ಸಚಿತ್ರ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ.
ಮೂಡುಬಿದಿರೆ: ಮೂಡುಬಿದಿರೆ ಜೈನ ಕಾಶಿ ಎಂದೇ ಪ್ರಖ್ಯಾತವಾದ ಊರು. ದೇಶ ವಿದೇಶಗಳಿಂದ ನಾಗರಿಕರ ಇಲ್ಲಿಯ 18 ಬಸದಿ, 18 ದೇವಾಲಯಗಳು, 18 ಕೆರೆಗಳ ವೀಕ್ಷಣೆಗೆ ಸದಾ ಬಂದು ಹೋಗುತ್ತಿರುತ್ತಾರೆ. ಇಂತಹ ಜೈನ್ ಪೇಟೆಯ ಪರಿಸರದಲ್ಲಿ ಜೈನಮಠ ಹಾಗೂ ಇತರ 18 ಬಸದಿಗಳು ಇವೆ. ಈ ಬಸದಿಗಳಿಗೆ ಸಾಮಾನ್ಯವಾಗಿ ಯಾತ್ರಾರ್ಥಿಗಳು ಪ್ರತಿದಿನವೂ ಸಂದರ್ಶಿಸಿ ಕೃತಾರ್ಥವಾಗುವ ಪ್ರದೇಶವಾಗಿರುತ್ತದೆ.
ಮೊದಲೇ ಅಗಲ ಕಿರಿದಾದ ರಸ್ತೆಯನ್ನು ಹೊಂದಿದ್ದು ಕೆಲವಾರು ಬಾರಿ ಗಂಟೆಗಟ್ಟಲೆ ರಸ್ತೆ ತಡೆ ಅಥವಾ ಟ್ರಾಫಿಕ್ ಜಾಮ್ ನಿಂದ ಜನರು ಒದ್ದಾಡುತ್ತಿದ್ದಾರೆ. ಈ ರೀತಿ ಇರುವಾಗ ಇನ್ನಷ್ಟು ವಾಣಿಜ್ಯ ಕಟ್ಟಡಗಳು ಇದೇ ಪ್ರದೇಶದಲ್ಲಿ ಕಟ್ಟಲ್ಪಟ್ಟಲ್ಲಿ ಟ್ರಾಫಿಕ್ ಜಾಮ್ ನಿಂದ ಜನರು ಹಾಗೂ ವಾಹನಿಗರು ಹೈರಾಣ ಆಗದೆ ಇರಲು ಸಾಧ್ಯವೇ?
ಈಗಾಗಲೇ ರಸ್ತೆಯ ಅಗಲೀಕರಣಕ್ಕೆ ಒಪ್ಪಿಗೆ ಸಿಗದ ಕಾರಣ ರಾಷ್ಟ್ರೀಯ ಹೆದ್ದಾರಿಯು ದೂರದ ಅಲಂಗಾರಿನಿಂದ ಮುಂದುವರೆಯುತ್ತಿದೆ. ಅಷ್ಟಾಗಿಯೂ ರಾಜ್ಯ ಹೆದ್ದಾರಿ ಈಗಲೂ ಅಲಂಗಾರಿನಿಂದ ಜೈನಪೇಟೆ, ಬೆಟಿಗೇರಿ, ಜ್ಯೋತಿನಗರ, ರತ್ನಾಕರವರ್ಣಿ ನಗರಗಳ ಮೂಲಕ ಮುಂದುವರೆಯುತ್ತಿರುವುದರಿಂದ ಇತ್ತೀಚೆಗೆ ಜೈನಪೇಟೆ, ಕಲ್ಸಂಕ, ಹಳೆ ಪೊಲೀಸು ಠಾಣೆ, ಜಿ ವಿ ಪೈ ಆಸ್ಪತ್ರೆ, ನಾಗರಕಟ್ಟೆ ಇತ್ಯಾದಿ ಎಲ್ಲ ಪ್ರದೇಶಗಳಲ್ಲೂ ಹಲವಾರು ಬಾರಿ ಬೆಳಗ್ಗೆ, ಮಧ್ಯಾಹ್ನ ಸಂಜೆಯ ಹೊತ್ತು ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು, ವಾಹನಿಗರು ಅತ್ಯಂತ ಹೆಚ್ಚು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ನಾಗರಿಕರು ಪೊಲೀಸು ಠಾಣೆಗೆ ಹಲವಾರು ಬಾರಿ ದೂರನ್ನು ನೀಡಿರುತ್ತಾರೆ.
