ಜೀವನದಲ್ಲಿ ಲವಲವಿಕೆ, ಸಮಯಪ್ರಜ್ಞೆ ಮುಖ್ಯ : ಡಾ. ಎಂ. ಮೋಹನ ಆಳ್ವ

ಮೂಡುಬಿದಿರೆ, ಏ. 12: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಅಭಿನಯ ಪ್ರಧಾನ ಚಿಣ್ಣರ ಮೇಳದ ಉದ್ಘಾಟನೆ ಭಾನುವಾರ ಕನ್ನಡ ಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು, ಜೀವನದಲ್ಲಿ ಲವಲವಿಕೆ ಮತ್ತು ಸಮಯಪ್ರಜ್ಞೆ ಅತ್ಯಂತ ಮುಖ್ಯವೆಂದು ತಿಳಿಸಿದರು. ಡಾ. ಜೀವನ್ ರಾಂ ಸುಳ್ಯ ಅವರ ನಿರ್ದೇಶನದಲ್ಲಿ ನಡೆಯುತ್ತಿರುವ ಈ ರೀತಿಯ ಶಿಬಿರಗಳು ಮಕ್ಕಳ ಸಮಗ್ರ ಅಭಿವೃದ್ಧಿಗೆ ಬಹಳ ಉಪಯೋಗಕಾರಿಯಾಗಿವೆ ಎಂದು ಹೇಳಿದರು.
ತಮ್ಮ ಬಾಲ್ಯದ ಅನುಭವವನ್ನು ಹಂಚಿಕೊಂಡ ಅವರು, “ನಾನು ಚಿಕ್ಕವನಾಗಿದ್ದಾಗ ನನ್ನ ತಂದೆ-ತಾಯಿಗೆ ಇಂತಹ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ. ನಾಲ್ಕನೇ ತರಗತಿಯಿಂದಲೇ ಹಾಸ್ಟೆಲ್ ಜೀವನ ಆರಂಭಿಸಿ ಸ್ವತಂತ್ರವಾಗಿ ಬೆಳೆಯುವ ಅವಕಾಶ ನನಗೆ ದೊರಕಿತು. ಸಾಂಸ್ಕೃತಿಕ ವೇದಿಕೆಗಳ ಮೂಲಕ ಫಿಲಿಫೈನ್ಸ್, ಜಪಾನ್, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಿಗೆ ತೆರಳಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ ನನ್ನ ತಂದೆ-ತಾಯಂದಿರು ನನ್ನ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಪಡೆದಿರಲಿಲ್ಲ. ಇಂದಿನ ಪೋಷಕರು ಮಕ್ಕಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುತ್ತಿರುವುದು ಸಂತೋಷದ ಸಂಗತಿ,” ಎಂದು ಹೇಳಿದರು.
ಕ್ಲಾಸ್‍ರೂಮ್ ಶಿಕ್ಷಣದ ಜೊತೆಗೆ ಬಯಲು ಶಾಲೆಯ ಕಲಿಕೆ ಜೀವನದಲ್ಲಿ ಬಹಳ ಮುಖ್ಯವೆಂದು ಅವರು ಅಭಿಪ್ರಾಯಪಟ್ಟರು. “ನನಗೆ ಈಗ 75 ವರ್ಷವಾದರೂ ನಾನು ಇನ್ನೂ ಬಯಲು ಶಾಲೆಯ ವಿದ್ಯಾರ್ಥಿಯೇ ಆಗಿದ್ದೇನೆ. ನಮ್ಮ ಕಾಲದಲ್ಲಿ ಕೂಡು ಕುಟುಂಬಗಳಿದ್ದವು; ಈಗ ಅವು ಕಡಿಮೆಯಾಗಿವೆ. ಇಂತಹ ಶಿಬಿರಗಳ ಮೂಲಕ ಕೂಡು ಕುಟುಂಬದ ಮಹತ್ವ ಮಕ್ಕಳಿಗೆ ತಿಳಿಯುತ್ತದೆ,” ಎಂದರು.

ಮಕ್ಕಳಿಗೆ ಇಂತಹ ಶಿಬಿರಗಳಲ್ಲಿ ಹಾಡು, ನೃತ್ಯ, ಮಾತುಕತೆ ಸೇರಿದಂತೆ ವಿವಿಧ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶ ದೊರೆಯುತ್ತದೆ. ಇದು ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಅಭಿನಯವೂ ಪ್ರಮುಖ ಪಾತ್ರ ವಹಿಸುತ್ತದೆ. ದೇವರು ನೀಡಿದ ಕಣ್ಣು, ಕಿವಿ, ಬಾಯಿ ಮುಂತಾದ ಅಂಗಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸಿ. ಎ. ಉಮೇಶ್ ರಾವ್ ಮಿಜಾರ್ ಅವರು ಮಾತನಾಡಿ, ಜೀವನದಲ್ಲಿ ಅಂಕಗಳು ಮಾತ್ರ ಮುಖ್ಯವಲ್ಲ; ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯೂ ಅಷ್ಟೇ ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಜೀವನ್ ರಾಂ ಸುಳ್ಯ ಅವರು ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *