ಪುತ್ತೂರು : ಸ್ವಾಮಿ ವಿವೇಕಾನಂದರು ಜಗತ್ತಿಗೆ ಭಾರ್ತೃತ್ವದ, ಮಾನವತೆಯ ಸಂದೇಶ ಸಾರಿದ ಮಹೋನ್ನತ ಸಂತ. ಒಂದೊಂದು ಧರ್ಮದ ಉಪಾಸನೆಗಳು ಒಂದೊಂದು ಬಗೆ. ಆದರೆ ಅಂತಿಮವಾಗಿ ಗುರಿ ಒಂದೇ. ಅದು ದೇವರನ್ನು ಸೇರುವುದು; ದೈವಿಕ ಅನುಭವ, ಅನುಭೂತಿಯನ್ನು ಪಡೆಯುವುದು. ಇದು ಹಲವು ತೊರೆಗಳು ಸೇರಿ ನದಿಯಾದಂತೆ,  ನದಿಗಳು ಸೇರಿ ಅಂತಿಮವಾಗಿ ಸಾಗರ ಸೇರುವಂತೆ. ಆದುದರಿಂದ ಧರ್ಮಗಳ ನಡುವೆ ಎಂದಿಗೂ ವಿರೋಧ ಸಲ್ಲದುಎಂದು ಸ್ವಾಮಿ ವಿವೇಕಾನಂದರು ಉಪದೇಶಿಸಿದರು ಎಂದು ಪ್ರೊ.ಪ್ರಶಾಂತ್ ರೈ, ವಾಣಿಜ್ಯ ಮತ್ತು ವ್ಯವಹಾರ ವಿಭಾಗದ ಪ್ರಾದ್ಯಾಪಕರು ಹೇಳಿದರು. ಅವರು ಸಂತಫಿಲೊಮಿನಾ ಕಾಲೇಜಿನ ರಾಷ್ತ್ರೀಯ ಸೇವಾ ಯೋಜನಾ ಘಟಕದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳು ಮತ್ತು ಯುವಜನತೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು. 

ಜೀವನದಲ್ಲಿ ಸವಾಲುಗಳು ಸದಾ ಎದುರಾಗುತ್ತವೆ. ಅವನ್ನು ಎದುರಿಸುವ ಛಲವನ್ನು ಎಂದಿಗೂ ಬಿಡಬಾರದು. ಗುರಿ ತಲುಪುವ ತನಕ ವಿಶ್ರಮಿಸಬಾರದು. ಯಶಸ್ಸು ಸಿಗಬೇಕಾದರೆ ಸ್ವಾಮಿ ವಿವೇಕಾನಂದರು ಹೇಳಿದ ಶಿಸ್ತು, ಸಮಯ ಪರಿಪಾಲನೆ, ಗುರಿಯತ್ತ ಲಕ್ಷ್ಯ ಇರಬೇಕಾಗುತ್ತದೆ ಎಂದು ಹೇಳಿದ ಅವರು ಸ್ವಾಮಿ ವಿವೇಕಾನಂದರ ಜೀವನದ ಕೆಲವು ಘಟನೆಗಳನ್ನು ಉದಾಹರಿಸಿದರು. 

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೆರೋ ಅವರು ‘ಯಾರೂ ಕೂಡ ಹುಟ್ಟಿನಿಂದ ಶ್ರೇಷ್ಠರಲ್ಲ, ಕನಿಷ್ಟರೂ ಅಲ್ಲ. ಪರಿಸ್ಥಿತಿಯನ್ನು ತಮ್ಮ ಪಾಲಿಗೆ ಯಶಸ್ಸಿನ ಮೆಟ್ಟಲುಗಳಾಗಿ ಪರಿವರ್ತಿಸಿಕೊಂಡವರು ಗೆಲ್ಲುತ್ತಾರೆ. ಯಸಸ್ಸು ಅಯಾಚಿತವಾಗಿ ಬಾರದು. ಜೀವನದಲ್ಲಿ ಎತ್ತರದ ಸಾಧನೆ ಮಾಡಿದವರ ಸಾಧನೆಯ ಹಿಂದೆ ನಡೆಸಿದ ಶ್ರಮ, ಸ್ವಾಂಗೀಕರಿಸಿಕೊಂಡ ಉದಾತ್ತ ಗುಣಗಳ ಕುರಿತು ಗಮನಹರಿಸಬೇಕು. ವಿವೇಕಾನಂದರ ಜೀವನವೇ ಇದಕ್ಕೆ ಸಾಕ್ಷಿ. ಅವರ ಜೀವನ ಮತ್ತು ಸಾಧನೆಯ ಕುರಿತು ಯುವಜನತೆ ಮತ್ತೆ ಮನನ ಮಾಡಬೇಕಾದ ಅಗತ್ಯವಿದೆ. ಸ್ವಾಮಿ ವಿವೇಕಾನಂದರು ವಿಶ್ವ ಕಂಡ ಶ್ರೇಷ್ಠ ಸಂತ’ ಎಂದು ಹೇಳಿದರು. 

ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಶೃದ್ಧಾ ಸ್ವಾಗತಿಸಿ, ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಚೈತ್ರಾ ಶ್ರೀ ವಂದಿದಿದರು. ದ್ವಿತೀಯ ಬಿಬಿಎ ವಿದ್ಯಾರ್ಥಿ ಯಕ್ಷಿತಾ ರೈ ನಿರೂಪಿಸಿದರು. ರಾಷ್ತ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿಗಳಾದ ಪ್ರೊ.ವಾಸುದೇವ ಎನ್ ಮತ್ತು ಪ್ರೊ.ಪುಷ್ಪಾ ಎನ್ ಕಾರ್ಯಕ್ರಮವನ್ನು ಸಂಘಟಿಸಿದರು.