ಮಂಗಳೂರು ಜ26: ಮಂಗಳೂರಿನ ಶಕ್ತಿ ವಿದ್ಯಾ ಸಂಸ್ಥೆಯ ಶಾಲಾ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಕೀಲರು ಮತ್ತು ನೋಟರಿ ಹಾಗೂ ಕ್ಯಾಂಪ್ಕೊ ಲಿಮಿಟೆಡ್ ಮಂಗಳೂರು ಇದರ ನಿರ್ದೇಶಕರು ಆಗಿರುವ ಎಂ ಪುರುಷೋತ್ತಮ ಭಟ್ ಅವರು ಆಗಮಿಸಿ ರಾಜೇಂದ್ರ ಪ್ರಸಾದ್ ಮತ್ತು ಡಾ ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಂತರ ದ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಕ್ತಿನಗರ ಇಂದು ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಕೇಂದ್ರ ಗ್ರಾಮವಾಗಿ ಬೆಳೆದುದರ ಹಿಂದೆ ಡಾ ಕೆ ಸಿ ನಾಯಕ್ ಅವರ ಪಾತ್ರ ಮಹತ್ತರವಾದದ್ದು, ಮಕ್ಕಳಲ್ಲಿ ರಾಷ್ಟ್ರ ಭಕ್ತಿ ಬೆಳೆಸಬೇಕು ಮಕ್ಕಳು ದೇಶದ ಸಂಪತ್ತಾಗಬೇಕು ಎಂಬ ತುಮುಲತೆ ಕೆ ಸಿ ನಾಯಕ್ ಅವರಲ್ಲಿದೆ. ಆ ಉದ್ದೇಶಕ್ಕಾಗಿ ಈ ಶಕ್ತಿ ವಿದ್ಯಾ ಸಂಸ್ಥೆಯನ್ನು ಕಟ್ಟಿ ನೂರಾರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾರೆ ನಮ್ಮ ದೇಶದಲ್ಲಿ ಭಗವದ್ಗೀತೆ ರಾಮಾಯಣದಂತಹ ಗ್ರಂಥಗಳ ಹಾಗೆ ಸಂವಿಧಾನದ ಪುಸ್ತಕವು ಕೂಡ ಅಷ್ಟೆ ಪ್ರಾಮುಖ್ಯತೆ ಪಡೆದಿದೆ. ನಮ್ಮ ಭಾರತ ದೇಶದ ಸಾರ್ವಭೌಮತ್ವ ಅಖಂಡತೆಯನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ. ಸಂವಿಧಾನ ನಮಗೆ ಹಕ್ಕುಗಳನ್ನು ನೀಡುವುದರ ಜೊತೆ ಕರ್ತವ್ಯಗಳನ್ನು ನೀಡಿದೆ. ಸ್ವಾತಂತ್ರ‍್ಯ ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖ. ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಬೇಕು, ದೇಶದ ಸಂಪತ್ತನ್ನು ರಕ್ಷಣೆ ಮಾಡಬೇಕು ದೇಶದ ಅಭಿವೃದ್ಧಿಗೆ ಬೇಕಾದ ಕೆಲಸ ಮಾಡಬೇಕು. ಸ್ವಾಭಿಮಾನ ಮತ್ತು ಸ್ವಂತಿಕೆ ನಮ್ಮ ಆಸ್ತಿಯಾಗಬೇಕು. ಈ ಪ್ರಜಾಸತ್ತಾತ್ಮಕ ಆಡಳಿತದ ಭವಿಷ್ಯದಲ್ಲಿ ನಾವೆಲ್ಲ ನ್ಯಾಯಧೀಶರಾಗಿ ಕೆಲಸ ಮಾಡುವ ಅವಕಾಶ ಸಿಗುತ್ತೆ.






ಭಾರತವನ್ನು ಬಡ ರಾಷ್ಟç ಎಂದು ಹೇಳಿದ ಅನೇಕ ಪರಕೀಯ ದೇಶಗಳು ಇಂದು ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರ ಎಂದು ಹೇಳುತ್ತಿದ್ದಾರೆ. ಇಂದು ಭಾರತ ದೇಶ ಅನೇಕ ಬೇರೆ ದೇಶಗಳಿಗೆ ಆಹಾರ ಪದಾರ್ಥಗಳನ್ನು ರಫ್ತು ಮಾಡುವಷ್ಟು ಬೆಳೆದಿದೆ.
