ಮಂಗಳೂರು:- ಕ್ರಿಶ್ಚಿಯನರು ಮನವಿ ಸಲ್ಲಿಸಿದಾಗ ಮೂರು ಗಂಟೆ ಸಡಿಲಿಸಿದರು; ಓಲಾದವರು ಕೇಳಿದಾಗ ರಾತ್ರಿ ಎರಡರವರೆಗೆ ಎಂದರು; ಬಾರ್ ಜನರು ಮನವಿ ಮಾಡಿದ ಬೆನ್ನಿಗೆ ನೈಟ್‌ ಕರ್ಪ್ಯೂ ತೆಗೆದೇಬಿಟ್ಟರು. ಒಂದೇ ದಿನದಲ್ಲಿ ಮೂರು ಬಾರಿ ನಿರ್ಧಾರ ಬದಲಿಸಿದ ಈ ಬಿಜೆಪಿ ಸರಕಾರದ ಧ್ಯಾನ ಎಲ್ಲಿದೆ ಎಂದು ಮಾಜೀ ಮಂತ್ರಿ ಯು. ಟಿ. ಖಾದರ್ ಪ್ರಶ್ನಿಸಿದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕದ ಬಿಜೆಪಿ ‌ಸರಕಾರದಲ್ಲಿ‌ ಸಮನ್ವಯತೆ ಇಲ್ಲ, ಆರೋಗ್ಯ ಮಂತ್ರಿ ಕೋವಿಡ್ ಎಂದರೆ ಇತರ ಯಾರೋ ಮಂತ್ರಿ, ಮುಖ್ಯ ಮಂತ್ರಿ ಕೋ ಆಪರೇಶನ್ ಇಲ್ಲದೆ ಮಾತನಾಡುತ್ತಾರೆ.

ರೂಪಾಂತರ ಹೊಂದಿದ ಕೊರೋನಾ ಇಂಗ್ಲೆಂಡ್ ದೇಶದಿಂದಲೇ ಬರಬೇಕಿಲ್ಲ. ನಮ್ಮ ದೇಶದಲ್ಲೇ ರೂಪಾಂತರ ಹೊಂದಬಹುದು. ಏನಾದರೂ ತಡೆ ಪರೀಕ್ಷೆ ನಡೆಸಬೇಕು. ಇಂಗ್ಲೆಂಡ್ ನಿಂದ ಬರುವವರೆಗೆ ನೆಗೆಟಿವ್ ಇರಲೇಬೇಕು ಎಂದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೋನಾ ಹೋಗಲಿ ಜ್ವರ ಪರೀಕ್ಷೆ ಕೂಡ ನಡೆಸುತ್ತಿಲ್ಲ. ಜಾರಿ ಸಾಧ್ಯವಿಲ್ಲದಿದ್ದರೆ ನಿಯಮ ಏಕೆ ಮಾಡಬೇಕು ಎಂದು ಖಾದರ್ ಕೇಳಿದರು.

ಎರಡನೇ ಹಂತದ ಕೊರೋನಾ ತಡೆಯಲು ಸರಕಾರ ಏನು ಕ್ರಮ ಕೈಗೊಂಡಿದೆ, ಹೊಸ ಲಸಿಕೆಗೆ ಡ್ರಗ್ ಕಂಟ್ರೋಲ್ ಬೋರ್ಡ್ ಆಫ್ ಇಂಡಿಯಾ ಅನುಮತಿ ನೀಡಿದೆಯೇ, ಬೆಲೆ ಏನು, ಜನರಿಗೆ ವಿತರಣೆ ಹೇಗೆ, ಇದರಿಂದ ಕೊರೋನಾ ಇಲ್ಲವಾಗುತ್ತದೆಯೇ ಎಂದು ಸರಕಾರ ವೈಜ್ಞಾನಿಕವಾಗಿ ಸ್ಪಷ್ಟನೆ ನೀಡಬೇಕು. ಹಿಂದೆ ಕೊರೋನಾ ಕಿಟ್ ತರಿಸಿ, ಕೋಟಿಗಟ್ಟಲೆ ವ್ಯಯಿಸಿದ ಮೇಲೆ ಅದು ಗುಣಮಟ್ಟ ಹೊಂದಿಲ್ಲ ಎಂದು ನಷ್ಟ ಮಾಡಲಾಯಿತು. ಈ ಬಾರಿಯಾದರೂ ಸಮಗ್ರ ಸಿದ್ಧತೆ ಬೇಡವೆ ಎಂದು ಅವರು ಪ್ರಶ್ನಿಸಿದರು.

ಶಿಕ್ಷಣದ ವಿಷಯದಲ್ಲೂ ಗೊಂದಲ ಮುಂದುವರಿದಿದೆ. ಮುಂದಿನ ವರ್ಷ ಕೇಂದ್ರ ಸಿಲೆಬಸ್ ಎನ್ನುವವರು ಅದಕ್ಕೆ ಏನು ತಯಾರಿ‌ ನಡೆಸಿದ್ದಾರೆ? ಕಾಲೇಜು ಆರಂಭ ಮಾಡಿ, ಆನ್ ಲೈನ್, ಆಫ್ ಲೈನ್ ಎರಡೂ ಪಾಠ ನಡೆಸಿ ಎಂದರೆ ಕಾಲೇಜು ಮ್ಯಾನೇಜ್ಮೆಂಟ್ ಏನು ಮಾಡಬೇಕು? ಸ್ಪಷ್ಟವಾದ ಶಿಕ್ಷಣ ನೀತಿ ಅಗತ್ಯ ಎಂದವರು ಪ್ರತಿಪಾದಿಸಿದರು. ಇದರಿಂದ ಹೆತ್ತವರು ಮತ್ತು ವಿದ್ಯಾರ್ಥಿಗಳಿಬ್ಬರೂ ಆತಂಕಕ್ಕೆ ಒಳಗಾಗಿದ್ದಾರೆ.

ಮಂಗಳೂರು ಸುತ್ತ ರೌಡಿ ಚಟುವಟಿಕೆ ಮತ್ತೆ ‌ತಲೆಯೆತ್ತಿದೆ. ಕುತ್ತಾರಿನಲ್ಲಿ ಬೈಕ್ ಮೇಲೆ ಹೋಗುವ ವರನ್ನು‌ ಬೆಂಬತ್ತಿ ಹಲ್ಲೆ ಮಾಡಿದ್ದಾರೆ. ಕಾನೂನು ಪಾಲಕರು ಕೂಡಲೆ ಕ್ರಮ ತೆಗೆದುಕೊಂಡು ಮತ್ತೆ ರೌಡಿ ಚಟುವಟಿಕೆ ಮೇಲೇಳದಂತೆ ಕ್ರಮ ಕೈಗೊಳ್ಳಲು ಖಾದರ್ ಮನವಿ ಮಾಡಿದರು.