ಮಂಗಳೂರು, ಮಾ. 17: ಲಿಂಗಾನುಪಾತ ಹದಗೆಡಲು ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ಮುಖ್ಯವಾಗಿ ಕಾರಣವಾಗುತ್ತಿದ್ದು, ಈ ಪಿಡುಗನ್ನು ಹೋಗಲಾಡಿಸಬೇಕು. ಸಮಾಜದಲ್ಲಿ ಗಂಡು ಶ್ರೇಷ್ಠ, ಹೆಣ್ಣು ತಾತ್ಸಾರ ಎಂಬ ಭೇದ ತೋರದೆ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂದು ವೆನ್ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್ ಹೇಳಿದರು.


ಅವರು ಮಂಗಳವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ 1994 ರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಗು ಹುಟ್ಟಿದರೆ ಶಿಕ್ಷಣ, ವರದಕ್ಷಿಣೆ ಹಾಗೂ ವಿವಾಹ ವೆಚ್ಚ ಭರಿಸಬೇಕಾಗುತ್ತದೆ ಎಂಬ ಕಾರಣದಿಂದ ಕುಟುಂಬಕ್ಕೆ ಹೊರೆ ಎಂದು ಭಾವಿಸಿಕೊಂಡ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಹೆಣ್ಣಿನ ಮೇಲಿರುವ ತಾತ್ಸಾರ ಭಾವನೆಯನ್ನು ದೂರಮಾಡಬೇಕು ಎಂದು ಅವರು ಹೇಳಿದರು. ಬಾಲ್ಯ ವಿವಾಹ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿ ಹೆಣ್ಣು ಗರ್ಭಿಣಿಯಾಗಿ ಹೆರಿಗೆ ಸಂದರ್ಭದಲ್ಲಿ ಸಾವಿಗೀಡಾಗುವ ಸಾಧ್ಯತೆಗಳಿಂದ ಹಾಗೂ ಹೆಣ್ಣು ಮಕ್ಕಳಿಗಿರುವ ಕಡಿಮೆ ಸಾಮಾಜಿಕ ಸ್ಥಾನಮಾನದಿಂದ, ಗಂಡು ಮಗು ಬೇಕೆನ್ನುವ ಹಂಬಲ ಹಾಗೂ ಮೂಢನಂಬಿಕೆಗಳಿಂದ ವೈದ್ಯಕೀಯ ತಂತ್ರಜ್ಞಾನಗಳ ಮೂಲಕ ಭ್ರೂಣ ಲಿಂಗ ಪತ್ತೆ ಹಚ್ಚಿ ಹೆಣ್ಣು ಶಿಶುಗಳ ಹತ್ಯೆ ಮಾಡುವುದರಿಂದ ಮಹಿಳೆಯರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಹೇಳಿದರು.
ಮಹಿಳೆಯರ ಮತ್ತು ಪುರುಷರ ಅನುಪಾತದ ಅಸಮತೋಲನ ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಬಾಲ್ಯವಿವಾಹ, ವರದಕ್ಷಿಣೆಯಂತಹ ಸಾಮಾಜಿಕ ಪಿಡುಗುಗಳಿಂದ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕು. ಗಂಡು ಮಕ್ಕಳಿಗೆ ನೀಡುವಷ್ಟೇ ಸಮಾನ ಅವಕಾಶವನ್ನು ಹೆಣ್ಣು ಮಕ್ಕಳಿಗೂ ನೀಡಬೇಕು ಎಂದು ಅವರು ಹೇಳಿದರು. ಗಂಡು ಹೆಣ್ಣು ಎಂಬ ಬೇಧ ತೋರುವ ಅಸಮತೋಲನೆಯ ಬೇರುಗಳನ್ನು ಕಿತ್ತೊಗೆಯಲು ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.
ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ :ಡಿ.ಹೆಚ್.ಒ
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್. ಆರ್. ತಿಮ್ಮಯ್ಯ ಮಾತನಾಡಿ, ಸ್ಕ್ಯಾನಿಂಗ್ ಸೆಂಟರ್ಗಳು ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆಯನ್ವಯ ಕಾನೂನು, ಮಾರ್ಗಸೂಚಿ, ದಾಖಲಾತಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾನೂನಿನ ಉಲ್ಲಂಘನೆಗೆ ಯಾವುದೇ ರಿಯಾಯಿತಿ ಇರುವುದಿಲ್ಲ. ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆ ಉಲ್ಲಂಘನೆ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು. ಪ್ರತಿಯೊಬ್ಬರೂ ಪಿ.ಸಿ & ಪಿ.ಎನ್.ಡಿ.ಟಿ ಕಾನೂನುಗಳನ್ನು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕ್ಷೇಮ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ರೇಡಿಯಾಲಜಿಸ್ಟ್ ಡಾ.ರಘುರಾಜ್ ಅವರು ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆಯ ಕುರಿತು ಹಾಗೂ ಎ.ಜೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಅಮೃತಾ ಭಂಡಾರಿ ಅವರು ಎಂ.ಟಿ.ಪಿ (ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ) ಕಾಯ್ದೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಉಸ್ಮಾನ್ ಎ, ಐ.ಆರ್.ಐ.ಎ ಅಧ್ಯಕ್ಷ ಡಾ.ಪ್ರವೀಣ್ ಜೆ.ಜಾನ್, ಐ.ಎಂ.ಎ ಅಧ್ಯಕ್ಷ ಸದಾನಂದ ಪೂಜಾರಿ, ಎಫ್.ಒ.ಜಿ.ಎಸ್.ಐ ಅಧ್ಯಕ್ಷ ಡಾ.ಪ್ರದೀಪ್ ಗಾಣಿಗ ಮತ್ತಿತ್ತರರು ಉಪಸ್ಥಿತರಿದ್ದರು.
ಜಿಲ್ಲಾ ಅನುಷ್ಠಾನ ಅಧಿಕಾರಿ ಡಾ.ದೀಪಾ ಪ್ರಭು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಉಳೆಪಾಡಿ ನಿರೂಪಿಸಿದರು.
