ಪುತ್ತೂರು : ಏಳಿ, ಎದ್ದೇಳಿ.ಗುರಿ ಮುಟ್ಟುವ ತನಕ ವಿಶ್ರಮಿಸದಿರಿ ಎಂದು ಕರೆ ನೀಡಿದ ಸ್ವಾಮಿ ವಿವೇಕಾನಂದರ ಚಿಂತನೆಗಳೇ ನಮಗೆ ಆದರ್ಶವಾಗಬೇಕು. ಜೀವನದಲ್ಲಿ ಎದುರಾಗುವ ಸವಾಲುಗಳು ಅನೇಕ. ಅವುಗಳನ್ನು ಧೈರ್ಯದಿಂದ ಎದುರಿಸಬೇಕು. ಸವಾಲುಗಳನ್ನು ಎದುರಿಸುವಛಲ ನಮಗೆ ಅಗತ್ಯ. ಯಾವುದೇ ವಿಚಾರ ಇರಬಹುದು, ಒಪ್ಪುವ ಮುನ್ನ ವೈಜ್ಞಾನಿಕವಾಗಿ, ತಾರ್ಕಿಕ ನೆಲೆಯಲ್ಲಿ ಆಲೋಚಿಸಬೇಕು. ರೂಢಿಯಿಂದ ಬಂದ ಚಿಂತನೆಗಳಿಂದ ಹೊರಬಂದು ಸೃಜನಾತ್ಮಕವಾಗಿ ಆಲೋಚಿಸಬೇಕಾಗಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ ಹೇಳಿದರು. ಸಂತ ಫಿಲೋಮಿನಾ ಕಾಲೇಜು ಮತ್ತು ಸಂತ ಫಿಲೋಮಿನಾ ಹೈಸ್ಕೂಲಿನ ಎನ್‍ಸಿಸಿ ಘಟಕಗಳು ಜಂಟಿಯಾಗಿ ಆಯೋಜಿಸಿದ ಸ್ವಾಮಿ ವಿವೇಕಾನಂದ 159ನೇ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. 

ರಾಷ್ಟ್ರೀಯಯುವ ದಿನಾಚರಣೆ–2022 ನ್ನುಆನ್ಲೈನ್ ವೆಬಿನಾರ್ ಮೂಲಕ ಉದ್ಘಾಟಿಸಿ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಸಂದೇಶ ಭಾಷಣದ ಪ್ರಸಾರವನ್ನು ವೀಕ್ಶಿಸುವ ವ್ಯವಸ್ಥೆಯನ್ನುಈ ಸಂದರ್ಭದಲ್ಲಿ ಮಾಡಲಾಗಿತ್ತು. ಎನ್‍ಸಿಸಿ ಕ್ಯಾಡೆಟ್ ಮತ್ತುಇತರ ವಿದ್ಯಾರ್ಥಿಗಳು ಪ್ರಧಾನಿಯವರ ಭಾಷಣವನ್ನು ವೀಕ್ಷಿಸಿದರು.  

ಸಂತ ಫಿಲೋಮಿನಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ವ.ವಿಜಯ್ ಲೊಬೋ ಮತ್ತು ಸಂತ ಫಿಲೋಮಿನಾ ಹೈಸ್ಕೂಲಿನ ಎನ್‍ಸಿಸಿ ಘಟಕದ ಸಂಚಾಲಕ ಪೀಟರ್ ನರೇಶ್ ಲೊಬೊ ಉಪಸ್ಥಿತರಿದ್ದರು. ಕಾಲೇಜಿನ ಎನ್‍ಸಿಸಿ ಅಧಿಕಾರಿ ಲೆಫ್ಟಿನೆ0ಟ್ ಜಾನ್ಸನ್‍ ಡೆವಿಡ್ ಸಿಕ್ವೆರಾ ಸ್ವಾಗತಿಸಿದರು ಮತ್ತು ಪ್ರಸ್ತಾವಿಸಿದರು. ಕ್ಯಾಡೆಟ್ ಸಮೃದ್ಧಿ ಶೆಣೈಕಾರ್ಯಕ್ರಮ ನಿರ್ವಹಿಸಿದರು.