ಮಂಗಳೂರು: ಕನ್ನಡ ಭಾಷೆಗೂ ಮತ್ತು ಈ ನೆಲದ ಪರಿಸರಕ್ಕೂ ಬಿಡಿಸಲಾಗದ ಒಂದು ಅವಿನಾಭಾವ ಸಂಬಂದವಿದೆ. ಎಲ್ಲಿ ಕನ್ನಡತನ ಇರುತ್ತದೆಯೋ ಅಲ್ಲಿ ಪರಿಸರದ ಮೇಲೆ ಪ್ರೀತಿ ಇರುತ್ತದೆ, ಎಂದು ಖ್ಯಾತ ಪರಿಸರ ತಜ್ಞ ಶಿವಾನಂದ ಕಳವೆಯವರು ಹೇಳಿದರು. ಯೂನಿಯನ್ ಬ್ಯಾಂಕ್ ಕನ್ನಡ ಬಳಗ (ರಿ) ಬೆಂಗಳೂರು ವತಿಯಿಂದ ದಿನಾಂಕ 25, ನವಂಬರ್ 2023 ರಂದು, ಮಂಗಳೂರಿನ ಪಾಂಡೇಶ್ವರದ ಕೇಂದ್ರ ಕಛೇರಿಯ ಉಪಭವನದ ಸಭಾಂಗಣದಲ್ಲಿಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ “ಉಸಿರಾಗಲಿ ಕನ್ನಡ- ಹಸಿರಾಗಲಿ ಕರ್ನಾಟಕ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ, ಸನ್ಮಾನ ಸ್ವೀಕರಿಸಿದ ಅವರು, ಕನ್ನಡ ಮನಸ್ಸುಗಳು ಒಂದಾದರೆ ಯಾವುದೂ ಅಸಾದ್ಯವಲ್ಲ, ಕನ್ನಡ ಭಾಷೆಯು ಒಂದು ವೈವಿದ್ಯತೆಯ ಆಗರ, ಕನ್ನಡದ ಶಕ್ತಿಯೇ ಅದರ ವೈವಿದ್ಯತೆಗಳು. ಕನ್ನಡ ಭಾಷೆ ಮತ್ತು ಕನ್ನಡ ನೆಲದ ಪರಿಸರದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

“ಉಸಿರಾಗಲಿ ಕನ್ನಡ – ಹಸಿರಾಗಲಿ ಕರ್ನಾಟಕ” ಎಂಬ ಶೀರ್ಷಿಕೆಯಡಿ, ಮಾತೃ ಭಾಷೆಯ ಮಹತ್ವ ಮತ್ತು ಪರಿಸರ ಸಂರಕ್ಷಣೆಯ ಅಗತ್ಯತೆಯನ್ನು ಸಾರುವ ಸಜ್ಜನರ ಸಮಾಗಮವೇ ಈ ಕಾರ್ಯಕ್ರಮ ಎಂಬುದು ಯೂನಿಯನ್ ಬ್ಯಾಂಕ್ ಸಿಬ್ಬಂದಿಯವರ ಮಾತೃ ಬಾಷಾ ಪ್ರೇಮ ಮತ್ತು ಪರಿಸರ ಕಾಳಜಿಯನ್ನು ತೋರಿಸುವಂತಿತ್ತು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿವಿದ ಬಾಗಗಳಿಂದ ಆಗಮಿಸಿದ್ದ ಬ್ಯಾಂಕ್ ಸಿಬ್ಬಂದಿ ವರ್ಗದವರು, ಕುಟುಂಬದವರು, ನಿವೃತ್ತರು ಸೇರಿದಂತೆ ಸುಮಾರು 400 ಕ್ಕು ಹೆಚ್ಚು ಜನ ಬಾಗವಹಿಸಿದ್ದು, ಮದ್ಯಾಹ್ನ 3.0 ಗಂಟೆಗೆ ಆರಂಭವಾದ ಕಾರ್ಯಕ್ರಮವು ರಾತ್ರಿ 9.0 ಗಂಟೆಗೆ ಎಲ್ಲರೂ ಒಟ್ಟಿಗೆ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ನೃತ್ಯದೊಂದಿಗೆ ಮುಕ್ತಾಯಗೊಂಡಿದ್ದು ಆ ಬ್ಯಾಂಕ್ ಸಿಬ್ಬಂದಿಯವರಿಗೆ ಕನ್ನಡದ ಮೇಲಿನ ಪ್ರೀತಿಯನ್ನು ಬಿಂಬಿಸುವಂತಿತ್ತು.

ಕಾರ್ಯಕ್ರಮದಲ್ಲಿ ಖ್ಯಾತ ಪರಿಸರವಾದಿಗಳಾದ ಜೀತ್ ಮಿಲಾನ್ ರೋಚ್,ಕೃಷಿ ಅಂಕಣಗಾರರಾದ ಅಡ್ಡೂರು ಕೃಷ್ಣ ರಾವ್ ಹಾಗೂ ಸುಳ್ಯದ ಶಿಕ್ಷಣ ಮತ್ತು ಸಮಾಜ ಸೇವಕರಾದ ಡಾ ಚಂದ್ರಶೇಖರ ದಾಮ್ಲೆಯವರನ್ನು ಸನ್ಮಾನಿಸಲಾಯಿತು.