ಮತದಾನ ಮಾಡುವ ಹಕ್ಕು ಮಕ್ಕಳಿಗೆಲ್ಲ ಸಿಗುತ್ತದೆ ದೇಶ ಕಟ್ಟುವಲ್ಲಿ ಕೆಲಸ ಮಾಡುವ ಸೂಕ್ತ ನಾಯಕರನ್ನು ಆರಿಸುವುದು ಕೂಡ ನಮ್ಮ ಕರ್ತವ್ಯ. ಒಳ್ಳೆಯ ಪ್ರತಿನಿಧಿಗಳನ್ನು ಆರಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಶ್ರದ್ಧೆಯಿಂದ ಒಳ್ಳೆಯ ರೀತಿಯನ್ನು ಕಲಿತು ಮನನ ಮಾಡಿಕೊಂಡು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಿಮಳವಿಲ್ಲದ ಕಾಡಿನ ಮಲ್ಲಿಗೆ ಹಾಗೆ ನಾವಾಗಬಾರದು. ಸಂಸ್ಕಾರವಿಲ್ಲದ ಮೌಲ್ಯವಿಲ್ಲದ ವಿದ್ಯಾಭ್ಯಾಸ ಸುಗಂಧ ಇಲ್ಲದ ಕಾಡಿನ ಮಲ್ಲಿಗೆಯತೆ. ಹೂವಿನಲ್ಲಿರುವ ಪರಿಮಳದ ಹಾಗೆ ಸಂಸ್ಕಾರಭರಿತ ಶಿಕ್ಷಣವನ್ನು ಶಕ್ತಿ ವಿದ್ಯಾ ಸಂಸ್ಥೆ ನೀಡುತ್ತಿದೆ. ನಮಗೆ ಸಂವಿಧಾನ ಯಾವ ರೀತಿಯ ಹಕ್ಕುಗಳನ್ನು ಕೊಟ್ಟಿದೆಯೋ ಅದರ ಜೊತೆ ನೀಡಿದ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸೋಣ ಹಾಗಾದಾಗ ಮಾತ್ರ ನಮ್ಮ ಸಮಾಜ ನಮ್ಮ ದೇಶ ಅನ್ಯರ ಆಕ್ರಮಣಕ್ಕೆ ಒಳಗಾಗುವುದು ತಪ್ಪುತ್ತದೆ. ಕೇಂದ್ರ ಸರಕಾರ ತಂದ ರಾಷ್ಟೀಯ ಶಿಕ್ಷಣ ನೀತಿಯನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಸರಿಯಾದ ನಾಯಕರನ್ನು ನಾವು ಆಯ್ಕೆ ಮಾಡಬೇಕಾಗುತ್ತದೆ. ನಾವೆಲ್ಲ ರಾಷ್ಟçದ ಉತ್ತಮ ಪ್ರಜೆಗಳಾಗೋಣ, ರಾಷ್ಟ್ರ ಭಕ್ತರಾಗೋಣ ಎಂದು ಹೇಳುತ್ತಾ. ನಮ್ಮ ಹೆತ್ತ ತಾಯಿ, ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ನಮ್ಮ ಶಿಕ್ಷಕರು ನಾವು ಕಲಿತ ಶಾಲೆ, ನಮ್ಮ ಪರಿಸರ ನಾವು ನೆಮ್ಮದಿಯಿಂದ ಇರಲು ಗಡಿಯಲ್ಲಿ ನಿಂತು ದೇಶ ಕಾಯುವ ಸೈನಿಕರು, ನಮ್ಮ ದೇಶದ ಸಂವಿಧಾನ ಇವೆಲ್ಲವನ್ನು ಗೌರವಿಸುವ ಕರ್ತವ್ಯ ನಮ್ಮದಾಗಬೇಕು, ಸಾಂಸ್ಕೃತಿಕವಾಗಿ ರಾಜಕೀಯವಾಗಿ ನಮ್ಮ ದೇಶದ ಮೇಲೆ ದಾಳಿ ಮಾಡುವ ದಾಳಿಕೋರರಿಂದ ಜಾಗೃತರಾಗೋಣ. ಸಮಾಜವು ನಿಮ್ಮನ್ನು ಅನುಸರಿಸುವ ನಡೆ ನಿಮ್ಮದಾಗಲಿ. ಎಂದು ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ನಂತರ ಮಾತನಾಡಿದ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ ಕೆ ಅವರು ಸಂವಿಧಾನದಲ್ಲಿ ತಿಳಿಸಿದ ಹಕ್ಕುಗಳ ಜೊತೆ ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸೋಣ. ದೇಶದ ಉತ್ತಮ ಪ್ರಜೆಗಳಾಗೋಣ ಎಂದು ಈ 77 ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮಕ್ಕಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಹೆಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ದೇಶ ಭಕ್ತಿಯನ್ನು ಸಾರುವ ಕಿರು ನಾಟಕವನ್ನು ಪ್ರದರ್ಶಿಸಿದರು. ಶಿಕ್ಷಕಿ ಸ್ಮಿಶಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
