ಮೂಡಬಿದ್ರೆ: ಅತ್ಯುತ್ತಮ ಶಿಕ್ಷಣದ ಜೊತೆ ಉದ್ಯೋಗಾರ್ಹತೆ ಮತ್ತು ಜೀವನ ಕೌಶಲ್ಯಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಪಣ ತೊಟ್ಟ ಶ್ರೀ ಮಹಾವೀರ ಕಾಲೇಜು (SMC), ತನ್ನ ವಿವಿಧ ಪದವಿ ವಿಭಾಗಗಳ ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಿ ಹೊಸ ಮೈಲಿಗಲ್ಲನ್ನು ಈ ವರ್ಷ ಸ್ಥಾಪಿಸಿದೆ.

ಈ ಅಪೂರ್ವ ಸಾಧನೆಯ ಆಚರಣೆಗೆ, SMC ಮೈಲೋನ್ ಡೇ ಎಂಬ ವಿಶೇಷ ಕಾರ್ಯಕ್ರಮವನ್ನು ಕಾಲೇಜು ಆಯೋಜಿಸಿತು.

ಎಸ್‌ಎಂಸಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಸಂಪತ್ ಸಾಮ್ರಾಜ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, "ಈ ಸಾಧನೆ ಕಾಲೇಜಿನ ಇತಿಹಾಸದಲ್ಲೇ ಅಭೂತಪೂರ್ವ" ಎಂದು ವರ್ಣಿಸಿದರು ಮತ್ತು ಯಶಸ್ಸಿಗೆ ಕಾರಣರಾದ ಎಲ್ಲ ವಿದ್ಯಾರ್ಥಿಗಳು, ಅಧ್ಯಾಪಕರು, ಹಳೆ ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿದ್ದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ತಿ), ಮಾಹೆಯ ಪ್ಲೇಸ್ಮಂಟ್ ಮತ್ತು ಕಾರ್ಪೊರೇಟ್ ಎಂಗೇಜೆಂಟ್ನ ಅಧ್ಯಕ್ಷರಾದ ಡಾ. ಗುರುದತ್ ನಾಯಕ್, ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸುವಲ್ಲಿ ಶ್ರೀ ಮಹಾವೀರ ಕಾಲೇಜು ಕೈಗೊಂಡಿರುವ ಮುಂಚೂಣಿಯ ಉಪಕ್ರಮಗಳನ್ನು ಶ್ಲಾಘಿಸಿ "ನಮ್ಮ ಮಾಹೆ ಪರಿವಾರದ ಸಂಸ್ಥೆಯಾದ ಎಸ್‌ಎಂಸಿಯನ್ನು ಬೆಂಬಲಿಸಲು ಟ್ಯಾಪ್ಯ ಸದಾ ಸಿದ್ದ" ಎಂದು ಹೇಳಿದರು.

ಈ ವರ್ಷದ ಉದ್ಯೋಗ ಮೇಳ ನಿಯೋಜನೆಯ ಅತ್ಯುತ್ತಮ ಕಾರ್ಯಕ್ಷಮತೆಗೆ ಕಾಲೇಜಿನ ಹಳೆಯ ವಿದ್ಯಾರ್ಥಿ ಶ್ರೀ ಸಂಜಯ್ ಭಟ್ ಅವರು ನೀಡಿದ ಮಾರ್ಗದರ್ಶನ, ಡಾ. ಗುರುದತ್ ನಾಯಕ್ ಟ್ಯಾಪ್ತಿ (TAPMI) ಅವರ ಸಲಹೆಗಳು ಮತ್ತು ಹಳೆ ವಿದ್ಯಾರ್ಥಿಗಳಾದ ಶ್ರೀ ಮುಸ್ತಾಕ್ ಅಹ್ಮದ್ ಮತ್ತು ಶ್ರೀ ಬಿ. ನಾಗರಾಜ್ ಅವರು ವಿದ್ಯಾರ್ಥಿಗಳಿಗೆ ಒದಗಿಸಿದ ಸಂದರ್ಶನ ತರಬೇತಿಗಳನ್ನು ಪ್ರಶಂಸಿಸಿ ಗೌರವಿಸಲಾಯಿತು.

ತಮ್ಮ ಭಾಷಣದಲ್ಲಿ, ಪ್ರಾಂಶುಪಾಲ ಡಾ. ರಾಧಾಕೃಷ್ಣ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಿದರು:

ಜೂನ್ 2 ರಿಂದ ಹೊಸದಾಗಿ ಪ್ರವೇಶ ಪಡೆದ ಪದವಿ ವಿದ್ಯಾರ್ಥಿಗಳಿಗಾಗಿ ಬ್ರಿಡ್ಜ್ ಕೋರ್ಸ್ ಅನ್ನು ಕಾಲೇಜು ಪ್ರಾರಂಭಿಸುತ್ತದೆ. ಈ ಕಾರ್ಯಕ್ರಮವು ಇಂಗ್ಲೀಷ್ ಸಂಭಾಷಣೆಯ ಕೌಶಲ್ಯ, ಎಂಎಸ್ ಎಕ್ಸೆಲ್ ಪ್ರಾವೀಣ್ಯತೆ ಮತ್ತು ಉದ್ಯೋಗ-ಸಿದ್ಧತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಅರ್ಹ ವಿದ್ಯಾರ್ಥಿಗಳನ್ನು ಬೆಂಬಲಿಸಲು ಬ್ರಿಡ್ಜ್ ಕೋರ್ಸ್ ಸಮಯದಲ್ಲಿ ಕೂಡ ಉಚಿತ ಮಧ್ಯಾಹ್ನದ ಊಟವನ್ನು ಒದಗಿಸಲಾಗುತ್ತದೆ ಎಂದರು.

ಕಾಲೇಜು ತನ್ನ 61 ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಸಲುವಾಗಿ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ SMC ಯ ಅಚಲ ಧೇಯವನ್ನು ಡಾ. ರಾಧಾಕೃಷ್ಣ ಪುನರುಚ್ಚರಿಸಿದರು.

ಇದೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಲ್ಲಿ ಆರ್ಥಿಕ ಸಾಕ್ಷರತೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದ SMC ಫೈನಾನ್ಸಿಯಲ್ ಫ್ರೀಡಂ ಕ್ಲಬ್‌ನ ಲಾಂಛನವನ್ನು ಅನಾವರಣಗೊಳಿಸಲಾಯಿತು.

ಪಿಯು ಕಾಲೇಜು ಪ್ರಾಂಶುಪಾಲರಾದ ಪ್ರೊ. ರಮೇಶ್ ಭಟ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಪ್ರೊ. ಹರೀಶ್, ಮತ್ತು ಉದ್ಯೋಗ ನಿಯೋಜನೆಗಳ ಅಧ್ಯಾಪಕ ಸಂಯೋಜಕರಾದ ಪ್ರೊ. ಸವಿತಾ ಕೋಟ್ಯಾನ್ ಮತ್ತು ಡಾ. ಹರೀಶ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಶ್ರೇಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಶ್ರುತಿ ಎಸ್. ಪೆರಿ ಸ್ವಾಗತಿಸಿದರು, ಅನನ್ಯಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ. ರಾಧಾಕೃಷ್ಣ ಧನ್ಯವಾದ ಸಮರ್ಪಿಸಿದರು.