ಚಿಕ್ಕಮಗಳೂರು:- ಗವನಹಳ್ಳಿ ಸಮೀಪದ ಪುರಾತನ ಇತಿಹಾಸ ಹೊಂದಿರುವ ಶ್ರೀ ಮಹಾಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಪೂಜಾ ಪ್ರಯುಕ್ತ ಬುಧವಾರ ಶ್ರೀ ಸ್ವಾಮಿಯವರಿಗೆ ವಿಶೇಷ ಪೂಜೆ ನಡೆಯಿತು.
ಇಂದು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ, ರುದ್ರಾಭಿಷೇಕ ಹಾಗೂ ರುದ್ರಹೋಮಗಳು ಜರುಗಿದವು. ಮಧ್ಯಾಹ್ನ 12.30ಕ್ಕೆ ದೇವಾಲಯ ಸಮಿತಿ ವತಿಯಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ಸುತ್ತಮುತ್ತಲಿನ ಗ್ರಾಮದೇವತೆಗಳಾದ ಮರಿಯಮ್ಮ, ಶ್ರೀ ರಾಮಲಕ್ಷ್ಮಣ, ಶ್ರೀ ಆಂಜನೇಯ ಸ್ವಾಮಿ, ಬೀರಲಿಂಗೇಶ್ವರ ಸ್ವಾಮಿ, ಚಿಂತಾಮಣಿ ಸರಸ್ವತಿ, ಮೂಗು ಬಸವಪ್ಪ, ದೊಣ್ಣೆ ಭೂತಪ್ಪ, ಗ್ಯಾರಕಟ್ಟೆ ಅಮ್ಮ ಹಾಗೂ ಲಕ್ಕಮ್ಮದೇವಿ ದೇವತೆಗಳಿಗೆ ದೇವಾಲಯದ ಮುಂಭಾಗದಲ್ಲಿ ಎಡೆ ಅರ್ಪಿಸಲಾಯಿತು.
ಇದೇ ವೇಳೆ ಮಾತನಾಡಿದ ದೇವಾಲಯ ಸಮಿತಿಯ ಜಿ.ಪಿ.ಹೊನ್ನರಾಜು ಶ್ರೀ ಮಹಾಲಿಂಗೇ ಶ್ವರ ಸ್ವಾಮಿ ದೇವಾಲಯ ಸುಮಾರು 150ಕ್ಕೂ ಹೆಚ್ಚು ವರ್ಷಗಳ ಕಾಲ ಪುರಾತನ ಹಿನ್ನೆಲೆ ಹೊಂದಿದೆ. ದೇವಾಲಯದ ಜೀರ್ಣೋದ್ದಾರ ಕಾಮಗಾರಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಪೂರ್ಣ ಗೊಂಡ ನಂತರ ದೊಡ್ಡಮಟ್ಟದಲ್ಲಿ ವಿಶೇಷ ಪೂಜೆ ನಡೆಸಲಾಗುವುದು ಎಂದರು.
ಶಿವರಾತ್ರಿ ಪ್ರಯುಕ್ತ ನಿನ್ನೆ ಅನೇಕ ಪೂಜಾ ವಿಧಿವಿಧಾನಗಳು ಜರುಗಿದವು. ಇಂದು ಗವನಹಳ್ಳಿ ಹಾಗೂ ಶ್ರೀನಿವಾಸನಗರ ಗ್ರಾಮಸ್ಥರು ಸೇರಿದಂತೆ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿ ವಿಶೇಷ ಪೂಜೆ ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿ ಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಯುವಕ ರೈತ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.