ಮಂಗಳೂರು, ಡಿ 04: ಡೊಂಗರಕೇರಿಯ ಕೆನರಾ ಶಾಲಾ ಸಭಾಂಗಣದಲ್ಲಿ ಕರ್ನಾಟಕ ಲೇಖಕಿಯರ ಮತ್ತು ವಾಚಕಿಯರ ಸಂಘದ ಮೂಲಕ ಮಹಿಳಾ ಸಾಹಿತ್ಯೋತ್ಸವ ಮತ್ತು ತೌಳವ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಯಶಸ್ವಿಯಾಗಿ ನಡೆಯಿತು.
ದ. ಕ. ಜಿ. ಪಂ. ಅಧಿಕಾರಿ ಡಾ. ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಸಾಹಿತ್ಯ ಪ್ರೇಮಿಯಾದ ನನಗೆ ಸಾಹಿತ್ಯ ಪ್ರೇಮವನ್ನು ಪಸರಿಸುವ ಕಲೇವಾ ಸಂಘದ ಬಗೆಗೆ ನನಗೆ ವಿಶೇಷ ಗೌರವ ಇದೆ. ಸ್ವಾಸ್ಥ್ಯ ಸಮಾಜ ನಿರ್ಮಾದಲ್ಲಿ ಮಹಿಳೆಯರ ಪಾತ್ರ ಹಿರಿದು. ಆದರೆ ಇಂದಿಗೂ ಅವರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಮನೆ ಬೆಳಗುವ ಹೆಣ್ಣು ಲೋಕದ ಬೆಳಕು, ಭರವಸೆಯ ಬೆಳಕು ಎಂದು ಅವರು ಹೇಳಿದರು.
ನಿವೃತ್ತ ಪ್ರಾಧ್ಯಾಪಕಿ ಜಯಮ್ಮ ಚೆಟ್ಟಿಮಾಡ ಅವರಿಗೆ ಕಲೇವಾ ವತಿಯಿಂದ ತೌಳವ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮುಂಬಯಿಯ ಪ್ರಾಧ್ಯಾಪಕಿ ಸನೀತಾ ಶೆಟ್ಟಿಯವರು ಈ ದತ್ತಿ ಪ್ರಶಸ್ತಿಯ ಸ್ಥಾಪಕರು.
ಮಂಗಳೂರು ತೆಂಕಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಾಹಿತ್ಯ ಕ್ಷೇತ್ರಕ್ಕೆ ಈ ಕಾರ್ಯಕ್ರಮವು ಶಕ್ತಿ ನೀಡಿದೆ, ಕೊಡುಗೆಯನ್ನು ನೀಡಿದೆ. ಪ್ರಾಮಾಣಿಕ ಸೇವೆ ಮತ್ತು ಸಾಹಿತ್ಯಾಸಕ್ತ ಡಾ. ಕುಮಾರ್ ಅವರು ಇಲ್ಲಿ ಇರುವುದು ಕಲೇವಾದ ಗೌರವಕ್ಕೆ ಕೋಡು ಮೂಡಿಸಿದೆ. ಯಶಸ್ವಿ ಮಹಿಳೆಯರು ಇಲ್ಲಿದ್ದಾರೆ. ಅವರು ನಿರಂತರ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡಲಿ. ಕಲೇವಾ ಸಂಘಕ್ಕೆ ಎಂದೋ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕಾಗಿತ್ತು. ಕೊಟ್ಟದ್ದು ತಡ. ನೀವು ಅದರ ಹಕ್ಕುದಾರರು. ಈ ಸಂಘವು ಮಹಿಳಾ ಲೋಕಕ್ಕೆ ಪ್ರೇರಣೆಯಾಗಲಿ ಎಂದು ವೇದವ್ಯಾಸ ಕಾಮತ್ ಹೇಳಿದರು.
ಕಲೇವಾ ಸಂಘದ ಅಧ್ಯಕ್ಷೆ ಜ್ಯೋತಿ ಚೇಳ್ಯಾರ್ ಮೊದಲು ಎಲ್ಲರನ್ನೂ ಸ್ವಾಗತಿಸಿದರು. ಗಣೇಶ್ ಕುಲಾಲ್, ಸುಮಲತ ಸುವರ್ಣ, ಸುಮನ ಘಾಟೆ, ಜಿತೇಂದ್ರ ಕುಮಾರ್ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳೆಯರೇ ಬರೆದ ಕವಿತೆಗಳನ್ನು ಮಹಿಳೆಯರೇ ಓದಿ ಭಾವ ಲಹರಿಯನ್ನು ಹರಿಸಿದರು.
