“ಮಕ್ಕಳನ್ನು ಉತ್ತಮ ಮನುಷ್ಯರನ್ನಾಗಿ ಮಾಡಲು ಬಾಲ್ಯದಲ್ಲಿ ಈ ವಿಷಯಗಳನ್ನು ಕಲಿಸಿ” – Article by Naveen Habib

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅನ್ನೋ ಮಾತಿದೆ. ಆದರೆ ಆ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಪ್ರಸ್ತುತ ಕಾಲದಲ್ಲಿ ಮಕ್ಕಳಿಗೆ ಉತ್ತಮ ಊಟ, ಬಟ್ಟೆ,ಮತ್ತು ಒಳ್ಳೆಯ ಶಾಲೆಗೆ ದಾಖಲಾತಿ ಮಾಡಿಸಿ ಕೈ ಬಿಟ್ಟರಷ್ಟೇ ಸಾಲದು, ಏಕೆಂದರೆ ಇವಾಗಿನ ಮಕ್ಕಳು ಬಹಳಷ್ಟು ಸೂಕ್ಷ್ಮ ಮನಸ್ಥಿತಿಯನ್ನು ಉಳ್ಳವರು ಆದ್ದರಿಂದ ಮಕ್ಕಳ ಸಂಪೂರ್ಣ ವ್ಯಕ್ತಿತ್ವದತ್ತ ಗಮನ ಹರಿಸಬೇಕಾಗಿರೋದು ಪೋಷಕರ ಕರ್ತವ್ಯ. ಹಾಗಾದರೆ ಪೋಷಕರು ಏನು ಮಾಡಬೇಕು ಅನ್ನೋದನ್ನ ನಾನು ಈ ಕೆಳಗೆ ಹೇಳುವ ಪ್ರಯತ್ನ ಮಾಡಿದ್ದೇನೆ. ಓದಿ…

