ವರ್ಷಕ್ಕೆರಡು ಬಾರಿ ಶಿಕ್ಷಣ ಇಲಾಖೆ ಜೊತೆಯಲ್ಲಿ ಕುಪ್ಮಾ ಸಭೆ: ಸಚಿವರ ನಿರ್ದೇಶನ

ಮಂಗಳೂರು ಫೆ. 23: ಕುಪ್ಮ ಕರ್ನಾಟಕದ ನಿಯೋಗವು ಇತ್ತೀಚೆಗೆ ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧುಬಂಗಾರಪ್ಪನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಕುಪ್ಮ ಕಳೆದ 2 ವರ್ಷಗಳಿಂದ ಸಲ್ಲಿಸಿರುವ ಮನವಿಯ ಕುರಿತಂತೆ ನಡೆದಿರುವ ಪ್ರಗತಿಯ ಬಗ್ಗೆ ಚರ್ಚೆಯನ್ನು ನಡೆಸಿತು. ಮಾನ್ಯ ಸಚಿವರು ಕುಪ್ಮ ನಿಯೋಗದ ಜೊತೆ ಸಕಾರಾತ್ಮಕವಾದ ಸ್ಪಂದನೆಯನ್ನು ನೀಡಿರುವುದು ಅಭಿನಂದನೀಯವಾಗಿದೆ. ಪದವಿ ಪೂರ್ವ ಹಂತದಲ್ಲಿ ಆಗಬೇಕಾದ ಅನೇಕ ಬದಲಾವಣೆಗಳ ಕುರಿತಂತೆ ವಿಸ್ತ್ರತವಾದ ಚರ್ಚೆಯನ್ನು ನಡೆಸಿದ ಸಚಿವರು ನಮ್ಮಇಲಾಖೆಯ ನಿರ್ದೇಶಕರು ಸೇರಿದಂತೆ ಎಲ್ಲಾ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಲು ವರ್ಷದಲ್ಲಿ 2 ಬಾರಿ ಕುಪ್ಮದ ಜೊತೆ ಸಭೆ ನಡೆಸಲು ಶಾಲಾ ಶಿಕ್ಷಣ (ಪದವಿಪೂರ್ವ)ನಿರ್ದೇಶಕರಿಗೆ ಸೂಚನೆಯನ್ನು ನೀಡಿದರು.

ಈಗಾಗಲೇ ರಾಜ್ಯದಲ್ಲಿ ಸುಮಾರು 4000 ಕ್ಕೂ ಹೆಚ್ಚು ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸರಿ ಸುಮಾರು ಶೇಕಡಾ 63 ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು ಉತ್ತಮ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಮತ್ತು ಉತ್ತಮ ಫಲಿತಾಂಶ ನೀಡಿ ಶಿಕ್ಷಣ ಇಲಾಖೆಗೆ ಗಣನೀಯವಾದ ಕೊಡುಗೆಯನ್ನು ನೀಡುವ ಮಹತ್ವಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ. ಈ ರೀತಿಯ ಉತ್ತಮ ಶಿಕ್ಷಣ ನೀಡುವಲ್ಲಿ, ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂಬುದನ್ನು ಮಾನ್ಯ ಸಚಿವರ ಗಮನಕ್ಕೆ ತರಲಾಯಿತು.

ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಬಗ್ಗೆ ಮಾನ್ಯ ವಿಧಾನ ಸಭಾ ಸಭಾಧ್ಯಕ್ಷರ ಸಮಕ್ಷಮದಲ್ಲಿ ಮಾನ್ಯ ಶಿಕ್ಷಣ ಸಚಿವರು ಮತ್ತು ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ದಿನಾಂಕ: 14-07-2024 ಮತ್ತು 15-05-2025ರಂದು ನಡೆದಿದ್ದ ಸಭೆಯಲ್ಲಿ ಕುಪ್ಮಾ ಪದಾಧಿಕಾರಿಗಳು ಭಾಗವಹಿಸಿ, ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಸೂಕ್ತ ಪರಿಹಾರಗಳನ್ನು ನೀಡುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾನ್ಯ ಶಿಕ್ಷಣ ಮಂತ್ರಿಗಳ ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.

ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರ (TC) ವನ್ನು ಡಿಜಿಲಾಕರ್ (Online DigiLocker) ಮೂಲಕ ಮುಂದಿನ ದಿನಗಳಲ್ಲಿ ವಿತರಿಸುವ ಬಗ್ಗೆ ಅದರ ಸಾಧಕ ಬಾಧಕಗಳನ್ನು ಕುಪ್ಮದ ಜೊತೆ ಚರ್ಚಿಸಬೇಕೆಂದು ಮನವಿಯನ್ನು ಮಾಡಲಾಯಿತು.
ದ್ವಿತೀಯ ಪಿಯುಸಿ ಉತ್ತೀರ್ಣದ ಅಂಕಪಟ್ಟಿಯಲ್ಲಿ ಕಾಲೇಜಿನ ಮಾನ್ಯ ಪ್ರಾಂಶುಪಾಲರ ಸಹಿ ಮತ್ತು ಮೊಹರಿನೊಂದಿಗೆ ಅಂಕಪಟ್ಟಿಯನ್ನು ವಿತರಿಸಬೇಕೆಂದು ಮನವಿ ಮಾಡಲಾಯಿತು.
ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಹಾಗೂ ಕನ್ನಡ ಅಗ್ನಿ ಸುರಕ್ಷತಾ ಪ್ರಮಾಣ ಪತ್ರವನ್ನು 5 ವರ್ಷಗಳಿಗೊಮ್ಮೆ ನವೀಕರಿಸುವ ಕುರಿತಂತೆ ಈ ಹಿಂದೆಕೊಟ್ಟಿರುವ ಮನವಿಗೆ ಸರಕಾರವು ಸ್ಪಂದನೆಯನ್ನು ಕೊಟ್ಟಿರುತ್ತದೆ.