ಕಲೇವಾ ಕಾರ್ಯದರ್ಶಿ ಸುಜಾತಾ ಕೊಡ್ಮಣ್ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲು ಮಹಿಳಾ ಸ್ಮೃತಿ ವಿಸ್ಮೃತಿ ಬಗೆಗೆ ಲೇಖಕಿ ಚಿಂತಕಿ ಸಿಹಾನಾ ಬಿ. ಎಂ. ಮಾತನಾಡಿದರು. ಅರಾಬಿಕ್ ಕಲಿಸುವ ನನಗೆ ಕನ್ನಡದ ಕರೆ ಒದಗುತ್ತಿರುವುದು ಅಸ್ಮಿತೆಯ ಫಲ. ಮಹಿಳೆಯರು ದೌರ್ಜನ್ಯ ಮುಕ್ತರಾಗಿಲ್ಲ. ನಮ್ಮ ಹುಟ್ಟು ನಮ್ಮ ಸ್ವಾತಂತ್ರ್ಯಕ್ಕಾಗಿ ಎಂದು ವಿವೇಕಾನಂದರು ಹೇಳಿದ್ದು ಮಹಿಳೆಯರ ವಿಷಯದಲ್ಲಿ ಸಾಕಷ್ಟು ಕೆಲಸ ಮಾಡಿದೆ. ನಮ್ಮ ಹೋರಾಟವು ವಿಚಾರಗಳ ಮೂಲಕ ಆಗಬೇಕು. ಸಿಸ್ಟರ್ ನಿವೇದಿತಾ ಈ ನೆಲದ ಮಣ್ಣಿನ ಮಕ್ಕಳ ಜೊತೆಗೆ ಸೇರಿ ಕೊಲ್ಕತ್ತಾದಲ್ಲಿ ಆರಂಭಿಸಿದ ಮಹಿಳಾ ಶಾಲೆ ಇಂದಿಗೂ ಪ್ರಸ್ತುತ. ಇತಿಹಾಸದ ಅಧ್ಯಯನ ಎಂದರೆ ಹಿಂದೆ ಆದ ತಪ್ಪು ಮುಂದೆ ಆಗದಂತೆ ನಡೆಯುವುದಾಗಿದೆ. ಗಾಂಧೀಜಿಯವರ ಸ್ವಾತಂತ್ರ್ಯ ಸಂಚಲನದಲ್ಲಿ ಮಹಿಳೆಯರ ಪಾತ್ರ ಮರೆಯುವಂತಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಮಹಿಳಾ ಹಕ್ಕುಗಳ ಬಗೆಗೆ ಈ 21ನೇ ಶತಮಾನದಲ್ಲಿ ಸಹ ಮಹಿಳೆಯರು ಹೋರಾಡಬೇಕಾಗಿರುವುದು ವಿಪರ್ಯಾಸವೆಂದು ಸಿಹಾನಾ ಹೇಳಿದರು. ಸಾಕಷ್ಟು ಸಾಧನೆಗಳ ನಡುವೆಯೂ ನಾವು ಇನ್ನೂ ಸ್ವತಂತ್ರರಲ್ಲ ಎಂದೂ ಅವರು ಹೇಳಿದರು.
ಪ್ರಾಧ್ಯಾಪಕಿ ಮಹೇಶ್ವರಿಯವರ ವಿಚಾರವನ್ನು ವೇದವತಿಯವರು ಮುಂದಿಟ್ಟರು. ಸಂವಿಧಾನದ ಆಧಾರದಲ್ಲಿ ನಮ್ಮ ಹೋರಾಟ ನಡೆದಿದ್ದರೂ ನಮ್ಮ ಬಿಡುಗಡೆ ಎಂದು ಪ್ರಶ್ನೆ ಈಗಲೂ ಇದೆ ಎಂದು ಅವರು ಹೇಳಿದರು.
ಮನರಂಜನಾ ಕಾರ್ಯಕ್ರಮ ಕಜ್ಜಸುಂದರಿ
ಪೂರ್ಣಿಮಾ ಸುರೇಶ್ ಅವರಿಂದ ಸತ್ಯನಾಪುರದ ಸಿರಿ ಏಕ ವ್ಯಕ್ತಿ ರೂಪಕ
ಮಹಿಳೆಯರಿಂದ ನಾನಾ ನ್ಯಾನೋ ಕತೆಗಳು