ಪುತ್ತೂರು :ವಿದ್ಯಾರ್ಥಿಗಳ ಸಂಖ್ಯೆ ಮುಖ್ಯವಲ್ಲ. ಇರುವ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಮುಖ್ಯ. ವಿದ್ಯಾರ್ಜನೆಯ ಹಂತದಲ್ಲಿ ಸಿಗುವ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸೃಜನಶೀಲತೆಯ ನಡಿಗೆ ಇಡಬೇಕು. ಕೆಲಸ ಮಾಡುವ ಮನಸ್ಸು ಇರುವವನು ಕಾಡಿನಲ್ಲಾದರೂ, ಮರುಭೂಮಿಯಲ್ಲಾದರೂ ಯಶಸ್ಸು ಕಾಣುತ್ತಾನೆ; ಪ್ರಸಿದ್ಧಿಯನ್ನುಪ ಡೆಯುತ್ತಾನೆ. ವಿದ್ಯಾರ್ಥಿ ಕಾಲದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಗಳಲ್ಲಿ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಉತ್ತಮ ಹವ್ಯಾಸಗಳು ಬದುಕಿನ ಮೌಲ್ಯ ಹೆಚ್ಚಿಸುತ್ತವೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ| ಆ್ಯಂಟನಿ ಪ್ರಕಾಶ್ ಮೊಂತೆರೋ ಹೇಳಿದರು.ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅಂತಿಮ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ "ಕವಿ" ಕಿರುಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಾ ವಿಭಾಗಗಳ ಮುಖ್ಯಸ್ಥರಾದ ದಿನಕರ್‍ರಾವ್ ಮಾತನಾಡಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕು .ಎಲ್ಲಾ ಹೊಸ ಸಂಗತಿಗಳನ್ನು ವಿಮರ್ಶೆ ಮಾಡುವಂತಹ ಹವ್ಯಾಸವನ್ನು ರೂಢಿಗೊಳಿಸಬೇಕು. ಸಮಾಜಕ್ಕೆ ಬಲಿಷ್ಠ ಯುವ ಪತ್ರಕರ್ತರ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ವಾಸು ದೇವ ಎನ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಪ್ರಜ್ಞಾ ಬಾರ್ಯ ಮತ್ತು ಇತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಂತಿಮ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಗೀತಾ ಲಕ್ಷ್ಮೀ ಸ್ವಾಗತಿಸಿದರು , ವಿದ್ಯಾರ್ಥಿ ಕಾರ್ಯಕ್ರಮ ಸಂಯೋಜಕ ಅನ್ವೇಷ್ ರೈ ವಂದಿಸಿ ,ವಿದ್ಯಾರ್ಥಿನಿ ಆಶ್ರಿತಾ ನಿರೂಪಿಸಿದರು. ಬಳಿಕ "ಕವಿ" ಕಿರುಚಿತ್ರ ಪ್ರದರ್ಶನಗೊಂದಿತು ಮತ್ತು ಚಲನಚಿತ್ರದ ಒಟ್ಟು ಧ್ವನಿ, ಸಾಮಾಜಿಕ ತಲ್ಲಣಗಳ ಕುರಿತು ವಿದ್ಯಾರ್ಥಿಗಳು, ಶಿಕ್ಷಕರ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು.
"ಕವಿ " 2009 ರಲ್ಲಿ ತೆರೆಕಂಡ ಕಿರುಚಿತ್ರ. ಮನುಷ್ಯ ಸಾಗಾಣಿಕೆ ದಂಧೆಯ ಕುರಿತಾದ ಈ ಚಿತ್ರಕ್ಕೆ ಗ್ರೆಗ್ ಹೆಲ್ವಿ ನಿರ್ದೇಶನ ಮಾಡಿದ್ದಾರೆ. ಕೇವಲ 19 ನಿಮಿಷಗಳ ಈ ಕಾಲ್ಪನಿಕ ಚಲನಚಿತ್ರವು ಗುಲಾಮಗಿರಿ ಪದ್ಧತಿಯ ಬೇರೆ ಬೇರೆ ಸೂಕ್ಷ್ಮಗಳನ್ನು, ಸಾಮಾಜಿಕ ತಲ್ಲಣವನ್ನು ಎಳೆ ಎಳೆಯಾಗಿ ಕಟ್ಟಿಕೊಡುತ್ತದೆ. ಕಲಿಯುವ ವಯಸ್ಸಿನ ಹುಡುಗನ ಮನಸ್ಸಿನ ಒದ್ದಾಟದ ಸನ್ನಿವೇಶವನ್ನು ಸೆರೆ ಹಿಡಿದ ಈ ಚಿತ್ರ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡು ಜನಪ್ರಿಯವಾಗಿದೆ.