ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಾದ್ಯಂತ ರಾಜಾರೋಷವಾಗಿ ಅಂಗಡಿ ಮುಗ್ಗಟ್ಟುಗಳಲ್ಲಿ ಅನಧಿಕೃತ ಮದ್ಯ ಮಾರಾಟ ನಡೆಸುತ್ತಿರುವ ಕುರಿತಂತೆ ಸ್ಥಳೀಯರು ವೇದಿಕೆಗೆ ದೂರು ನೀಡುತ್ತಿದ್ದಾರೆ. ದಿಡುಪೆ, ಮಲವಂತಿಗೆ ಗ್ರಾಮಗಳಲ್ಲಿ ಇದರ ಹಾವಳಿ ವ್ಯಾಪಕವಾಗಿರುವ ಕುರಿತಂತೆ ವರದಿಗಳು ಬಂದಿವೆ. ಅಲ್ಲದೆಜಾತ್ರೆ, ನೇಮ, ಕೋಲಗಳ ನೆಪದಲ್ಲಿ ಕೋಳಿ ಅಂಕ ನಡೆಸಿ ಜೂಜು ನಡೆಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದನ್ನು ಧಾರ್ಮಿಕ, ಜಾನಪದ ಕಲೆಯೆಂದು ಬಿಂಬಿಸಿ ಜೂಜು ನಡೆಸುತ್ತಿರುವುದರಿಂದ ಸ್ಥಳೀಯ ಹೆಣ್ಮಕ್ಕಳಲ್ಲಿ ಆತಂಕ ಸೃಷ್ಟಿಯಾಗಿದೆ. ಇಂತಹ ಜಾತ್ರೆಗಳಲ್ಲಿ ಪಾಲ್ಗೊಂಡ ಪುರುಷರು ಇದ್ದ ಹಣವನ್ನು ಕಳಕೊಂಡು ಆರ್ಥಿಕವಾಗಿ ಕಂಗಾಲಾಗಿ ಬದುಕುವುದನ್ನು ಗಮನಿಸಲಾಗಿದೆ. ಇದರ ಹತೋಟಿ ಮತ್ತು ನಿಯಂತ್ರಣವನ್ನು ಕೂಡಲೇ ಮಾಡಬೇಕೆಂದು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯು ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜ, ತಹಶೀಲ್ದಾರರಾದ ಮಹೇಶ್ ಕುಮಾರ್, ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್‍ಪಿ.ಜಿ. , ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ರವರಲ್ಲಿ ಮನವಿ ನೀಡುವುದರ ಮೂಲಕ ಆಗ್ರಹಿಸಿದೆ.
ಮಾರ್ಚ್ 17ರಂದು ಬೆಳ್ತಂಗಡಿ ಸಮಾಜ ಮಂದಿರದಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಕುರಿತಂತೆ ಸಮಗ್ರ ಚರ್ಚೆ ನಡೆಸಿ ನಿರ್ಣಯಿಸಿದಲ್ಲದೆ ಇದರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಹಕ್ಕೊತ್ತಾಯ ಮಂಡನೆ ನಡೆಸುವುದೆಂದು ತೀರ್ಮಾನಿಸಲಾಯಿತು. ಮುಂದಕ್ಕೆ ವಲಯ ವೇದಿಕೆ ಸಭೆಗಳನ್ನು ಕರೆದು ಪುಂಜಾಲಕಟ್ಟೆ, ಉಪ್ಪಿನಂಗಡಿ, ವೇಣೂರು, ಧರ್ಮಸ್ಥಳ, ನೆಲ್ಯಾಡಿ ಪೋಲಿಸು ಠಾಣೆಗಳಲ್ಲಿಯೂ ಇಂತಹ ಸಮಾಜಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಕುರಿತಂತೆ ಕ್ರಮಕೈಗೊಳ್ಳಲು ಆಗ್ರಹಿಸಲಾಗುವುದೆಂದು ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷರಾಗಿ ಶಾರದಆರ್. ರೈ. ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷರು, ನಿಕಟ ಪೂರ್ವ ಅಧ್ಯಕ್ಷರಾದ ಅಡೂರು ವೆಂಕಟ್ರಾಯ, ಪಿ.ಕೆ. ರಾಜು ಪೂಜಾರಿ, ಡಿ.ಎ.ರಹಿಮಾನ್, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಯೋಜನೆಯ ನಿರ್ದೇಶಕರಾದ ಸತೀಶ್ ಶೆಟ್ಟಿ, ಯೋಜನಾಧಿಕಾರಿಗಳಾದ ಜಯಕರ ಶೆಟ್ಟಿ, ಯಶವಂತ್, ವಲಯಾಧ್ಯಕ್ಷರಾದ ಪುಷ್ಪಾವತಿ, ಮೋಹನ್ ಕೊಕ್ಕಡ, ನಾಮದೇವ್‍ರಾವ್, ಪುರುಷೋತ್ತಮ್, ಮೋನಪ್ಪ, ರುಕ್ಮಯ, ಅಬ್ದುಲ್ ರಹಿಮಾನ್, ಖಾಸಿಂ, ಪ್ರಮೋದ್ ಜೈನ್, ಪದ್ಮನಾಭ, ಪ್ರಭಾಕರ, ಪುಷ್ಪರಾಜ ಜೈನ್ ಉಪಸ್ಥಿತರಿದ್ದರು.