ಪಾಂಡೇಶ್ವರ ಮತ್ತು ಹೊಯ್ಗೆ ಬಜಾರ್ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ವತಿಯಿಂದ “ಅವೇಕ್ ಕುಡ್ಲ” ಪರಿಕಲ್ಪನೆಯಡಿ ಮಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ಇವರ ಸಹಯೋಗದೊಂದಿಗೆ “ಸಂಚಾರ ಸುರಕ್ಷತೆ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮ” ವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮಕ್ಕೆ ಕೆ. ರವಿಶಂಕರ್, ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ), ಮಂಗಳೂರು ನಗರ ಪೊಲೀಸ್ ಇವರು ಟ್ರಾಫಿಕ್ ಬ್ಯಾರಿಕೇಡ್ಸ್ ಹಾಗೂ ರೈಲ್ವೆ ಗೇಟ್ ವೇಳಾಪಟ್ಟಿ ಫಲಕಗಳನ್ನು ಬಿಡುಗಡೆ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಿದರು.


ಜಾಗೃತಿ ಕಾರ್ಯಕ್ರಮದ ಅಂಗವಾಗಿ, ಟ್ರಸ್ಟ್‌ನ “ಅವೇಕ್ ಕುಡ್ಲ” ತಂಡವು ಸ್ಥಳೀಯ ಸ್ವಯಂಸೇವಕರ ಸಹಕಾರದೊಂದಿಗೆ, ರೈಲ್ವೆ ಗೇಟ್ ಮುಚ್ಚುವ ಸಮಯದಲ್ಲಿ ಸಾರ್ವಜನಿಕರಿಗೆ ಲೇನ್ ಡಿಸಿಪ್ಲಿನ್, ಸಂಚಾರ ಶಿಸ್ತು ಹಾಗೂ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಪಾಲನೆಯ ಅಗತ್ಯತೆಯನ್ನು ವಿವರಿಸಿ, ತಾಳ್ಮೆ ಹಾಗೂ ಸಹಕಾರದಿಂದ ನಡೆದುಕೊಳ್ಳುವಂತೆ ಮನವಿ ಮಾಡಲಾಯಿತು.



ಈ ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಆಯುಕ್ತರಾದ ಕೆ. ರವಿಶಂಕರ್ ಹಾಗೂ ಅವರ ಸಂಪೂರ್ಣ ತಂಡ, ಮಾಜಿ ಕಾರ್ಪೊರೇಟರ್ ಲತೀಫ್ (ಪೋರ್ಟ್ ವಾರ್ಡ್), ಮಾಜಿ ಮೇಯರ್ ಹಾಗೂ ಕಾರ್ಪೊರೇಟರ್ ದಿವಾಕರ್ (ಪಾಂಡೇಶ್ವರ ವಾರ್ಡ್), ಟ್ರಸ್ಟಿನ ಅಧ್ಯಕ್ಷರಾದ ಸೀತಾರಾಮ ಎ., ಪ್ರಧಾನ ಕಾರ್ಯದರ್ಶಿ ಉಮಾನಾಥ್ ಕೋಟೆಕಾರ್, ಟ್ರಸ್ಟಿನ ತಜ್ಞರ ಸಮಿತಿಯ ಸದಸ್ಯರಾದ ಮಂಜುಳಾ ಜಿ ಹಾಗೂ ಮನೋಹರ್ ಪ್ರಭು, ಟ್ರಸ್ಟ್‌ನ ಖಜಾಂಚಿ ರಾಮ ದೇವಾಡಿಗ, ಕಾರ್ಯಕ್ರಮ ಸಂಯೋಜಕರಾದ ಪುನೀತ್ ಪೂಜಾರಿ, ವಾರ್ಡ್ ಸಂಯೋಜಕರಾದ ಸರಿತಾ, ಕಚೇರಿ ಸಂಯೋಜಕರಾದ ನೇಹಾ, ಟ್ರಸ್ಟಿನ ಸಂಪೂರ್ಣ ತಂಡ ಹಾಗೂ ಪ್ರಮುಖ ಸ್ಥಳೀಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಂಜುಳಾ ಜಿ ಅವರು, ಟ್ರಸ್ಟ್ ವತಿಯಿಂದ ತ್ಯಾಜ್ಯ ಮತ್ತು ಸಂಚಾರ ನಿರ್ವಹಣೆ ಕ್ಷೇತ್ರದಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾರ್ಯಗಳ ಬಗ್ಗೆ ವಿವರಿಸಿದರು. ನಂತರ ಮಾತನಾಡಿದ ಉಪ ಪೊಲೀಸ್ ಆಯುಕ್ತರಾದ ಕೆ. ರವಿಶಂಕರ್, ಟ್ರಸ್ಟ್‌ನ ಧ್ಯೇಯ ಮತ್ತು ಕಾರ್ಯಪದ್ದತಿಯನ್ನು ಶ್ಲಾಘಿಸಿ, ಸಂಚಾರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜನಸಹಭಾಗಿತ್ವ ಅತ್ಯಂತ ಅಗತ್ಯ ಎಂದು ತಿಳಿಸಿದರು. ದಿನನಿತ್ಯದ ಸಂಚಾರ ಸಮಸ್ಯೆಗಳ ಸಂದರ್ಭದಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ, ಮಾನ್ಯ ಸಚಿವರಿಂದ ಜ. 25 ರಂದು ಉದ್ಘಾಟನೆಯಾಗಲಿರುವ ಮಹಾಕಾಳಿ ಪಡ್ಪು ರೈಲ್ವೆ ಅಂಡರ್‌ಪಾಸ್ ಕುರಿತು ಮಾತನಾಡಿದ ಅವರು, ಪ್ರಾರಂಭದ ಕೆಲವು ದಿನಗಳಲ್ಲಿ ಪಾಂಡೇಶ್ವರ ಮತ್ತು ಹೊಯ್ಗೆ ಬಜಾರ್ ರೈಲ್ವೆ ಕ್ರಾಸಿಂಗ್‌ಗಳ ಬಳಿ ವಾಹನಗಳ ದಟ್ಟಣೆ ತಾತ್ಕಾಲಿಕವಾಗಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿ, ಮುಂದಿನ ದಿನಗಳಲ್ಲಿ ಇದಕ್ಕೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂಬ ಭರವಸೆಯನ್ನು ನೀಡಿದರು.
ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಅಧ್ಯಯನದ ಆಧಾರದ ಮೇಲೆ ಸಾರ್ವಜನಿಕರಿಗೆ ನಾಲ್ಕು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಯಿತು. ಅವುಗಳಲ್ಲಿ ಮೊರ್ಗನ್ಸ್ ಗೇಟ್ – ಮಾರ್ನಮಿಕಟ್ಟೆ – ಕೋಟಿ ಚೆನ್ನಯ್ಯ ಜಂಕ್ಷನ್ – ಕೆಎಂಸಿ ಅತ್ತಾವರ – ರೈಲ್ವೆ ಸ್ಟೇಷನ್ ರಸ್ತೆ – ಎ.ಬಿ. ಶೆಟ್ಟಿ ವೃತ್ತ, ಮೊರ್ಗನ್ಸ್ ಗೇಟ್ – ಮಾರ್ನಮಿಕಟ್ಟೆ – ಕೋಟಿ ಚೆನ್ನಯ್ಯ ಜಂಕ್ಷನ್ – ಕಂಕನಾಡಿ ಜಂಕ್ಷನ್ – ಫಳ್ನೀರ್ – ಮಿಲಾಗ್ರಿಸ್ – ಹಂಪನ್ಕಟ್ಟೆ, ಮೊರ್ಗನ್ಸ್ ಗೇಟ್ – ಜೆಪ್ಪು ಮಾರ್ಕೆಟ್ – ಕಾಶಿಯ ಜಂಕ್ಷನ್ – ಎಮ್ಮೆಕೆರೆ ಕ್ರಾಸ್ ರಸ್ತೆ – ರಾಮಕೃಷ್ಣ ಆಶ್ರಮ ರಸ್ತೆ – ಪಾಂಡೇಶ್ವರ, ಹಾಗೂ ಮೊರ್ಗನ್ಸ್ ಗೇಟ್ – ಜೆಪ್ಪು ಮಾರ್ಕೆಟ್ – ಬೋಳಾರ – ಹೊಯ್ಗೆ ಬಜಾರ್ – ರೊಸಾರಿಯೋ ರಸ್ತೆ ಸೇರಿವೆ. ಈ ಮಾರ್ಗಗಳನ್ನು ಪರ್ಯಾಯವಾಗಿ ಬಳಸಿದರೆ ಸಂಚಾರ ದಟ್ಟಣೆ ಕಡಿಮೆಯಾಗಲು ಹಾಗೂ ನಿರ್ವಹಣೆ ಸುಲಭವಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಸಾರ್ವಜನಿಕರು ಜಾಗೃತರಾಗಿದ್ದು ಲೇನ್ ಡಿಸಿಪ್ಲಿನ್ ಹಾಗೂ ಎಲ್ಲಾ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಲಾಯಿತು. ಭವಿಷ್ಯದಲ್ಲಿ ಪಾಂಡೇಶ್ವರ ರಸ್ತೆ ಅಗಲೀಕರಣ, ದ್ವಿಮುಖ ರಸ್ತೆ ವ್ಯವಸ್ಥೆ, ಪಡೀಲ್‌ಗೆ ಸ್ಥಳಾಂತರ ಸೇರಿದಂತೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಸಂಚಾರ ಪೊಲೀಸ್, ರೈಲ್ವೆ ಇಲಾಖೆ ಹಾಗೂ ಇತರ ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಶಾಶ್ವತ ಪರಿಹಾರ ಕೈಗೊಳ್ಳುವುದಾಗಿ ತಿಳಿಸಿದರು.
