ಕರ್ನಾಟಕ ಸಾಹಿತ್ಯ ಅಕಾಡೆಮಿ ಇತ್ತೀಚಿಗೆ ಹೊರತಂದಿರುವ "ಸ್ವಾತಂತ್ರ ಹೋರಾಟದಲ್ಲಿ ಕರ್ನಾಟಕ ಕೇಂದ್ರ ಮೈದಾನ " ಎಂಬ ಪುಸ್ತಕದಲ್ಲಿ ಮಂಗಳೂರು ನೆಹರೂ ಮೈದಾನವನ್ನು ಕೇಂದ್ರ ಮೈದಾನ ಎಂದು ಬರೆದಿರುವುದು ದುರದೃಷ್ಟಕರವಾಗಿದೆ.

ಬಿಜೆಪಿ ಯು ನಿರಂತರವಾಗಿ ಭಾರತದ ಸ್ವಾತಂತ್ರ ಹೋರಾಟಗಾರರು, ಹಾಗೂ ದೇಶದ ಪ್ರಥಮ ಪ್ರಧಾನಿ ದಿ. ಪಂಡಿತ್ ಜವಾಹರಲಾಲ್ ನೆಹರೂ ರವರ ಹೆಸರು ಮಂಗಳೂರಿನ ಮುಖ್ಯ ಮೈದಾನಕ್ಕೆ ಇದ್ದು, ಅದನ್ನು ತೆಗೆದು ಹಾಕಲು ತನ್ನ ನಿರಂತರವಾದ ಪ್ರಯತ್ನವನ್ನು ಮಾಡಿಕೊಂಡು ಬಂದಿದೆ. ಈಗ ಕರ್ನಾಟಕ ಸರಕಾರದ ಸುರ್ಪದಿಯಲ್ಲಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಮುಖಾಂತರ ತನ್ನ ಹಿಡನ್ ಏಜೆಂಡಾವನ್ನು ಪೂರೈಸುವ ನಿಟ್ಟಿನಲ್ಲಿ ನೆಹರೂ ಮೈದಾನವನ್ನು ಕೇಂದ್ರ ಮೈದಾನವೆಂದು ಪ್ರಕಟಿಸಿದೆ.

ನೆಹರೂ ಮೈದಾನದಲ್ಲಿ 1941ರಲ್ಲಿ ಸ್ವಾತಂತ್ರ ಆಂದೋಲನದ ಹಲವು ಸಭೆಗಳು ಮತ್ತು ಪ್ರತಿಭಟನೆಗಳು ನಡೆದಿರುತ್ತದೆ.1937ರಲ್ಲಿ ಪಂಡಿತ್ ನೆಹರೂ ರವರು ಈ ಮೈದಾನದಲ್ಲಿ ಸ್ವಾತಂತ್ರ ಹೋರಾಟಗಾರರನ್ನು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಈ ಕಾರಣದಿಂದ 1966ರಲ್ಲಿ ಈ ಮೈದಾನಕ್ಕೆ ನೆಹರೂ ಮೈದಾನ ಎಂದು ನಾಮಕರಣ ಮಾಡಲಾಗಿತ್ತು. ಮತ್ತು 2016ಕ್ಕೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನೆಹರೂ ಪ್ರತಿಮೆಯನ್ನು ಈ ಮೈದಾನದಲ್ಲಿ ಸ್ಥಾಪಿಸಲಾಯಿತು.

ಬಿಜೆಪಿ ಯು ನಿರಂತರವಾಗಿ ನೆಹರೂರವರ ಹೆಸರಿಗೆ ಮಸಿ ಬಳಿಯುವ ಮತ್ತು ಇತಿಹಾಸವನ್ನು ತಿರುಚುವ ಉದ್ದೇಶದಿಂದ ಆಗಿಂದಾಗೆ ಇದನ್ನು ಕೇಂದ್ರ ಮೈದಾನವೆಂದು ಕರೆಯಲು ಪ್ರಯತ್ನಿಸಿದೆ.ಇದಕ್ಕೆ ಪೂರಕವಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕೂಡ ಇದೇ ದಾರಿಯಲ್ಲಿ ಮುಂದುವರಿದಿದೆ. ಸರಕಾರದ ಯಾವುದೇ ಅಧಿಕೃತ ಸಂಸ್ಥೆಯು, ಇತಿಹಾಸದಲ್ಲಿ ಇದ್ದಂತೆ ಕೆಲಸ ಮಾಡಬೇಕೆ ಹೊರತು ರಾಜಕೀಯಕ್ಕೆ ಮಣಿದು ಇತಿಹಾಸವನ್ನು ತಿರುಚುವ ಕೆಲಸ ಯಾವತ್ತೂ ಮಾಡಬಾರದು. ಇದು ಅಕ್ಷಮ್ಯ ಅಪರಾಧ. ಇದಕ್ಕೋಸ್ಕರ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸಾರ್ವಜನಿಕರ ಕ್ಷಮೆ ಕೋರಬೇಕು ಮತ್ತು ಮಾಡಿರುವ ತಪ್ಪನ್ನು ಕೂಡಲೇ ಸರಿಪಡಿಸಿ ನೆಹರೂ ಮೈದಾನ ಎಂಬ ಹೆಸರನ್ನು ಪುಸ್ತಕದಲ್ಲಿ ಪ್ರಕಟಿಸಬೇಕೆಂದು ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೊ ಒತ್ತಾಯಿಸಿದ್ದಾರೆ.