ಉಡುಪಿ: ಕೊಲ್ಲೂರು ವ್ಯಾಪ್ತಿಯ ಮುದೂರು ಮತ್ತು ಜಡ್ಕಲ್ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡು, ಡೆಂಗ್ಯೂ ಪ್ರಕರಣಗಳು ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ ನೀಡಿದರು.

 ಅವರು ಕೊಲ್ಲೂರು ವ್ಯಾಪ್ತಿಯ ಮುದೂರು ಮತ್ತು ಜಡ್ಕಲ್ ನ, ಡೆಂಗ್ಯೂ ಪೀಡಿತ ಮನೆಗಳಿಗೆ ಭೇಟಿ ನೀಡಿ ಮಾತನಾಡಿದರು.

 ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಈ ಗ್ರಾಮಗಳ ವ್ಯಾಪ್ತಿಯಲ್ಲಿನ ಪ್ರತಿ ಮನೆಗಳಿಗೆ ಭೇಟಿ ನೀಡಿ, ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವ ಮತ್ತು ನೀರು ಶೇಖರಣೆಯಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಹಾಗೂ ಆರೋಗ್ಯ ಇಲಾಖೆವತಿಯಿಂದ ಡೆಂಗ್ಯೂ ಕುರಿತು ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು, ಸೊಳ್ಳೆ ಕಡಿತದಿಂದ ಪಾರಾಗಲು ಅಗತ್ಯವಿರುವ ಸೊಳ್ಳೆ ಪರದೆ ಮತ್ತು ಡಿಎಂಪಿ ತೈಲವನ್ನು ನೀಡುವಂತೆ ಹಾಗೂ ನಿರಂತರವಾಗಿ ಫಾಗಿಂಗ್ ಮಾಡುವಂತೆ ಸೂಚಿಸಿದರು. 

ಈ ಭಾಗದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯವಿರುವ ಇನ್ನೂ ಹೆಚ್ಚಿನ ಕ್ರಮಗಳ ಕುರಿತಂತೆ ಜಿಲ್ಲಾಧಿಕಾರಿಗಳೊಂದಿಗೆ ಚಿರ್ಚಿಸಲಾಗುವುದು ಎಂದು ಸಚಿವರು ಹೇಳಿದರು.

 ಕೊಲ್ಲೂರು ಭಾಗದ ಕೊಲ್ಲೂರು, ಮುದೂರು ಮತ್ತು ಜಡ್ಕಲ್ ನಲ್ಲಿ ಜನವರಿಯಿಂದ ನಿರಂತರವಾಗಿ ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿದ್ದು, ಇದುವರೆಗೆ 113 ಪ್ರಕರಣಗಳು ವರದಿಯಾಗಿದ್ದು, ಪ್ರಸ್ತುತ 47 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 18 ವರ್ಷದೊಳಗಿನ 6 ಮಕ್ಕಳು ಇದ್ದಾರೆ. ಡೆಂಗ್ಯೂ ಚಿಕಿತ್ಸೆಗಾಗಿ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ 25 ಪುರುಷ, 25 ಮಹಿಳೆ ಮತ್ತು 10 ಮಕ್ಕಳಿಗೆ ಸೇರಿದಂತೆ ಒಟ್ಟು 60 ಬೆಡ್ ಗಳ ವಿಶೇಷ ವಾರ್ಡ್ ತೆರೆಯಲಾಗಿದೆ. 

 ಬೈಂದೂರು ಶಾಸಕ ಸುಕುಮಾರ ಶೆಟ್ಟಿ , ಜಡ್ಕಲ್ ಗ್ರಾ.ಪಂ.ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಲಕ್ಷö್ಮಣ ಶೆಟ್ಟಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಬೈಂದೂರು ತಹಸೀಲ್ದಾರ್ ಶೋಭಾಲಕ್ಷಿö್ಮ,, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ (ಪ್ರಭಾರ) ಡಾ.ಚಿದಾನಂದ ಸಂಜು , ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.