``ಯುವ ಪ್ರತಿಭೆಗಳನ್ನು ಗುರುತಿಸುವ ಹಾಗೂ ಹಿರಿಯರನ್ನು ಗೌರವಿಸುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತಸವಾಗುತ್ತಿದೆ. ಮಾತೃಭಾಷೆಗೆ ದೇಣಿಗೆ ನೀಡಿದ ಕಲಾವಿದರನ್ನು ಗೌರವಿಸುವುದು ಉತ್ತಮ ಕೆಲಸ. ಒಂದು ಭಾಷೆ ಕಲಿಯುವಾಗ ಆ ಜನರ ಸಂಸ್ಕೃತಿ ಮತ್ತು ಯೋಚನಾ ರೀತಿ ತಿಳಿಯುತ್ತದೆ. ಮಾತಾಡುವ ಭಾಷೆಯ ಮುಖಾಂತರ ಮನುಷ್ಯನ ವ್ಯಕ್ತಿತ್ವದ ಅರಿವಾಗುತ್ತದೆ. ಭಾಷೆಯ ಕೆಲಸದಲ್ಲಿ, ಪ್ರತಿಭೆಗಳ ಹುಡುಕಾಟದಲ್ಲಿ ಮಾಂಡ್ ಸೊಭಾಣ್ ಕಾರ್ಯ ಪ್ರಶಂಸನೀಯ’’. ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅಭಿಪ್ರಾಯ ಪಟ್ಟರು. ಇವರು ನಗರದ ಕಲಾಂಗಣದಲ್ಲಿ 02-01-2022 ರಂದು ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಕೊಂಕಣಿಯ ಬಹು ಪ್ರಖ್ಯಾತ ರಿಯಾಲಿಟಿ ಶೋ `ಎಂಸಿಸಿ ಬ್ಯಾಂಕ್ ಲಿ. ಸೋದ್ 5 ಮ್ಯಾಂಗೋವಾ’ ಇದರ ವಿಜೇತರನ್ನು ಗೌರವಿಸಿ ಮಾತನಾಡುತ್ತಿದ್ದರು.
ಬಿಷಪ್ ಹಾಗೂ ಮರಾಠಿ ಸಿನೆ ಕ್ಷೇತ್ರದ ಪ್ರಖ್ಯಾತ ಸಂಗೀತ ನಿರ್ದೇಶಕ ಅಶೋಕ್ ಪಾತ್ಕಿ ಇವರು ರಾಯ್ ಕೊಗುಳ್ (ರಾಜ ಕೋಗಿಲೆ) ಆಗಿ ಆಯ್ಕೆಯಾದ ವೈಭವ್ ವಿಶ್ವಾಸ್ ಕಾಮತ್ ಗೋವಾ ಹಾಗೂ ರಾಣಿ ಕೊಗುಳ್ (ರಾಣಿ ಕೋಗಿಲೆ) ಆಗಿ ಆಯ್ಕೆಯಾದ –ಸೋನಲ್ ಆಗ್ನೆಸ್ ಮೊಂತೇರೊ ಮಂಗಳೂರು ಅವರನ್ನು ರೂ. 50,000/- ನಗದು ನೀಡಿ, ಕಿರೀಟ ತೊಡಿಸಿ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ವಿಜೇತರಿಗೆ ಎಸ್ ಕೆ ಎ ಲಂಡನ್ ಇವರ ವತಿಯಿಂದ ಒಂದು ಕಾರ್ಯಕ್ರಮ ನೀಡಲು ಮುಂದಿನ ದಿನಗಳಲ್ಲಿ ಲಂಡನ್ನಿಗೆ ತೆರಳುವ ಅವಕಾಶ ಲಭಿಸಲಿದೆ.
ಇದೇ ಸಂದರ್ಭದಲ್ಲಿ ಗೋವಾದ ಗಾಯನ ಕೋಗಿಲೆ ಲೋರ್ನಾ ಕೊರ್ಡೆರೊ ಅವರಿಗೆ ಜೀವಮಾನ ಸಾಧನೆ ಪುರಸ್ಕಾರವನ್ನು ಬಿಷಪರು ಘೋಷಿಸಿದರು. ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಆಗಮಿಸಲು ಅಸಾಧ್ಯವಾದ ಕಾರಣ ಅವರಿಗೆ ರೂ. 1 ಲಕ್ಷ, ಶಾಲು, ಸ್ಮರಣಿಕೆ ಮತ್ತು ಫಲಪುಷ್ಪ ಒಳಗೊಂಡ ಪುರಸ್ಕಾರವನ್ನು ಮುಂದಿನ ದಿನಗಳಲ್ಲಿ ಅವರ ಸ್ವಗೃಹದಲ್ಲಿ ಹಸ್ತಾಂತರಿಸಲಾಗುವುದು.
ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ದಾಯ್ಜಿವರ್ಲ್ಡ್ ಆಡಳಿತ ನಿರ್ದೇಶಕ ವಾಲ್ಟರ್ ಡಿಸೋಜ, ಗೋವನ್ ವರ್ಲ್ಡ್ ಡಾಟ್ ಕೊಮ್ ಇದರ ನಿರ್ದೇಶಕ ಜೊಯ್ ಫೆರ್ನಾಂಡಿಸ್ ಹಾಗೂ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಮತ್ತು ಅಧ್ಯಕ್ಷ ಲುವಿ ಪಿಂಟೊ ಉಪಸ್ಥಿತರಿದ್ದರು.
ಗಾಯಕಿ ಸೋನಿಯಾ ಶಿರ್ಸಾಟ್ ಗೋವಾ, ಸಂಗೀತಗಾರರಾದ ಕ್ಯಾಜಿಟನ್ ಡಾಯಸ್, ಬೆಂಗಳೂರು ಹಾಗೂ ನಿತಿನ್ ಕೂಟೂಂಗಳ್, ಕೇರಳ ಇವರುಗಳು ತೀರ್ಪುದಾರರಾಗಿ ಸಹಕರಿಸಿದರು.
ಈ ಕಾರ್ಯಕ್ರಮದ ಪೋಷಕರನ್ನು ಬಿಷಪರು ಸ್ಮರಣಿಕೆ ನೀಡಿ ಅಭಿನಂದಿಸಿದರು. ಅದೇ ರೀತಿ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ಕಲಾಂಗಣ್ ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊ ಹೂಗುಚ್ಛದ ಗೌರವ ನೀಡಿದರು.
ಕಾರ್ಯಕ್ರಮದಲ್ಲಿ ಇಂದು ನಿಧನರಾದ ಕೊಂಕಣಿ ಮುಂದಾಳು ಬಸ್ತಿ ವಾಮನ್ ಶೆಣೈ ಇವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಾಚ್ ಸೊಭಾಣ್ ನೃತ್ಯಗಳು, ಸುಮೇಳ್ ಗಾಯನ ಹಾಗೂ ಮಾಂಡ್ ತಂಡದಿಂದ ಕ್ರಿಸ್ಮಸ್ ಆಟಗಳ ಪ್ರದರ್ಶನ ನಡೆಯಿತು. ಸೋದ್ ಕಾರ್ಯಕ್ರಮವನ್ನು ಅರುಣ್ ರಾಜ್ ರಾಡ್ರಿಗಸ್ ಹಾಗೂ ಸಭಾ ಕಾರ್ಯಕ್ರಮವನ್ನು ಡಾ. ಮೋನಾ ಮೆಂಡೊನ್ಸಾ ಮತ್ತು ಪ್ರಿಥುಮಾ ಮೊಂತೆರೊ ನಿರ್ವಹಿಸಿದರು.