  1. ಸೋಲನ್ನು ಸ್ವೀಕರಿಸುವ ಧೈರ್ಯ : ಹೌದು ಇವಾಗಿನ ಕಾಲಕ್ಕೆ ಇದು ತುಂಬಾ ಅವಶ್ಯಕ. ನಿಮ್ಮ ಮಕ್ಕಳಿಗೆ ಸೋಲುವುದನ್ನು ಹೇಳಿಕೊಡಿ. ಕೇವಲ ಬರಿ ಗೆಲ್ಲಬೇಕು ಎಂದು ಒತ್ತಡ ಹೇರುತ್ತಿದ್ದರೆ ಮುಂದೆ ಯಾವುದೊ ಒಂದು ದಿನ ಅವರು ಸೋತಾಗ ಅವರಿಗೇ ಅದನ್ನ ಸ್ವೀಕರಿಸೋಕೆ ಕಷ್ಟವಾಗಬಹುದು. ಅನೇಕ ಬಾರಿ ಅವರಿಗೇ ತಮ್ಮ ಸಣ್ಣಪುಟ್ಟ ವೈಫಲ್ಯಗಳನ್ನು ಕೂಡ ಸಹಿಸಿಕೊಳ್ಳುವ ಶಕ್ತಿ ಇರುವದಿಲ್ಲ. ಆ ಕಾರಣಕ್ಕೆ ಏನೋ ಇತ್ತೀಚಿಗೆ ಮಕ್ಕಳ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿದೆ. ಆದ ಕಾರಣ ಮಕ್ಕಳಲ್ಲಿ ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸುವ ಕಾರ್ಯ ಪಾಲಕರು ಮಾಡಬೇಕು.
  2. ಸೃಜನಶೀಲತೆಯ ಅಭಿವೃದ್ಧಿ : ಮಗು ಹುಟ್ಟಿದ ತಕ್ಷಣ ಪಾಲಕರು ಅವರನ್ನ ವೈದ್ಯ, ಇಂಜಿನಿಯರ್, ಐ ಎ ಎಸ್, ಅಧಿಕಾರ ಮತ್ತು ಇನ್ನಿತರನ್ನಾಗಿ ಮಾಡುವ ಕನಸು ಕಾಣುತ್ತಾರೆ. ಆದರೆ ಯಾವತ್ತೂ ಕೂಡ ಮಕ್ಕಳ ಆಸಕ್ತಿ ಏನು ಎಂಬುದನ್ನು ತಿಳಿಯುವ ಪ್ರಯತ್ನ ಮಾಡೋಲ್ಲ. ಅದಕ್ಕೆ ಪಾಲಕರು ಮೊದಲು ಮಕ್ಕಳ ಆಸಕ್ತಿಯನ್ನು ಅರಿತುಕೊಂಡು ಅವರ ಸೃಜನಶೀಲತೆ ಅಭಿವೃದ್ಧಿಪಡಿಸುವಂತಹ ತರಬೇತಿ ನೀಡಬೇಕು. ಅವರ ಅಸಕ್ತಿ ಕಲೆ, ಸಾಹಿತ್ಯ, ವಿಜ್ಞಾನ, ಮತ್ತು ಕ್ರೀಡೆ, ಯಾವುದೇ ಕ್ಷೇತ್ರದಲ್ಲಿರಲಿ ಅದನ್ನು ಗುರುತಿಸಿ ಅವರಿಗೇ ಬೆಂಬಲವನ್ನು ನೀಡುವ ಪ್ರಯತ್ನ ಪಾಲಕರು ಮಾಡಬೇಕು.
  3. ಅಸಮಾನತೆಗಳನ್ನು ಗೌರವಿಸಿ : ಮಕ್ಕಳಿಗೆ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಧರ್ಮ, ಸಂಸ್ಕೃತಿ, ಜನಾಂಗ, ಜಾತಿ, ಶ್ರೀಮಂತ ಮತ್ತು ಬಡವರ ನಡುವಿನ ಅಸಮಾನತೆಗಳು ತಿಳಿದಿರುವದಿಲ್ಲ ಅವರು ಬೆಳೆಯುತ್ತ ಹೋದಂತೆ ಇದು ಅವರ ಅರಿವಿಗೆ ಬರುವದು. ಅದಕ್ಕೆ ಮಕ್ಕಳಿರುವಾಗಲೇ ಈ ಅಸಮಾನತೆಗಳಿಗೆ ಗೌರವ ನೀಡುವದನ್ನ ಅವರಿಗೆ ಹೇಳಿಕೊಡಬೇಕು. ಈ ಜಗತ್ತಿನಲ್ಲಿ ಎಲ್ಲರೂ ಒಂದೇ ಇವುಗಳೆಲ್ಲ ನೆಪಮಾತ್ರ ಪ್ರತಿಯೊಬ್ಬರನ್ನು, ಪ್ರತಿಯೊಂದನ್ನು ಗೌರವಿಸಬೇಕು ಎನ್ನುವದರ ಮಹತ್ವ ತಿಳಿಸಬೇಕು.
  4. ಒತ್ತಡದ ವಿರುದ್ಧ ಹೋರಾಡುವದು : ಜೀವನದಲ್ಲಿ ಅಗತ್ಯವಾದ ಒತ್ತಡವು ಅಭಿವೃದ್ಧಿ ಹೊಂದಲು ನಮಗೆ ಸಹಾಯ ಮಾಡುತ್ತದೆ ಆದರೆ ಇದೆ ಒತ್ತಡವು ಅತಿಯಾದರೆ ನಮ್ಮ ಆರೋಗ್ಯಕ್ಕೆ ಹಾನಿಕಾರಕ. ಜೀವನದಲ್ಲಿ ಎಲ್ಲರಿಗೂ ಒಂದಲ್ಲ ಒಂದು ಸಮಸ್ಯೆ ಇದ್ದೆ ಇರುತ್ತದೆ ಅಲ್ಲದೆ ಬಂದೆ ಬರುತ್ತದೆ ಅದು ಬಂದಾಗ ಅದನ್ನ ಹೇಗೆ ನಿಭಾಯಿಸಬೇಕು ಎಂಬುದರ ಜಾಣ್ಮೆ ಅವರಲ್ಲಿ ತುಂಬಬೇಕು.
  5. ನಡುವಳಿಕೆ ಹೇಗಿರಬೇಕು ಎಂಬುದನ್ನ ತಿಳಿಸಿ : ಮಕ್ಕಳಿಗೆ ತುಂಬಾ ಮುಖ್ಯವಾಗಿ ಹೇಳಬೇಕಾದ ಅಂಶವಿದು. ನಮ್ಮ ಸುತ್ತಮುತ್ತಲಿನ ಜನರ ಜೊತೆಗೆ ಸಂಭಂದಿಕರ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಡಿ. ಅದರ ಜೊತೆ ಮಹಿಳೆಯರಿಗೆ ಹೇಗೆ ಗೌರವ ನೀಡಬೇಕು ಎಂದು ಕೂಡ ಚನ್ನಾಗಿ ಹೇಳಿಕೊಡಬೇಕು ನಮ್ಮ ಕುಟುಂಬದ ಗೌರವ ಗುರು ಹಿರಿಯರನ್ನ ಗೌರವಿಸುವದರ ಬಗ್ಗೆ ಹೇಳಿ ಅವರ ಸಂಪೂರ್ಣ ಸಂಸ್ಕಾರವಂತರನ್ನಾಗಿ ಮಾಡಬೇಕು. ಹಾಗೆ ಅದರ ಜೊತೆ “ನಿನ್ನ ನೀ ಗೌರವಿಸು,, ನಿನ್ನ ನೀ ನಂಬು.. ಮತ್ತು ನಿನ್ನ ನೀ ಪ್ರೀತಿಸು ಅನ್ನೋದು ಕೂಡ ಹೇಳಬೇಕು.

ನವೀನ ಗೋಪಾಲಸಾ ಹಬೀಬ
ಶಿಕ್ಷಕರು ಪರ್ಲ್ ರೆಸಿಡೆನ್ಸಿಯಲ್ ಸಿ ಬಿ ಎಸ್ ಈ ಶಾಲೆ ಹರಪನಹಳ್ಳಿ

Leave a Reply

Your email address will not be published. Required fields are marked *