ಮಂಗಳೂರು: ಮಂಗಳೂರು ರಥಬೀದಿಯ ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ 1922ರಲ್ಲಿ ಸ್ಥಾಪನೆಗೊಂಡಿರುವ ‘ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ’ಕ್ಕೆ ಈ ವರ್ಷ ಶತಮಾನೋತ್ಸವದ ಸಂಭ್ರಮ. ಕಳೆದ ಒಂದು ನೂರು ವರ್ಷಗಳಿಂದಲೂ ನಿರಂತರವಾಗಿ ವಾರದ ಯಕ್ಷಗಾನ ತಾಳಮದ್ದಳೆ ಕೂಟವನ್ನು ನಡೆಸಿಕೊಂಡು ಬಂದಿರುವ ಹೆಮ್ಮೆ ಈ ಸಂಸ್ಥೆಯದ್ದಾಗಿದೆ.
ಕೀರ್ತಿಶೇಷ ಅರ್ಕುಳ ಸುಬ್ರಾಯ ಆಚಾರ್ಯರಿಂದ 1922ರಲ್ಲಿ ಉದ್ಘಾಟಿಸಲ್ಪಟ್ಟಿರುವ ಈ ಸಂಘವು ಅನೇಕ ದಶಕಗಳ ಕಾಲ ದಿ| ಮಾಧವ ಆಚಾರ್ಯರ ಹಿರಿತನದಲ್ಲಿ ಮನ್ನಡೆದು ಬಂದಿದೆ.
ಅದೆಷ್ಟೋ ಮಂದಿ ಹವ್ಯಾಸಿ ಯಕ್ಷಗಾನ ಕಲಾವಿದರು ಈ ಸಂಘದ ಮೂಲಕ ಬೆಳಕಿಗೆ ಬಂದಿದ್ದು ಬಹುತೇಕರು ಸುಪ್ರಸಿದ್ಧರಾಗಿ ಹೆಸರು ಗಳಿಸಿರುವರು.
ಮಟ್ಟಿ ಸುಬ್ಬರಾವ್, ಮಂದಾರ ಕೇಶವ ಭಟ್ಟ, ತೆಕ್ಕಟ್ಟೆ ಆನಂದ ಮಾಸ್ತರ್, ಎಫ್. ಎಚ್. ಒಡೆಯರ್, ಗೋವಿಂದ, ದೇವಪ್ಪ ಶೆಟ್ಟಿ, ಸೋಮಪ್ಪ ಸನಿಲ್, ಸಿ.ಬಿ.ಎನ್. ದಾಮೋದರ ಆಚಾರ್ಯ, ಬಾಲಕೃಷ್ಣ ನಾಯರ್ ಮೊದಲಾದ ಹಿರಿಯರು ಈ ಸಂಘದಲ್ಲಿ ಅರ್ಥಧಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.
2022, ಮಾರ್ಚ್ 13, ಆದಿತ್ಯವಾರ ಸಂಜೆ ಸಂಘದ ಶತಮಾನೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ಜರಗಲಿದ್ದು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಕುಮಟಾ ಕಾರ್ಯಕ್ರಮ ಉದ್ಘಾಟಿಸಲಿರುವರು. ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಗೌರವಾಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆವಹಿಸಲಿದ್ದು ಶ್ರೀ ಮಹಾಮಾಯಾ ದೇವಳದ ಆಡಳಿತ ಮೊಕ್ತೇಸರ ಸಿಎ ಶ್ರೀನಿವಾಸ ಕಾಮತ್ ಅವರ ಗೌರವ ಉಪಸ್ಥಿತಿಯೊಂದಿಗೆ ಹಿರಿಯ ತಾಳಮದ್ದಳೆ ಅರ್ಥಧಾರಿ, ಸಂಘಟಕ ಬಿ. ನಾಗೇಶ್ ಪ್ರಭು ಅವರನ್ನು ಸಂಮಾನಿಸಲಾಗುವುದು.
ಇದೇ ಸಂದರ್ಭ ಸಂಘದ ಪೂರ್ವಾಧ್ಯಕ್ಷರಾಗಿದ್ದ ದಿವಂಗತ ಎನ್. ಮಾಧವ ಆಚಾರ್ಯರ ಸಂಸ್ಮರಣೆ ಮಾಡಲಾಗುವುದು. ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಹಾಗೂ ‘ನಮ್ಮಕುಡ್ಲ’ ಟಿವಿ ವಾಹಿನಿಯ ನಿರ್ದೆಶಕ ಲೀಲಾಕ್ಷ ಬಿ. ಕರ್ಕೇರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
• ಶತಮಾನೋತ್ಸವದ ಪ್ರಯುಕ್ತ ಸರಣಿ ಯಕ್ಷಗಾನ ‘ಶ್ರೀರಾಮ ಚರಿತಾಮೃತ’
• ಪ್ರತೀ ಭಾನುವಾರ ಹಿರಿಯ ಕಲಾವಿದರ ಸಂಸ್ಮರಣೆ (50 ಮಂದಿಯ ಸಂಸ್ಮರಣೆ)
• ಸಾಧಕ ಕಲಾವಿದರಿಗೆ ಸಂಮಾನ (50 ಮಂದಿಗೆ ಸಂಮಾನ)
• 1 ವರ್ಷ ಪರ್ಯಂತ ಪ್ರತೀ ಭಾನುವಾರ ಕಾರ್ಯಕ್ರಮ ಮುಂದುವರಿಯಲಿದೆ.
• ಸಂಘದ ಸದಸ್ಯರು ಹಾಗೂ ಅತಿಥಿ ಕಲಾವಿದರಿಂದ ‘ಶ್ರೀರಾಮ ಚರಿತಾಮೃತ’ ಶ್ರೀ ರಾಮಾಯಣ ಪ್ರಸಂಗವು ಧಾರಾವಾಹಿಯಾಗಿ ಮೂಡಿಬರಲಿರುವುದು.
ಗೌರವಾಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಪ್ರಧಾನ ಸಂಚಾಲಕ ನವನೀತ ಶೆಟ್ಟಿ ಕದ್ರಿ, ಅಧ್ಯಕ್ಷ ಶ್ರೀನಾಥ್ ಪ್ರಭು, ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಿಎಸ್ ಭಂಡಾರಿ, ಕೋಶಾಧಿಕಾರಿ ಶಿವಪ್ರಸಾದ್ ಪ್ರಭು, ಪ್ರಧಾನ ಕಾರ್ಯದರ್ಶಿ ಸಂಜಯ ರಾವ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿತರಿದ್ದರು.