ಮಂಗಳೂರು: ಭಾರತ ಸೇವಾದಳ ಜಿಲ್ಲಾ ಸಮಿತಿ ಮತ್ತು ಭಾರತ ಸೇವಾದಳ ಮಂಗಳೂರು ತಾಲೂಕು ಸಮಿತಿ ವತಿಯಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪುನಃಶ್ಚೇತನ ಶಿಬಿರ ಹಾಗೂ ಕೊರೋನಾ ಜಾಗೃತಿ ಶಿಬಿರ ಕಾರ್ಯಕ್ರಮವು ತಾ 21.3.2022ರಂದು ನಗರದ ಬಲ್ಮಠದಲ್ಲಿರುವ ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯ ವಿ. ವಿ. ಫ್ರಾನ್ಸಿಸ್ ರವರು ನೆರವೇರಿಸಿ ಮಾತನಾಡುತ್ತಾ, ಕೊರೋನಾ ರೋಗದಿಂದ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅನೇಕ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ್ದಾರೆ.
ಪ್ರಸಕ್ತ ವರ್ಷದಿಂದ ರಾಜ್ಯಾದ್ಯ0ತ ಸೇವಾದಳದ ಕಾರ್ಯಕ್ರಮಗಳು ನಡೆಯುತ್ತಿದೆ. ಸೇವಾದಳದ ಶಿಕ್ಷಕರು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಬಗ್ಗೆ, ದೇಶ ಪ್ರೇಮದ ಬಗ್ಗೆ, ಮಹಾತ್ಮಾ ಗಾಂಧೀಜಿ ಬಗ್ಗೆ, ನಾ. ಸು. ಹರ್ಡಿಕರ್ ರವರ ತತ್ವ ಆದರ್ಶಗಳನ್ನು ಭೋದಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಸಮಾಜಮುಖಿ ಕೆಲಸಗಳಿಗೆ ದುಮುಕುವಂತೆ ಪ್ರೆರೇಪಿಸುತ್ತಾರೆ. ಜತೆಗೆ ಕೊರೋನಾ ಹಾಗೂ ಇತರ ಮಾರಣಾ0ತಿಕ ರೋಗಗಳ ಬಗ್ಗೆ ಜನಜಾಗೃತಿಯನ್ನು ಮೂಡಿಸುವ ಕೆಲಸವನ್ನು ಭಾರತ ಸೇವಾದಳ ಮಾಡುತ್ತಿದೆ ಎಂದರು.
ಅರೋಗ್ಯ ಇಲಾಖೆಯ ಹೆಲ್ತ್ ಇನ್ಸ್ಪೆಕ್ಟಿಂಗ್ ಆಫೀಸರ್ ಆಗಿರುವ ಡಾ. ಪ್ರದೀಪ್ ಕುಮಾರ್ ರವರು ಕೊರೋನಾ ರೋಗದ ಬಗ್ಗೆ ಹಾಗೂ ಇತರ ಮಾರಣಾ0ತಿಕ ಕಾಯಿಲೆಗಳಾದ ಡೆಂಗ್ಯೂ, ಇಲಿ ಜ್ವರ, ಪೈಲೇರಿಯಾ ರೋಗಗಳ ಬಗ್ಗೆ ಮಾಹಿತಿಯನ್ನು ಒದಗಿಸಿ ಜನಜಾಗೃತಿಯನ್ನು ಮೂಡಿಸಿದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ ಯವರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾಲೂಕು ಅಧ್ಯಕ್ಷ ಪ್ರಭಾಕರ್ ಶ್ರೀಯಾನ್, ಜಿಲ್ಲಾ ಕಾರ್ಯದರ್ಶಿ ಟಿ. ಕೆ. ಸುಧೀರ್, ಮುಖ್ಯ ಸಂಘಟಕ ಮಂಜೇಗೌಡ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ರವಿಶಂಕರ್ ಹಾಗೂ ಭರತ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ವಿತರಿಸಲಾಯಿತು.