ಮೂಡುಬಿದಿರೆ: ವ್ಯಕ್ತಿಯ ಸದ್ಗು ಣಗಳು ಮತ್ತು ಧರ್ಮನಿಷ್ಠೆಯೇ ಅವನಿಗೆ ಶಾಶ್ವತ ಕೀರ್ತಿಯನ್ನು ನೀಡಬಲ್ಲವು – ಬಾಲಮುರಗನ್

ಮೂಡುಬಿದಿರೆ: ಅಂತರ್ ಕಾಲೇಜು ಫೆಸ್ಟ್ಗಳು ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಸಹಕಾರಿ.  ಪಠ್ಯಪುಸ್ತಕದ ಜ್ಞಾನದ ಜೊತೆಯಲ್ಲಿ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ ಮತ್ತು  ಸಂವಹನ ಕೌಶಲ್ಯಗಳನ್ನು ಉದ್ದೀಪನಗೊಳಿಸುತ್ತವೆ ಎಂದು ಬ್ಯಾಂಕ್ ಆಫ್ ಬರೋಡಾ ಮಂಗಳೂರು ಶಾಖೆಯ ಮುಖ್ಯ ವ್ಯವಸ್ಥಾಪಕ ಡಾ. ಪಿ. ಬಾಲಮುರಗನ್ ನುಡಿದರು.
ಅವರು ಆಳ್ವಾಸ್ ಸ್ವಾಯತ್ತ ಪದವಿ ಕಾಲೇಜಿನ ಹಿಂದಿ ವಿಭಾಗ ಕುವೆಂಪು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಉಮಂಗ್ 2026’ ಅಂತರ್ ಕಾಲೇಜು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಸೋಲು-ಗೆಲುವುಗಳು ಸ್ಪರ್ಧೆಯ ಭಾಗ. ಗೆಲುವು ನಮ್ಮನ್ನು ಹುರಿದಂಬಿಸಿದರೆ, ಸೋಲು ನಮಗೆ ಪಾಠ ಕಲಿಸುತ್ತದೆ. ಎರಡನ್ನೂ ಸಮಭಾವದಿಂದ ಸ್ವೀಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ  ಕರೆ ನೀಡಿದರು. ಮಹಾಭಾರತವನ್ನು ಉಲ್ಲೇಖಿಸಿದ ಅವರು, ಯುದ್ಧಭೂಮಿಯಲ್ಲಿ ಜಯ ಅರ್ಜುನನ ಪಾಲಾದರೂ, ಜನರ ಹೃದಯಗಳಲ್ಲಿ ಕರ್ಣನ ವ್ಯಕ್ತಿತ್ವವೇ ಅಜರಾಮರವಾಗಿ ಉಳಿಯಿತು.   ವ್ಯಕ್ತಿಯ ಸದ್ಗುಣಗಳು ಮತ್ತು ಧರ್ಮನಿಷ್ಠೆಯೇ ಅವನಿಗೆ ಶಾಶ್ವತ ಕೀರ್ತಿಯನ್ನು ನೀಡಬಲ್ಲವು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ,  ಭಾರತವು ಭಾಷಾ ವೈವಿಧ್ಯತೆಯ ಶ್ರೀಮಂತ ನಾಡು.   ಇಲ್ಲಿ ಕನ್ನಡ, ತಮಿಳು, ತೆಲುಗು, ಮರಾಠಿ, ಗುಜರಾತಿ ಸೇರಿದಂತೆ ಅನೇಕ ಭಾಷೆಗಳನ್ನಾಡುವ ಜನರಿದ್ದಾರೆ.  ಇಂತಹ ವೈವಿಧ್ಯತೆಯ ನಡುವೆ ಹಿಂದಿ ಭಾಷೆ ಜನರನ್ನು ಒಗ್ಗೂಡಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ, ಎಂದು ಅವರು ಅಭಿಪ್ರಾಯಪಟ್ಟರು. ಪ್ರತಿ ಭಾಷೆಯೂ ತನ್ನದೇ ಆದ  ಸಾಂಸ್ಕೃತಿಕ ವಿಭಿನ್ನತೆಯನ್ನು ಹೊಂದಿದೆ.  ಒಂದು ಭಾಷೆಯನ್ನು ಕಲಿಯುವುದರಿಂದ ಮತ್ತೊಂದು ಭಾಷೆ ಹಿಂದುಳಿಯದು, ಬದಲಿಗೆ ನಮ್ಮ ಜ್ಞಾನವಿಸ್ತಾರವಾಗುತ್ತದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ನಂತರ ಅಂತರ್ ಕಾಲೇಜು ಸ್ಪರ್ಧೆಗಳು ನಡೆದವು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ ನಾರಾಯಣ್ ಶೆಟ್ಟಿ ಮಾತನಾಡಿದರು.    

ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.  
ಕಾರ್ಯಕ್ರಮದಲ್ಲಿ  ಕಾಲೇಜಿನ ಪ್ರಾಚರ‍್ಯ ಡಾ ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಬ್ಯಾಂಕ್ ಆಫ್ ಬರೋಡಾ ಮೂಡುಬಿದಿರೆ ಶಾಖೆಯ  ಹಿರಿಯ ವ್ಯವಸ್ಥಾಪಕ  ಪ್ರಭು ಕಮಾರ್, ವಿಭಾಗದ ಮುಖ್ಯಸ್ಥ ಡಾ ದತ್ತಾತ್ರೇಯ ಹೆಗಡೆ, ವಿದ್ಯಾರ್ಥಿ ಸಂಯೋಜಕರಾದ ಲಿಖಿತ್, ದಿಶಾ ಕೋಟ್ಯಾನ್ ಇದ್ದರು. ವಿನೆಟ್ ವಾಸ್ ಕರ‍್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *