ಯೋಗ ಭಾರತೀಯ ಸಂಸ್ಕೃತಿಯ ಹೆಮ್ಮೆ. ವರ್ಷದ ಅತೀ ದೀರ್ಘ ದಿನವಾದ, ಅಥವಾ ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾದ ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ.

ಮೊದಲು ಆದಿಯೋಗಿಯಾದ  ಶಿವ ಯೋಗವನ್ನು ಸಪ್ತರ್ಷಿಗಳಿಗೆ ಬೋಧಿಸಿದರೆಂದು, ನಂತರ ಯೋಗವೆಂಬುದು ಅಸ್ತಿತ್ವಕ್ಕೆ ಬಂತು ಎಂದು ಹೇಳಲಾಗುತ್ತದೆ. ಆನಂತರ ಆದಿಶೇಷ ಯೋಗದ ವಿಸ್ತಾರತೆಯನ್ನು ತಿಳಿಯುವ ಸಲುವಾಗಿ, ಮತ್ತು ಜಗತ್ತಿಗೆ ತಿಳಿಸುವ ಸಲುವಾಗಿ ಪತಂಜಲಿ ಮಹರ್ಷಿಯಾಗಿ ಜನ್ಮವೆತ್ತಿ ಯೋಗಾಭ್ಯಾಸ ಮಾಡಿ ಭೂಮಿಯಲ್ಲಿ ಯೋಗದ ಮಹತ್ವವನ್ನು ಸಾರಿದರು ಎಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿದೆ. ಆದ್ದರಿಂದಲೇ ಪತಂಜಲಿ ಮಹರ್ಷಿಯನ್ನು ಯೋಗದ ಪಿತಾಮಹ ಎಂದು ಕರೆಯುತ್ತಾರೆ.

ಯೋಗ ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಲು ನಮ್ಮ ಮನಸ್ಸು ಮತ್ತು ದೇಹವನ್ನು ಸಜ್ಜುಗೊಳಿಸುವ ಅತ್ಯುತ್ತಮ ಸಾಧನ. ಯೋಗದ ನಿರಂತರ ಅಭ್ಯಾಸದಿಂದ ದೇಹ ಸದೃಢಗೊಳ್ಳುತ್ತದೆ ಮತ್ತು ದೇಹ ಸ್ಥಿರವಾದರೆ ಮನಸ್ಸು ಧ್ಯಾನಕ್ಕೆ ಸಹಕರಿಸುತ್ತದೆ. ಧ್ಯಾನ ಆತ್ಮ ಮತ್ತು ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ಇರುವ ಸುಲಭ ಮಾರ್ಗ. ' ಮನಯೇವ ಮನುಷ್ಯಾಣಾಂ ಕಾರಣಯೋ ಬಂಧನ ಮೋಕ್ಷಯಃ ' (ಯಾವುದೇ ಬಂಧನಕ್ಕೂ ಮತ್ತು ಮೋಕ್ಷಕ್ಕೂ ಮನಸ್ಸೆ ಕಾರಣ).

ಜೀವನ್ಮರಣಗಳ ಸರಪಳಿಯಿಂದ ಪಡೆಯುವ ಮುಕ್ತಿಯೇ ಮೋಕ್ಷ. ಮತ್ತು ' ಯೋಗೋ ಉಪಾಯ ಉದ್ದಿಷ್ಟಃ ' (ಮೋಕ್ಷಕ್ಕೆ ಉತ್ತಮ ಉಪಾಯ ಯೋಗ).

ಆಧ್ಯಾತ್ಮಿಕ ಪಥದಲ್ಲಿ ಯೋಗವೇ ಮೂಲ. ಆತ್ಮ ನೊಂದಿಗೆ ಪರಮಾತ್ಮನನ್ನು ಸೇರಿಸುವ ಸೇತುವೆ. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಹೆಮ್ಮೆ ನನ್ನ ದೇಶದ್ದು. ಜಗತ್ತಿನ ಜನರ ಸ್ವಾಸ್ಥ್ಯದ ದೃಷ್ಟಿಯಲ್ಲಿ ಯೋಗವನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದು, ನನ್ನ ಭಾರತದ ದೊಡ್ಡ ಮೈಲಿಗಲ್ಲು. ನಮ್ಮ ಆಚರಣೆಗಳು, ಸಂಸ್ಕೃತಿ, ಪರಂಪರೆಯೇ ಭಾರತವನ್ನು ವಿಶ್ವಗುರುವಾಗಿಸಿದ್ದು. ಜಗತ್ತಿನಲ್ಲಿ ನಾಗರಿಕತೆ ಅಂಬೆಗಾಲಿಡುತ್ತ ತೆವಳುತ್ತಿರುವಾಗ, ಭಾರತದ ಸಂಸ್ಕೃತಿ ಎದ್ದು ನಡೆಯುತ್ತಿತ್ತು. ವಿಶ್ವಕ್ಕೆ ಭಾರತದ ಕೊಡುಗೆ ಅಪಾರ. ಅದರಲ್ಲಿ ಯೋಗ ಮೇರುಶಿಖರ.

ಯೋಗ ಬಲ್ಲವನು ಯೋಗಿಯಾಗಬಲ್ಲ ಎಂಬಂತೆ, ಯೋಗ ಅನೇಕ ರೀತಿಯ ರೋಗಗಳನ್ನು ದೂರವಿಟ್ಟು ನಮ್ಮ ದೇಹವನ್ನು ಮತ್ತು ಮನಸ್ಸನ್ನು ಕಾಪಾಡುತ್ತದೆ. ಇನ್ನೂ ಯೋಗದ ಸಾಧನೆಯಲ್ಲಿ ಆಳವಾಗಿ ಇಳಿದಾಗ ಸೃಷ್ಟಿಯ ರಹಸ್ಯ ಬಯಲಾಗುತ್ತಾ ಹೋಗುತ್ತದೆ, ಮನಕ್ಕೆ ಕವಿದ ಮಬ್ಬು ಕರಗಿ, ಜ್ಞಾನದ ಮಾರ್ಗ ಗೋಚರವಾಗುತ್ತದೆ. ಯೋಗಿಗಳು ತಮ್ಮ ಕಠಿಣ ಸಾಧನೆಗೆ ಆರಿಸಿಕೊಳ್ಳುವ ಮಾರ್ಗ ಯೋಗ.

ಪತಂಜಲಿ ಮಹರ್ಷಿಗಳ ಪ್ರಕಾರ ಯೋಗ ಎಂದರೆ ' ಯೋಗಶ್ಚಿತ್ತ ವೃತ್ತಿ ನಿರೋಧಃ '  (ಚಿತ್ತವೃತ್ತಿಯನ್ನು ನಿರೋಧಿಸುವುದು) ಯೋಗದ ಉದ್ದೇಶ ಎನ್ನುತ್ತಾರೆ. ಇಂತಹ ಅದ್ಭುತ ಇತಿಹಾಸವಿರುವ ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಕರ ಜೀವನವನ್ನು ಸಂಭ್ರಮಿಸೋಣ. ' ನೈಜ ಸುಖಾನುಭೂತಿಃ ' ಎಂಬಂತೆ ನಿಜವಾದ ಸುಖಾನುಭೂತಿ ಹೊಂದೋಣ.

ಯೋಗ ದಿನಾಚರಣೆಯ ಶುಭಾಶಯಗಳು.


- ಪಲ್ಲವಿ ಚೆನ್ನಬಸಪ್ಪ

(ಗಡೀಹಳ್ಳಿ. ಚಿಕ್ಕಮಗಳೂರು)