ತಜ್ಞರನ್ನೊಳಗೊಂಡ ಶೈಕ್ಷಣಿಕ ಸಮಿತಿಯನ್ನು ರಚಿಸುವ ಕುರಿತಂತೆ ಮಾಡಿದ ಮನವಿಗೆ ಮಾನ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದನೆಯನ್ನು ಕೊಟ್ಟು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ನಿರ್ದೇಶಕರಾದ ಭರತ್‍ ಇವರಲ್ಲಿ ಸಭೆ ಕರೆಯುವಂತೆ ಸೂಚಿಸಿರುತ್ತಾರೆ. ಇದೇ ಸಂದರ್ಭದಲ್ಲಿ ಮಾನ್ಯ ಸಚಿವರ ಸೂಚನೆಯಂತೆ ಶಾಲಾ ಶಿಕ್ಷಣ(ಪದವಿ ಪೂರ್ವ) ನಿರ್ದೇಶಕರಾದ ಭರತ್‍ ಇವರ ಜೊತೆ ಸಭೆ ನಡೆಸಿದಾಗ ಮಾನ್ಯ ನಿರ್ದೇಶಕರು ಕುಪ್ಮ ಸದಸ್ಯರೊಂದಿಗೆ ಮಾರ್ಚ್ ತಿಂಗಳಲ್ಲಿ ಸಭೆ ನಡೆಸಲು ಒಪ್ಪಿಗೆಯನ್ನು ಸೂಚಿಸಿದರು. ಈ ಹಿಂದಿನ ಬೇಡಿಕೆಗಳಿಗೆ ಸಂಬಂಧ ಪಟ್ಟಹಾಗೆ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಳಾಂತರ ಮತ್ತು ಹಸ್ತಾಂತರದ ಅಧಿಕಾರವನ್ನು ಶಾಲಾ ಶಿಕ್ಷಣ(ಪದವಿ ಪೂರ್ವ) ಇಲಾಖೆ ಹಂತದಲ್ಲಿ ಅನಮೋದಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಹೊಸ ಖಾಸಗಿ ಅನುದಾನ ರಹಿತ ಕಾಲೇಜನ್ನು ಪ್ರಾರಂಭ ಮಾಡುವ ಪ್ರಕ್ರಿಯೆಯನ್ನು ಆನ್‍ಲೈನ್ ಮೂಲಕ ಈ ಹಿಂದೆ ಇದ್ದ 46 ಅಂಶಗಳ ಅರ್ಜಿ ನಮೂನೆಯನ್ನು 23 ಅಂಶಗಳಿಗೆ ಸರಳೀಕರಿಸಲಾಗಿದೆ. ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಹೊಸ ಸಂಯೋಜನೆ, ಭಾಷೆ ಮತ್ತು ಹೆಚ್ಚುವರಿ ವಿಭಾಗಗಳ ಅರ್ಜಿಯನ್ನು ಸಂಪೂರ್ಣವಾಗಿ ಆನ್‍ಲೈನ್ ಪ್ರಕ್ರಿಯೆಗೊಳಿಸಿದ್ದು ಅರ್ಜಿಯಲ್ಲಿ ಈ ಹಿಂದೆ 36 ಅಂಶಗಳ ಅರ್ಜಿ ನಮೂನೆಯನ್ನು 23 ಅಂಶಗಳಿಗೆ ಸರಳೀಕರಿಸಲಾಗಿದೆ. 2024ರ ನಿಯಮಾವಳಿ ಪ್ರಕಾರ ಹೊಸ ಶಾಶ್ವತ ಅನುದಾನರಹಿತ ಕಾಲೇಜುಗಳ ಸ್ಥಳ ಪರಿಶೀಲನೆಯನ್ನು ಒಟ್ಟು ಅರ್ಜಿಗಳಲ್ಲಿ ಶೇಕಡ 5 ರಷ್ಟು Randomization ಮೂಲಕ ನಡೆಸಲಾಗುತ್ತಿತ್ತು ಹಾಗೂ ಕಳೆದ 5 ವರ್ಷಗಳ ವರೆಗೆ ಹೊಸ ಸಂಯೋಜನೆ/ಭಾಷೆಗೆ ಸಂಬಂಧಿಸಿದ ಅರ್ಜಿಗಳನ್ನು ಶೇಕಡ 100 ರಷ್ಟು ಸ್ಥಳ ಪರಿಶೀಲನೆ ನಡೆಸಲಾಗುತ್ತಿತ್ತು. ಆದರೆ ಪ್ರಸ್ತುತ ಸಾಲಿನಿಂದ ಹೊಸ ಸಂಯೋಜನೆ / ಭಾಷೆ ಅರ್ಜಿಗಳಿಗೂ ಒಟ್ಟು ಶೇಕಡ 5 ರಷ್ಟು Randomization ಸ್ಥ ಳ ಪರಿಶೀಲನೆ ನಡೆಸಲಾಗುತ್ತಿದೆ. ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪೈಕಿ ಹೊಸ ಸಂಯೋಜನೆ/ ಭಾಷೆ ಹಾಗೂ ಹೆಚ್ಚುವರಿ ವಿಭಾಗಗಳಿಗೆ ಸಂಬಂದಿಸಿದ ಅರ್ಜಿಗಳನ್ನು ಈ ಹಿಂದೆ ಎಪ್ರಿಲ್‍ ಅಥವಾ ಮೇ ತಿಂಗಳಲ್ಲಿ ಆಹ್ವಾನಿಸಲಾಗುತ್ತಿತ್ತು. ಇದರಿಂದ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತಿತ್ತು. ಆದ್ದರಿಂದ 2025-26ನೇ ಸಾಲಿಗೆ ಫೆಬ್ರವರಿ ತಿಂಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಳೆದ ಸಾಲಿನಲ್ಲಿ ದಾಖಲಾತಿ ಸಂಖ್ಯೆ 80 ವಿದ್ಯಾರ್ಥಿಗಳನ್ನು ತಲುಪಿದ ನಂತರ ಮಾಥ್ರ ಹೊಸ/ಹೆಚ್ಚುವರಿ ವಿಭಾಗಕ್ಕಾಗಿ ಅರ್ಜಿ ಸಲ್ಲಿಸಲು ಅನುಮತಿ ನೀಡಲಾಗುತ್ತಿತ್ತು. ಪ್ರಸ್ತುತ ಸಾಲಿನಿಂದ, 2025-26ನೇ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿ 80 ವಿದ್ಯಾರ್ಥಿಗಳನ್ನು ಪೂರ್ಣಗೊಳಿಸಿರುವ ಕಾಲೇಜುಗಳಿಗೆ, ಹಿಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಆಧಾರದವಾಗಿ ಹೊಸ/ಹೆಚ್ಚುವರಿ ವಿಭಾಗಗಳಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ಮೇಲಿನ ವಿಷಯಗಳಿಗೆ ಸಂಬಂಧಪಟ್ಟ ಹಾಗೆ ಕುಪ್ಮಕರ್ನಾಟಕವು ಬೇರೆ ಬೇರೆ ಸಂದರ್ಭಗಳಲ್ಲಿ ಮಾನ್ಯ ಸಚಿವರಲ್ಲಿ ಮನವಿ ಮಾಡಿರುವ ವಿಷಯಗಳಿಗೆ ಇಲಾಖೆಯು ಸಕಾರಾತ್ಮಕವಾದ ಸ್ಪಂದನೆಯನ್ನು ಕೊಟ್ಟಿರುತ್ತದೆ. ಈ ವಿಷಯವನ್ನು ಸಭೆಯ ಗಮನಕ್ಕೆ ಇಲಾಖೆಯ ನಿರ್ದೇಶಕರಾದ ಭರತ್ ಮತ್ತುಜಂಟಿ ನಿರ್ದೇಶಕರಾದ ಹರ್ಷವರ್ಧನ್‍ ತಂದಿರುತ್ತಾರೆ. ಈ ನಿಯೋಗದ ನೇತೃತ್ವವನ್ನು ಕುಪ್ಮರಾಜ್ಯ ಕಾರ್ಯದರ್ಶಿ ಪ್ರೊ ನರೇಂದ್ರಎಲ್ ನಾಯಕ್, ರಾಜ್ಯ ಉಪಾಧ್ಯಕ್ಷರಾದ ಯುವರಾಜ್‍ ಜೈನ್‍ ರಾಜ್ಯಕೋಶಾಧಿಕಾರಿ ರಮೇಶ್ ಕೆ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಕೀರ್ತನ್, ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಡಾ ದೇವರಾಜ್ ವಹಿಸಿದರು.

Leave a Reply

Your email address will not be published. Required fields are marked *