ಬ್ಯಾಂಕಿನ ಮಂಗಳೂರು ವಲಯ ಮುಖ್ಯಸ್ಥರಾದ ರೇಣು ಕೆ ನಾಯರ್ ರವರು “ನನ್ನ ಜನ್ಮ ಭೂಮಿ ಕೇರಳವಾದರೂ ನನ್ನ ಕರ್ಮ ಭೂಮಿ ಕರ್ನಾಟಕವೆಂದು ಹೇಳಲು ಹರ್ಷವಾಗುತ್ತದೆ,ಕರ್ನಾಟಕ ರಾಜ್ಯೋತ್ಸವದ ದಿನ ಒಂದು ಶುಭದಿನ” ಎಂದು ಹೇಳಿದರು.

ಮಂಗಳೂರಿನ ಯೂನಿಯನ್ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ಮುಖ್ಯಸ್ಥರು ಮತ್ತು ಈ ಕಾರ್ಯಕ್ರಮವನ್ನು ಅಯೋಜಿಸುವಲ್ಲಿ ನೇತೃತ್ವ ವಹಿಸಿದ್ದ ಶ್ರೀ ಮಹೇಶ ಜೆ. ರವರು ಎಲ್ಲರನ್ನು ಸ್ವಾಗತಿಸುತ್ತಾ, ನಾಡಗೀತೆಯ ಸಾಲು “ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂದರೆ ಭಾರತಾಂಬೆಯು ಕನ್ನಡಾಂಬೆಯ ಮಾತೆಯಾದಂತೆ, ಈ ನಮ್ಮ ತುಳುನಾಡಿಗೆ ಕನ್ನಡಾಂಬೆಯೇ ತಾಯಿ ಎಂದು ವರ್ಣಿಸಿದರು. ಈ ನಮ್ಮ ಕರುನಾಡು ಬಾಷಾ ಮತ್ತು ಸಂಸ್ಕೃತಿಯ ವೈಶಿಷ್ಟ್ಯಗಳ ತವರೂರು. ಕರ್ನಾಟಕದಲ್ಲಿ 04 ಭಾಷೆಗಳು ಪ್ರಚಲಿತದಲ್ಲಿದ್ದು ಅವುಗಳೆಂದರೆ ಕನ್ನಡ, ತುಳು, ಬ್ಯಾರಿ ಮತ್ತು ಕೊರವ ಬಾಷೆಗಳು.

ಮೈಸೂರು ರಾಜ್ಯ ಕರ್ನಾಟಕವಾಗಿ 50 ವರ್ಷಗಳು ಕಳೆದ ಇತಿಹಾಸವನ್ನು ಮೆಲುಕು ಹಾಕುತ್ತಾ, ಕನ್ನಡ ಭಾಷಾ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಈ ಹಸಿರು ಭೂಮಿ ತುಳುನಾಡಿನಲ್ಲಿ ನಾವು ಈ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದು ಹೇಳಿದರು. ಬಳಗದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರವಿಂದ ಹೆಗ್ಗಡೆಯವರು ಬಳಗದ ವಾರ್ಷಿಕ ವರದಿಯನ್ನು ಒಪ್ಪಿಸುತ್ತಾ, ಬಳಗವು ಕನ್ನಡ ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಬಗೆಯನ್ನು ಮತ್ತು ಕನ್ನಡೇತರರಿಗೆ ಕನ್ನಡ ಕಲಿಸಲು ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದ ಅವರು, “ಎದೆಯ ಬಗೆದರೂ ಇರಲಿ ಕನ್ನಡ ಹೃದಯ ಬಡಿದರೂ ಬರಲಿ ಕನ್ನಡ, ಗರ್ವದಿಂದ ಹೇಳು ನಾನು ಕನ್ನಡಿಗ” ಎಂದು ಹೇಳಿದರು.

ಬಳಗದ ಅಧ್ಯಕ್ಷರಾದ ಎಚ್. ಟಿ. ವಾಸಪ್ಪನವರು ಪ್ರಾಸ್ಥಾವಿಕ ಭಾಷಣದಲ್ಲಿ “ಕಲಿಯಲು ಕೋಟಿ ಭಾಷೆಗಳಾದರೂ, ಆಡಲಿಕ್ಕೆ ಒಂದೇ ಭಾಷೆ ಅದು ಕನ್ನಡ” ಎಂದು ಹೇಳುತ್ತಾ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ತುಳುನಾಡು ಮಂಗಳೂರಿನ ಕೊಡುಗೆಯನ್ನ ನೆನೆದರು. ಹಾಗೂ ಕನ್ನಡ ಕನ್ನಡ ಬಳಗವು ಬೆಳೆದು ಬಂದ ಬಗೆಯನ್ನು ವಿವರಿಸಿದರು. 

ಕಾರ್ಯಕ್ರಮದಲ್ಲಿ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ (ರಿ) ದವರ ಯಕ್ಷಗಾನ ಸೂತ್ರದ ಗೊಂಬೆಯಾಟ, ಜೀ ಟಿವಿ ಕನ್ನಡ ವಾಹಿನಿಯ ಪ್ರಶಸ್ತಿ ವಿಜೇತೆ ಜ್ಞಾನ ಐತಾಳ್ ಹಾಗೂ ತಂಡದವರಿಂದ ವಿಶೇಷ ನೃತ್ಯ ಪ್ರದರ್ಶನ ಹಾಗೂ ಬ್ಯಾಂಕ್

ಸಿಬ್ಬಂದಿಯವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು.