಲಿ ಕೂಡ ಅಪರೂಪಕ್ಕೆ ವ್ಯಾಪಾರಿಗಳು ಕಾಣಿಸುತ್ತಾರೆ. ಇಲ್ಲಿ ಅವರು ಹೆಚ್ಚಾಗಿ ಮೇಲೇರುವ ಮತ್ತು ಇಳಿಯುವ ಮೆಟ್ಟಿಲುಗಳನ್ನು ಆಯ್ಕೆ ಮಾಡಿಕೊಂಡು ಕೂತಿರುತ್ತಾರೆ.

ಹಾಗೆಯೇ ಕೆಲವು ಇಂತಾ ದಾರಿಗಳು ಬಳಕೆಯಾಗದೆ, ಒಂದೆರಡು ದುರಂತಕ್ಕೆ ಕಾರಣವಾದುದೂ ಇದೆ. 

ಉಡುಪಿಯ ನಗರ ಸಭೆ ಬಳಿ ಹಾಜಿ ಅಬ್ದುಲ್ಲಾ‌ ಹೆರಿಗೆ ಆಸ್ಪತ್ರೆ ಎದುರು ಕಟ್ಟಿರುವ ಮೇಲು ಸೇತುವೆಯನ್ನು ಯಾರೂ ಬಳಸುವುದಿಲ್ಲ. ಒಂದು ದಿನ ಅದರ ಮೇಲೆ ಹೋಗಿ ನೋಡಿದಾಗ ಅಲ್ಲಿ ಹೇಸಿಗೆ ಮಾಡಿರುವುದು ಕಂಡು ಬಂದಿತು.

ಕೆಲವು ಸುರಂಗ ಮಾರ್ಗಗಳಲ್ಲೂ ಜನರು ಹೇಸಿಗೆ ಮಾಡಿದ್ದು ನೋಡಿದ್ದೇನೆ. ಹೆಚ್ಚಿನವಕ್ಕೆ ಕಾವಲುಗಾರರ ನೇಮಕ ಆಗಿದೆ.

ಬೆಂಗಳೂರಿನ ಕೆಂಪೇಗೌಡ ವೃತ್ತದ ಮೇಲು ಸೇತುವೆಯನ್ನು ಜನ ಬಳಸುತ್ತಿರಲಿಲ್ಲ. ಕೊನೆಗೆ ಪೋಲೀಸರು ನಿಂತು ಮೇಲಿನಿಂದ ರಸ್ತೆ ದಾಟುವಂತೆ ಮಾಡಿದರು.

ದುರಂತ ಎಂದರೆ ಬೆಂಗಳೂರು ಶಿವಾಜಿ ನಗರ ಬಸ್ ನಿಲ್ದಾಣದ ಕೆಳ ಸುರಂಗ ಮಾರ್ಗ. ಇದನ್ನು ಯಾರೂ ಬಳಸುತ್ತಿರಲಿಲ್ಲ. ಇಬ್ಬರು ಕಿಡಿಗೇಡಿ ಕಳ್ಳರು ಅಲ್ಲಿ ಅಡಗಿಕೊಂಡು ಅಪರೂಪಕ್ಕೆ ಅಲ್ಲಿ ಬರುವವರನ್ನು ದರೋಡೆ ಮಾಡುತ್ತಿದ್ದರು. ಅದು ಬೆಳಕಿಗೆ ಬಂದ ಮೇಲೆ ಆ ಸುರಂಗ ಮಾರ್ಗವನ್ನು ಮುಚ್ಚಿ ಹಾಕಿದ್ದಾರೆ. 

ಮಂಗಳೂರಿನಲ್ಲಿ ವಾಹನ ಮೇಲ್ಸೇತುವೆ ಇವೆ. ಜನ ದಾಟುವ ಮೇಲ್ಸೇತುವೆ ರೈಲು ನಿಲ್ದಾಣಗಳಲ್ಲಿ ಮಾತ್ರ ಇವೆ. 

ಜ್ಯೋತಿ ಬಳಿ ಕೊರೆದ ಕಣಿವೆಯ ಮೇಲೆ ಒಂದು ಪುಟ್ಟ ಜನ ದಾಟುವ ಕಾಸಗಿ ಮೇಲ್ಸೇತುವೆ ಇದೆ. 

ಈಗ ತಾಲೂಕು ಕಚೇರಿ ಕಡೆಯಿಂದ ಪುರಭವನ ಹಾದು, ಮಾರುಕಟ್ಟೆಯತ್ತ ಹೋಗಲು ಕೆಳ ದಾರಿ ಸುರಂಗ ಮಾರ್ಗ ತಯಾರಾಗಿದೆ. ಅದಿನ್ನೂ ಉದ್ಘಾಟನೆ ಆಗಿಲ್ಲ. 

ವಾಹನಗಳು ಹೋಗಲು ಕೆಲವೆಡೆ ಅಂಡರ್ ಪಾಸ್‌ಗಳು ಇವೆ. ಇದನ್ನು ಪತ್ರಿಕೆಗಳಲ್ಲಿ ಕೆಲವರು ಕೆಳ ಸೇತುವೆ ಎಂದು ಬರೆಯುವುದು ಜ್ಞಾನ ದೋಷ. ಅದು ಕೆಳ ದಾರಿಯೇ ಹೊರತು ಕೆಳ ಸೇತುವೆ ಅಲ್ಲ.