ವಿದ್ಯಾಗಿರಿ: ‘ಯಾವುದೇ ಕಾರ್ಯದಲ್ಲಿ ಪರಿಪೂರ್ಣತೆ ಇದ್ದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ರಿಟೇಕ್ ಇಲ್ಲದ ಅಭಿನಯವೇ ಅತ್ಯುತ್ತಮ ಪ್ರಸ್ತುತಿ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನೇತೃತ್ವದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ತರಬೇತಿ ಪಡೆದ ಆಳ್ವಾಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನ ಮೋಹಿನಿ ಅಪ್ಪಾಜಿ ನಾಯ್ಕ್ ಸಭಾಂಗಣದಲ್ಲಿ ಹಮ್ಮಿಕೊಂಡ ‘ನಾಯಿಮರಿ’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

‘ಪ್ರತಿ ಕೆಲಸದಲ್ಲೂ ಪಕ್ವತೆ ಸಾಧಿಸಲು ಪ್ರಯತ್ನಿಸಬೇಕು. ಸಮಯಪ್ರಜ್ಞೆ ಇದ್ದಾಗ ಸುಸೂತ್ರವಾಗಿ ಕಾರ್ಯ ನೆರವೇರಲು ಸಾಧ್ಯ. ರಂಗ ಅಭಿಯನದಲ್ಲಿ ‘ರಿಟೇಕ್’ಗೆ ಅವಕಾಶ ಇಲ್ಲ. ರಂಗಕರ್ಮಿಗಳು ತರಬೇತಿಯಲ್ಲೇ ಪಕ್ವತೆ ಸಾಧಿಸಬೇಕು. ಆಗ ಮಾತ್ರ ಪರಿಪೂರ್ಣತೆ ಹೊಂದಲು ಸಾಧ್ಯ’ ಎಂದು ವಿವರಿಸಿದರು. 

ನಾಟಕವನ್ನು ನಿರ್ದೇಶಿಸಿದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಜೀವನ್ ರಾಂ ಸುಳ್ಯ ಮಾತನಾಡಿ, ‘ವೈದೇಹಿ ರಚಿಸಿದ ಈ ಕೃತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ನಾಟಕ ಮಾಡುವಂತೆ 2010ರಲ್ಲಿ ಸೂಚಿಸಿದ್ದರು. ಅವರ ಆಶಯದಂತೆ ಅಂದು ಪ್ರದರ್ಶನ ಕಂಡು ಯಶಸ್ವಿಯಾಗಿದ್ದ ನಾಟಕವು 13 ವರ್ಷಗಳ ಬಳಿಕ ಮತ್ತೆ ರಂಗದ ಮೇಲೆ ಬರುತ್ತಿದೆ’ ಎಂದರು. 

‘ಪಿಯುಸಿಯ ವಿದ್ಯಾರ್ಥಿಗಳು ಸತತ ಎರಡೂವರೆ ತಿಂಗಳು ಅಭ್ಯಾಸ ಮಾಡಿದ್ದು, ನಾಟಕಕ್ಕೆ ನ್ಯಾಯ ನೀಡಿದ್ದಾರೆ’ ಎಂದರು. 

ನಾಟಕವನ್ನು ಅತಿಥಿಗಳು ದೀಪ ಬೆಳಗಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅತಿಥಿಗಳಿಗಿಂತ ಮೊಲದೇ ಪುಟಾಣಿ ವೇದ್ (ವಿವೇಕ್ ಆಳ್ವ ಪುತ್ರ) ಡೋಲು ಬಡಿದು ಉದ್ಘಾಟಿಸಿರುವುದು ಗಮನ ಸೆಳೆಯಿತು. 

ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಇದ್ದರು.