ಮೂಡುಬಿದಿರೆ: ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಕನ್ನಡ ವಿಭಾಗವು ಬೆಂಗಳೂರಿನ ಅಭಿನವ ಪ್ರಕಾಶನದ ಸಹಯೋಗದಲ್ಲಿ “ಡಾ. ನರಹಳ್ಳಿ ಬಾಲಸುಬ್ರಮಣ್ಯ ಮತ್ತು ಜೀವನ: ಒಂದು ಪಟ್ಟಾಂಗ – ಪ್ರೀತಿಯ ಸಖ್ಯ” ಎಂಬ ವಿಶೇಷ ಕಾರ್ಯಕ್ರಮವನ್ನು ಶನಿವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿತ್ತು.




ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರು ಬಹುಮುಖಿ ಚಿಂತಕರಾಗಿದ್ದು, ತಮ್ಮದೇ ಆದ ವಿಶಿಷ್ಟ ಓದುಗ ವಲಯವನ್ನು ಹೊಂದಿದವರು. ಜನಸಾಮಾನ್ಯರ ಬದುಕಿಗೆ ಹತ್ತಿರವಾದ ಸಾಮಾಜಿಕ ವಿಚಾರಗಳನ್ನು ಆಧರಿಸಿ ಕೃತಿಗಳನ್ನು ರಚಿಸಿದ್ದು, ಅದು ಅವರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.
“ಮಂತ್ರ ಮಾಂಗಲ್ಯ”, “ದಾಂಪತ್ಯ ಎಂಬ ವಿಸ್ಮಯ”, “ಮೋಹದ ಮಾಯೆಯಲ್ಲ ಬದುಕಿನ ಜೀವಶಕ್ತಿ” ಮೊದಲಾದ ಕೃತಿಗಳು ನರಹಳ್ಳಿಯವರ ಜೀವನಪ್ರೀತಿಗೆ ದೊಡ್ಡ ನಿದರ್ಶನಗಳಾಗಿವೆ. ಅವರ ಬರಹಗಳಷ್ಟೇ ಅವರ ವ್ಯಕ್ತಿತ್ವವೂ ಉನ್ನತವಾಗಿದ್ದು, ವಿವೇಕಪೂರ್ಣ ನಡೆನುಡಿಗಳ ಮೂಲಕ ಸಾಹಿತ್ಯ ಹೇಗಿರಬೇಕು ಎಂಬುದಕ್ಕೆ ರಾಜಮಾರ್ಗವನ್ನು ತೋರಿದವರು.
ಪ್ರಶಸ್ತಿಗಳ ಹಿಂದೆ ಓಡದೆ, ಅನಗತ್ಯ ಹೇಳಿಕೆಗಳ ಮೂಲಕ ಸುದ್ದಿಯಾಗದೆ, ಬರವಣಿಗೆಯನ್ನು ಧ್ಯಾನವಾಗಿಸಿಕೊಂಡ ಅಪರೂಪದ ವ್ಯಕ್ತಿತ್ವ ನರಹಳ್ಳಿಯವರದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರಾದ ಅವರು ಹೊಸ ತಲೆಮಾರಿನ ಯುವಕರಿಗೆ ಪ್ರೇರಣೆ ನೀಡುತ್ತ ಬಂದವರು. ಗೋಪಾಲಕೃಷ್ಣ ಅಡಿಗರ ನಂತರ ಕನ್ನಡ ಸಾಹಿತ್ಯ ಬೆಳವಣಿಗೆಯ ಹಾದಿಯನ್ನು ತಮ್ಮ ವಿಮರ್ಶಾ ಗ್ರಂಥಗಳಲ್ಲಿ ಚಿತ್ರಿಸಿರುವುದಲ್ಲದೆ, ಕುವೆಂಪು, ಅನಕೃ ಹಾಗೂ ಶಿವರುದ್ರಪ್ಪರ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದವರು. ಕನ್ನಡಕ್ಕೆ ತನ್ನದೇ ಆದ ಇತಿಹಾಸ ಮತ್ತು ಪರಂಪರೆ ಇದ್ದು, ಕನ್ನಡಿಗರು ನಕಲಿ ಸಂಸ್ಕೃತಿಯವರಲ್ಲ ಎಂಬ ವಿಚಾರವನ್ನು ದೃಢವಾಗಿ ಪ್ರತಿಪಾದಿಸಿದವರು ನರಹಳ್ಳಿಯವರು. ಯಾವುದೇ ಪಂಥೀಯ ಚೌಕಟ್ಟಿಗೆ ಸೀಮಿತರಾಗದೆ, ಮಾನವೀಯತೆಯನ್ನು ಶ್ರೇಷ್ಠ ಮೌಲ್ಯವಾಗಿ ಪ್ರತಿಪಾದಿಸಿದವರು ಎಂದು ಅಭಿಪ್ರಾಯಪಟ್ಟರು.
ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಮಾತನಾಡಿ, ಸಾಹಿತ್ಯದಲ್ಲಿ ಅಪಾರ ಶಕ್ತಿ ಇದೆ ಎಂಬುದನ್ನು ಸಮಾಜದಲ್ಲಿ ಅರಿವು ಮೂಡಿಸಿದವರು ನರಹಳ್ಳಿಯವರು. ಮ್ಲಾನತೆ ಮತ್ತು ವೈವಿಧ್ಯತೆಯ ನಡುವಿನ ಸಂಧಿಗ್ಧ ಪರಿಸ್ಥಿತಿಯಲ್ಲಿ ಜಗತ್ತು ಸಾಗುತ್ತಿರುವಾಗ, ಸಾಹಿತಿಗಳು ಮತ್ತು ಸಾಹಿತ್ಯ ಸಮಾಜದಲ್ಲಿ ಮಹತ್ತರ ಬದಲಾವಣೆ ತರಬಲ್ಲ ಶಕ್ತಿಯನ್ನು ಹೊಂದಿವೆ ಎಂದು ಹೇಳಿದರು.
ಸಂವಾದದಲ್ಲಿ ಮಾತನಾಡಿದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರೀತಿ ವ್ಯಾಖ್ಯಾನಕ್ಕೆ ಸಿಗದ ವಿಸ್ಮಯಕರ ಭಾವನೆ. ಅದು ಸ್ವಾರ್ಥರಹಿತವಾಗಿದ್ದು, ಅನುಭವದ ಮೂಲಕವೇ ಅದರ ಸಾರ್ಥಕತೆಯನ್ನು ಅರಿಯಲು ಸಾಧ್ಯ. ಕುವೆಂಪು, ಬೇಂದ್ರೆ, ಪುತೀನ ಹಾಗೂ ಕೆ. ಎಸ್. ನರಸಿಂಹಸ್ವಾಮಿ ಮುಂತಾದ ಕವಿಗಳು ಪ್ರೀತಿಯನ್ನು ವಿಭಿನ್ನ ರೀತಿಯಲ್ಲಿ ಸಾಹಿತ್ಯದಲ್ಲಿ ಚಿತ್ರಿಸಿರುವುದನ್ನು ವಿವರಿಸಿದರು. ಸಾಹಿತ್ಯದಲ್ಲಿ ಎಲ್ಲರನ್ನು ಒಳಗೊಂಡುಕೊಳ್ಳುವ ಗುಣವಿದ್ದು, ಕಾಲದ ತಲ್ಲಣಗಳಿಗೆ ಪರಿಹಾರ ನೀಡುವ ಶಕ್ತಿ ಸಾಹಿತ್ಯಕ್ಕಿದೆ. ಕಲೆ ಮತ್ತು ಸಾಹಿತ್ಯವನ್ನು ಬೆಳೆಸುತ್ತಾ ವಿದ್ಯಾರ್ಥಿಗಳನ್ನು ರೂಪಿಸುವ ಅನನ್ಯ ಶೈಕ್ಷಣಿಕ ಕಲ್ಪನೆ ಡಾ. ಮೋಹನ ಆಳ್ವರದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರ ಜೀವನಪ್ರೀತಿ ಮತ್ತು ವ್ಯಕ್ತಿತ್ವ ಕುರಿತು ಮೈಸೂರು ಮಹಾಜನ ಕಾಲೇಜಿನ ಕನ್ನಡ ವಿಭಾಗದ ಡಾ. ಎಚ್. ಆರ್. ತಿಮ್ಮೇಗೌಡ, ಹಾಗೂ ಅವರ ಸಾಹಿತ್ಯಪ್ರೀತಿ ಕುರಿತು ಹೊನ್ನಾವರ ಎಸ್ಡಿಎಮ್ ಕಾಲೇಜಿನ ಕನ್ನಡ ವಿಭಾಗದ ನಾಗರಾಜ ಹೆಗಡೆ ಅಪಗಾಲ ವಿಚಾರ ಮಂಡಿಸಿದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಸುಧಾರಾಣಿ ಸಂವಾದವನ್ನು ನಿರ್ವಹಿಸಿದರು. ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನರಹಳ್ಳಿಯವರ ಆಯ್ದ ಪುಸ್ತಕಗಳನ್ನು ಅಧ್ಯಯನ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಆಳ್ವಾಸ್ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರಿನ ಅಭಿನವ ಪ್ರಕಾಶನದ ನ. ರವಿಕುಮಾರ ವಂದಿಸಿದರು. ವಿದ್ಯಾರ್ಥಿನಿಯರಾದ ಸೌಮ್ಯ ಕುಂದರ್ ಹಾಗೂ ಅನೀಶಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ “ಯಶೋಧಾ ಪ್ರಜ್ಞೆ”ಯ ಲೇಖಕಿ ರಜನಿ ನರಹಳ್ಳಿ ಹಾಗೂ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
