35 ಕಳ್ಳತನ, 22 ವಾರೆಂಟ್ ಇರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಅಜ್ರಿಮಾರ್‌ನ 48ರ ಹಮೀದ್ ಕುಂಜುಮೋನು ಕದ್ದ ಹಣ ಹೂತಿಟ್ಟು, ಪೋಲೀಸರ ಕೈಗೆ ಸಿಕ್ಕು ಫಜೀತಿಗೆ ಬಿದ್ದಿದ್ದಾನೆ.

ಕೆಎಸ್‌ಆರ್ ರಸ್ತೆ ನಲಪಾಡ್ ಅಪ್ಸರಾ ಚೇಂಬರ್ಸ್‌ನ ಯು. ಎಂ. ಉಮರ್ ಫ್ಲವರ್ ಸ್ಟಾಲ್‌ನಲ್ಲಿ 9 ಲಕ್ಷ ರೂಪಾಯಿ ಮತ್ತು ಸಿಸಿ ಕ್ಯಾಮರಾದ ಡಿವಿಡಿ ಕಳವಾಗಿತ್ತು. ಆ ದೂರು ಬಂದರು ಠಾಣೆಯಲ್ಲಿ ದಾಖಲಾಗಿತ್ತು. 

ಹಳೆಯ ಕಳ್ಳ ಹಮೀದ್ ಜ್ಯೋತಿ ವೃತ್ತದ ಬಳಿ ಪೋಲೀಸರ ಕೈಗೆ ಸಿಕ್ಕಾಗ ಆತನನ್ನು ವಿಚಾರಿಸಲಾಗಿ ಆತನ ಬಳಿಯಿಂದ ಡಿವಿಡಿ, ರಾಡ್ ಮತ್ತು ಸ್ವಲ್ಪ ಹಣ ಸಿಕ್ಕಿದೆ.

ಈ ಕಳ್ಳನು ಕದ್ದ ಹಣದಲ್ಲಿ 5.8 ಲಕ್ಷ ನೆಲ್ಲಿಕಾಯಿ ರಸ್ತೆಯ ಹಳೆಯ ಕಟ್ಟಡದಲ್ಲಿ ಹೂತಿಟ್ಟಿದ್ದ. ಆದರೆ ಆ ಕಟ್ಟಡ ನೆಲಸಮ ಮಾಡಲಾಗಿತ್ತು. ಕೂಲಿಗಳನ್ನು ವಿಚಾರಿಸಲಾಗಿ. ಅವಸರವಾಗಿ ಎಲ್ಲರನ್ನೂ ಊಟಕ್ಕೆ ಕಳುಹಿಸಿದ ಜೆಸಿಬಿ ಚಾಲಕನ ಮಾಹಿತಿ ದೊರೆಯಿತು. ಆತ ಗೋಣಿಯಲ್ಲಿ ಹುಗಿದಿಟ್ಟಿದ್ದ ಹಣ ಮನೆಗೆ ಒಯ್ದಿದ್ದ. ಅದನ್ನು ಖರ್ಚು ಮಾಡಿಲ್ಲ. ಪೋಲೀಸರಿಗೆ ಹಿಂತಿರುಗಿಸಿದ್ದಾನೆ. ಆತನನ್ನು ಎಚ್ಚರಿಸಿ ಸದ್ಯ ಕೇಸು ಹಾಕಿಲ್ಲ.

ಬಂದರು ಠಾಣೆಯಲ್ಲಿ ಕಮಿಶನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದರು.