ಮಹಲ್‌ಗಳು, ವಿಲಾಸಗಳು, ಭವನಗಳು ಎಂದು ಆರಡಿಯ ಹೋಟೆಲ್ ಕೂಡ ಕರೆಸಿಕೊಂಡ ಕಾಲಗಳು ಹೋಗಿ ಇಂದು ತೊಡು ಬಡವು ತಲುಪಿ ಮುಂದುವರಿದಿದೆ.

ಸಾಗರವು ಹೋಟೆಲ್ ಲೋಕದಲ್ಲಿ ದೊಡ್ಡ ಅಲೆ ಬೀಸಿ ಈಗಲೂ ಅಲೆಯಲೆಯಾಗಿ ಸಾಗರಗಳು ಉಳಿದಿವೆ.

ಇತ್ತೀಚೆಗೆ ಚಿತ್ರವಿಚಿತ್ರ ಆದರೂ ಅರ್ಥಪೂರ್ಣ ಹೆಸರು ಇಡುವುದನ್ನು ನಮ್ಮವರೂ ಕಲಿತುಕೊಂಡಿದ್ದಾರೆ. ಪಾಶ್ಚಾತ್ಯರಲ್ಲಿ ಇದು ಬಹು ಹಿಂದೆಯೇ ಆರಂಭವಾಗಿತ್ತು.

ಬೆಂಗಳೂರಿನ ಮೊದಲ 25 ಮಹಡಿಯ ಕಟ್ಟಡದ ಮೇಲೆ ಮೂರು ದಶಕದ ಹಿಂದೆಯೇ ಟಾಪ್‌ಕಾಫಿ ಎಂಬ ಹೋಟೆಲ್ ಆರಂಭವಾಗಿತ್ತು. ನಾವು ಆಗ ತಿಳಿದುಕೊಂಡುದು ಕಟ್ಟಡದ ಟಾಪ್‌ನಲ್ಲಿ ಕಾಫಿ ಒದಗಿಸುವ ಹೋಟೆಲ್ ಎಂದು. ಅನಂತರ ತಿಳಿಯಿತು ಟಾಪ್‌ಕಾಫಿ ಎಂಬುದು ಫ್ರಾನ್ಸಿನ ಒಂದು ಕೋಟೆಮನೆಯ (ಕ್ಯಾಸಲ್) ಹೆಸರು ಎಂದು.

ಹಿಂದೂಸ್ತಾನ್ ಇತ್ಯಾದಿ ಹೆಸರಿನ ಹೋಟೆಲ್‌ಗಳು ಇದ್ದರೆ ಅದು ಮುಸ್ಲಿಮರದು. ಹಿಂದೂಗಳು ಆ ಹೆಸರಿನಲ್ಲಿ ಅಂಗಡಿ ಮುಂಗಟ್ಟು ಇಟ್ಟುದು ಕಡಿಮೆ. ಈಗೆಲ್ಲ ಇಂಡಿಯನ್ ಆಹಾರದ ಹೋಟೆಲ್‌ಗಳು ಜಗತ್ತಿನ ಎಲ್ಲ ಕಡೆ ಇವೆ.

ಉಡುಪಿಯ ಕೆಎಸ್‌ಆರ್‌ಟಿಸಿ ಸಿಟಿ ಬಸ್ ನಿಲ್ದಾಣದಲ್ಲಿ ಒಂದು ಹೋಟೆಲ್ ಆರಂಭವಾಗಿದೆ. ಅದರ ಹೆಸರು ತೊಡು ಬಡವು. ಅಚ್ಚ ತುಳುವಿನ ಹೆಸರು. 

ಹೋಟೆಲ್ ಒಳ ಹೋಗಲು ಒಂದು ಬಾಗಿಲು‌ ದ್ವಾರ ಮಾಡಿದ್ದಾರೆ. ಹಿಂದಿನ ಕಾಲದ ಕೆತ್ತನೆಯ ಎರಡು ಕಂಬದ ನಡುವೆ ತೋರಣದಂತೆ ಊರಿನ ಸೌತೆಕಾಯಿ ನೇತು ಹಾಕಿದ್ದಾರೆ.

ಒಂದು ಕಾಲದಲ್ಲಿ ಸಾಂಬಾರು ಸೌತೆ ಎಂಬ ಇದನ್ನು ನೇತು ಹಾಕಿ ದೀರ್ಘ ಕಾಲ ಕಾದಿಡುವ ಪದ್ಧತಿ ಇತ್ತು. ಇಂದು ಎಲ್ಲೆಡೆ ಅಂಗಡಿ, ಮಾರುಕಟ್ಟೆ ಇರುವುದರಿಂದ ನೇತು ಹಾಕಿ ಇಡುವವರು ಇಲ್ಲ.

ಆದರೆ ಈ ತೊಡು ಬಡವು ಹೋಟೆಲ್ ಹೆಸರಿನೊಂದಿಗೆ ಒಳ ಹೋಗುವಲ್ಲೂ ಒಂದು ಹಳೆಯ ಸಂಪ್ರದಾಯವನ್ನು ಹೊಸದರೊಂದಿಗೆ ಹೆಣೆದುಕೊಂಡಿದೆ.