ಪರಿಸ್ಥಿತಿ ಹೀಗಿರುವಾಗ ಪುರಸಭೆ, ಮೂಡಾ, ಪೊಲೀಸ ಇಲಾಖೆ, ರಾಜ್ಯ ಹೆದ್ದಾರಿ ಪ್ರಾಧಿಕಾರಗಳು ಈ ಅಗಲಕಿರಿದಾದ ರಸ್ತೆಯ ಬದಿಯಲ್ಲಿ ಇನ್ನಷ್ಟು ವಾಣಿಜ್ಯ ಕಟ್ಟಡಕ್ಕೆ ಪರವಾನಿಗೆಯನ್ನು ಹೇಗೆ ನೀಡುತ್ತಿದ್ದಾರೆ? ರಸ್ತೆಯಿಂದ ಕನಿಷ್ಠ 30 ಮೀಟರ್ ಪ್ರದೇಶವನ್ನು ಬಿಟ್ಟು ವಾಣಿಜ್ಯ ಕಟ್ಟಡವನ್ನು ಕಟ್ಟಲು ಪರವಾನಿಗೆ ದೊರೆಯುತ್ತದೆ. ಆದರೆ ಅಲ್ಲಿಗೆ ಬರುವ ವಾಹನಗಳನ್ನು ಎಲ್ಲಿ ನಿಲ್ಲಿಸುತ್ತಾರೆ? ಈಗಾಗಲೇ ಮಹಾವೀರಭವನ ಹಾಗೂ ಎದುರು ಕಟ್ಟಲಾಗಿರುವ ವಾಣಿಜ್ಯ ಕಟ್ಟಡದವರ ವಾಹನಗಳಿಂದ,ಹಳೆ ಪೊಲೀಸ್ ಠಾಣೆ ಹತ್ತಿರ ಅಗಲಗೊಳಿಸಿದರೂ ಕೆಲವಾರು ಬಾರಿ.ಜಿ.ವಿ.ಪೈ.ಆಸ್ಪತ್ರೆ ಪ್ರದೇಶದಲ್ಲಿ,ಅಂಚೆ ಇಲಾಖೆಯ ಎದುರು, ಕೆನರಾ ಬ್ಯಾಂಕ್ ನ ಎದುರು ಇತ್ಯಾದಿ ಹೆಚ್ಚಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿರುವಾಗ ಇನ್ನಷ್ಟು ಟ್ರಾಫಿಕ್ ಜಾಮ್ ಗೆ ಈಡಾಗಲು ಈ ಪ್ರದೇಶದ ಜನರಿಗೆ ಆಸಕ್ತಿ ಇದೆಯೇ?
ಈ ನಡುವೆ ಮೂಡುಬಿದರೆಯ ಪೇಟೆಯ ಎಲ್ಲ ಮಂದಿಯೂ ಹಿಂದಿನ ಪೊಲೀಸ್ ಠಾಣಾಧಿಕಾರಿಯಾಗಿ ಹೆಸರು ಮಾಡಿದ್ದ ಶ್ರೀಮತಿ ಭಾರತೀಯವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಭಾರತಿ ಮೇಡಂ ರವರು ಕಾರ್ಯನಿರ್ವಹಿಸುತ್ತಿದ್ದಾಗ ಇಡೀ ಮೂಡುಬಿದಿರೆಯ ರಾಜ್ಯ ಹೆದ್ದಾರಿಯ ಯಾವುದೇ ಬದಿಯಲ್ಲಿಯೂ ಕೂಡ ವಾಹನಗಳು ನಿಲ್ಲಿಸಲ್ಪಡುತ್ತಿರಲಿಲ್ಲ. ಎಲ್ಲ ವಾಹನಗಳೂ ಒಳ ರಸ್ತೆಯ ಬದಿಗಳಲ್ಲಿ ಇದ್ದು ಪ್ರತಿಕ್ಷಣವೂ ಸುಗಮ ಸಂಚಾರ ಎಗ್ಗಿಲ್ಲದೆ ನಡೆಯುತ್ತಿತ್ತು. ಆದರೆ ಆ ತರುವಾಯ ಠಾಣೆ ಮೇಲ್ದರ್ಜೆಗೆ ಏರಿ ಸರ್ಕಲ್ ಕಚೇರಿ ಮೂಡುಬಿದಿರೆ ಠಾಣೆಗೆ ಬಂದರೂ ಕೂಡ ಶ್ರೀಮತಿ ಭಾರತೀಯವರಂತೆ ಕಡಕ್ ಅಧಿಕಾರಿಗಳನ್ನು ಹೊಂದದ ಕಾರಣ ಟ್ರಾಫಿಕ್ ಜಾಮ್ ಮೂಡುಬಿದಿರೆಯಲ್ಲಿ ಮಾಮೂಲಿಯಾಗಿಬಿಟ್ಟಿದೆ. ಇನ್ನಾದರೂ ಪೊಲೀಸು ಠಾಣೆಯ ಅಧಿಕಾರಿಗಳು, ಪುರಸಭಾ ಅಧಿಕಾರಿಗಳು, ಮೂಡಾ ದ ಅಧ್ಯಕ್ಷ ರು, ಅಧಿಕಾರಿಗಳು, ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ರಾಜ್ಯ ಹೆದ್ದಾರಿಯ ಬದಿಯ ಎಲ್ಲ ಪ್ರದೇಶವನ್ನು ಸಮರ್ಪಕವಾಗಿ ಒಳಚರಂಡಿ ಸಮೇತ ಸರಿ ಪಡಿಸಿ ಉತ್ತಮ ಹಾಗೂ ಸುಗಮ ಸಂಚಾರಕ್ಕೆ ಮುಕ್ತಗೊಳಿಸಬೇಕಾಗಿ ಮೂಡುಬಿದಿರೆಯ ಮಂದಿ ಆಶಿಸುತ್ತಿದ್ದಾರೆ.