ಮೂಡುಬಿದಿರೆ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಪಕ್ಕಲಡ್ಕ

ಮೂಡುಬಿದಿರೆ: ಫೆ.21ರಂದು ಕಡಂದಲೆಯ ಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಲಿರುವ ಮೂಡುಬಿದಿರೆ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಮಿಜಾರಿನ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರು ಆಯ್ಕೆಯಾಗಿರುತ್ತಾರೆ ಎಂಬುದಾಗಿ ಕ.ಸಾ.ಪ ಮೂಡುಬಿದಿರೆ ತಾಲೂಕು ಅಧ್ಯಕ್ಷರಾದ ಕೆ. ವೇಣುಗೋಪಾಲ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ತಾಲೂಕಿನ ಕಂಕನಾಡಿ ಗ್ರಾಮದ ಪಕ್ಕಲಡ್ಕದ ಅಹಮ್ಮದ್ ಕೆ ಪಿ ಹಾಗೂ ಫಾತಿಮಾ ದಂಪತಿಯ ಸುಪುತ್ರರಾಗಿ 1947ರಲ್ಲಿ ಜನಿಸಿದ ಅವರು ಬಿ.ಕಾಂ ಪದವೀಧರರು. 1968ರಲ್ಲಿ ರಾಜ್ಯ ಸರಕಾರದ ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದ ಅವರು ನಂತರ ಪ್ರಥಮ ದರ್ಜೆ ಸಹಾಯಕರಾಗಿ ಹಾಗೂ ಅಧೀಕ್ಷರಾಗಿಯೂ ಭಡ್ತಿ ಪಡೆದು 37 ವರ್ಷಗಳ ತನ್ನ ಸಾರ್ಥಕ ಸೇವೆಯನ್ನು ಮುಗಿಸಿ 2005ರಲ್ಲಿ ನಿವೃತ್ತರು.

ಕೃಷಿಯ ಜೊತೆ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಅವರು ಸಣ್ಣ ಕಥಾ ರಚನೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದವರು. ಈಗಾಗಲೇ ‘ಪಾದದಡಿಯ ಸ್ಪರ್ಗ’, ‘ಬಿಳಿಗೋಡೆ’, ‘ಅಲೆಮಾರಿ’, ‘ಭ್ರಮೆ’ ‘ಒಂಟಿತೆಪ್ಪ’, ‘ನೆನಪುಗಳು ಸಾಯುವುದಿಲ್ಲ’, ‘ಮೋಹಕ್ಷಯ’ ಮತ್ತು ‘ಹಾದಿಯೇ ಇಲ್ಲದ ಹಾದಿ’ ಎಂಬ ಇವರ ಎಂಟು ಕಥಾಸಂಕಲನಗಳು ಪ್ರಕಟಗೊಂಡಿವೆ. ‘ಪಾದದಡಿಯ ಸ್ಪರ್ಗ’ ಕಥಾಸಂಕಲನವು ಝುಬೇದ ಗುರುಪುರ ಇವರಿಂದ ‘ಕಾಲಡಿರೆ ಸ್ವರ್ಗ’ ಎಂಬ ಹೆಸರಿನಲ್ಲಿ ಬ್ಯಾರಿ ಭಾಷೆಗೆ ಅನುವಾದಗೊಂಡಿದೆ.

ಇವರ ‘ಭ್ರಮೆ’ ಕಥಾಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿ (2017), ಅಲೆಮಾರಿ ಕಥಾ ಸಂಕಲನಕ್ಕೆ ಪಿ.ಲಂಕೇಶ್ ಪ್ರಶಸ್ತಿ ಮತ್ತು ಮುಸ್ಲಿಂ ಸಾಹಿತ್ಯ ಪ್ರಶಸ್ತಿ (2009), ಒಂಟಿತೆಪ್ಪ ಕಥಾಸಂಕಲನಕ್ಕೆ ನಿರತ ಸಾಹಿತ್ಯ ಪ್ರಶಸ್ತಿ (2020), ಬಾಂಧವ್ಯ ಕಥಾಪುರಸ್ಕಾರ (2020) ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬ್ಯಾರಿ ಭಾಷೆಯ ಕಥೆಗೆ ಕೊಡಮಾಡುವ ಬ್ಯಾರಿ ಸಾಹಿತ್ಯ ಸ್ಪರ್ಧಾ ಪುರಸ್ಕಾರ (2020)ವೂ ಇವರಿಗೆ ಸಂದಿವೆ. ಕೃಷಿ ಆಸಕ್ತಿಯ ಜೊತೆ ಯೋಗ ಮತ್ತು ಧ್ಯಾನವನ್ನು ತನ್ನ ಜೀವನದಲ್ಲಿ ಇವರು ಅಳವಡಿಸಿಕೊಂಡಿದ್ದಾರೆ. 

Leave a Reply

Your email address will not be published. Required fields are marked *