ಮುಂಬಯಿ, ಜು.09: ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನ ಹಾಗೂ ಭವನದಲ್ಲಿನ ಗುರು ನಾರಾಯಣ ಮಂದಿರ, ಸಭಾಗೃಹದಲ್ಲಿ ಕಳೆದ ಸುಮಾರು ಎರಡುವರೆ ದಶಕಗಳಿಂದ ಗೃಹಸೇವಕಿಯಾಗಿ ಸೇವೆ ನಿರ್ವಾಹಿಸುತ್ತಾ ಸ್ವಯಂ ನಿವೃತ್ತಿ ಹೊಂದಿದ್ದ ಜ್ಯೋತಿ ಸುವರ್ಣ (46.) ಬುಧವಾರ ಮುಂಜಾನೆ ಅಲ್ಪಕಾಲದ ಅಸ್ವಸ್ಥತೆಯಿಂದ ಉಡುಪಿ ಮಣಿಪಾಲದಲ್ಲಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಓರ್ವ ಪ್ರತಿಭಾನ್ವಿತ ಕಲಾಸಂಪನ್ನೆಯಾಗಿದ್ದ ಜ್ಯೋತಿ ಅವರು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಎಲ್ಲಾ ಸಭೆ, ಕಾರ್ಯಕ್ರಮಗಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಇಲ್ಲಿನ ಧಾರ್ಮಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಮಾನವೀಯ ಮೌಲ್ಯಗಳೊಂದಿಗೆ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸ್ನೇಹಪರ ವನಿತೆಯಾಗಿದ್ದರು. ಅಪಾರವಾದ ಶ್ರಮಜೀವಿಯಾಗಿದ್ದು ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿ ಏಣಗುಡ್ಡೆ ಕಮಲಾ ನಿವಾಸ ನಿವಾಸಿಯಾಗಿದ್ದ ಮೃತರು ಇಬ್ಬರು ಸುಪುತ್ರರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದಿಲ್ಲಿ ಏಣಗುಡ್ಡೆ ನಿವಾಸದಲ್ಲಿ ನೆರವೇರಿಸಲ್ಪಟ್ಟಿತು.
ಜ್ಯೋತಿ ಸುವರ್ಣ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮತ್ತು ಸದಸ್ಯರು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿೂನ್, ಗೌರವಾಧ್ಯಕ್ಷ ಎಲ್.ವಿ ಅಮೀನ್, ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ್ ಎಸ್.ಪೂಜಾರಿ, ನಿತ್ಯಾನಂದ ಡಿ.ಕೋಟ್ಯಾನ್, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಲಕ್ಷ ್ಮಣ್ ಸಿ.ಪೂಜಾರಿ ಚಿತ್ರಾಪು, ಬಿಸಿಸಿಐ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಮೋಹಿನಿ ವಿ.ಆರ್ ಕೋಟ್ಯಾನ್, ಸಿಎ| ಅಶ್ವಜಿತ್ ಹೆಜ್ಮಾಡಿ, ಸಂಜೀವ ಪೂಜಾರಿ ತೋನ್ಸೆ ಸೇರಿದಂತೆ ನೂರಾರು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.