ಮೂಡುಬಿದ್ರೆ: ಸಂಕುಚಿತ ಭಾವನೆಗಳು ಇಂದು ಸಮಾಜವು ಛಿದ್ರವಾಗುವ ಸನ್ನಿವೇಶದಲ್ಲಿ ತೌಳವ ಇಂದ್ರ ಸಮಾಜವು ಅತ್ಯಂತ ಶ್ರೇಷ್ಠ ಕಾರ್ಯವನ್ನು ಮಾಡಿದೆ. ಯಾವುದೇ ಭೇದ ಭಾವ ಮಾಡದೆ ಜೈನ ಬಾಲಕ ಬಾಲಕಿಯರನ್ನು ಒಟ್ಟುಗೂಡಿಸಿ ಧರ್ಮ ಮಾರ್ಗದಲ್ಲಿ ಬದುಕನ್ನು ಸಾಗಿಸಲು ಪ್ರೇರೇಪಣೆ ನೀಡುವ ಸ್ತುತ್ಯಾರ್ಹ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವ ಅವಶ್ಯಕತೆ ಇದೆ. ಜೈನ ಸಮಾಜದ ಏಳಿಗೆಗೆ ಇದು ಹೊಸ ನಾಂದಿಯಾಗಬೇಕು. ಜೈನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳ ತುರ್ತು ಅವಶ್ಯಕತೆ ಇದೆ ಎಂದು ಮೂಡಬಿದ್ರೆ ಜೈನ ಮಠದ ಸ್ವಸ್ತಿ ಶ್ರೀ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ನುಡಿದರು.


ಅವರು ಫೆ. 22ರಂದು ಮೂಡಬಿದ್ರೆಯ ಶ್ರೀ ಮಹಾವೀರ ಭವನದಲ್ಲಿ ನಡೆದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ತೌಳವ ಇಂದ್ರ ಸಮಾಜ ಆಯೋಜಿಸಿದ ಇಂದ್ರ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯನ ಸಂಸ್ಕಾರ ಮತ್ತು ಜೈನ ಸಮಾಜದ ಮಕ್ಕಳಿಗೆ ವೃತೋಪದೇಶ ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ನೀಡಿ ಮಾತನಾಡುತ್ತಿದ್ದರು.
ವಟುಗಳಿಗೆ ಧರ್ಮೋಪದೇಶವನ್ನು ನೀಡಿದ ಶ್ರೀಗಳು, ಜೈನ ಆಚಾರ್ಯರು ಉಪದೇಶಿಸಿದ ನಾಲ್ಕುಅನುಯೋಗಗಳಲ್ಲಿ ಚರಣಾನುಯೋಗದಲ್ಲಿ ನೀಡಿದ ತತ್ವಗಳನ್ನು ಶ್ರಾವಕರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಮೋಕ್ಷವನ್ನು ಸಾಧಿಸಬಹುದು. ಮೋಕ್ಷ ಸಾಧನೆಗೆ ಪಂಚಾಣು ವ್ರತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಿದೆ ಮತ್ತು ಇದು ಎಲ್ಲರಿಗೂ ಮುಕ್ತವಾಗಿದೆ ಎಂದು ಉಪದೇಶ ನೀಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ತೌಳವ ಇಂದ್ರ ಸಮಾಜದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಏಳು ವಟುಗಳಿಗೆ ಉಪನಯನ ಸಂಸ್ಕಾರವನ್ನು ಮತ್ತು 25 ಜೈನ ಬಾಲಕ ಬಾಲಕಿಯರಿಗೆ ವೃತೋಪದೇಶವನ್ನು ನೀಡಲಾಯಿತು. ತೌಳವ ಇಂದ್ರ ಸಮಾಜದ ಅಧ್ಯಕ್ಷರಾದ ಧರಣೇಂದ್ರ ಇಂದ್ರ ಪಾಣೇರು ಮತ್ತು ಕಾರ್ಯದರ್ಶಿಗಳಾದ ಶ್ರೀ ವೃಷಭರಾಜ ಇಂದ್ರ ಅಜ್ಜಿಬೆಟ್ಟು ಇವರ ನೇತೃತ್ವದಲ್ಲಿ ಪದಾಧಿಕಾರಿಗಳ ಸಹಕಾರದೊಂದಿಗೆ ಜರುಗಿತು. ಅವಿಭಜಿತ ದ.ಕ. ಜಿಲ್ಲೆಯ ಇಂದ್ರರು ಹಾಗೂ ಜೈನ ಶ್ರಾವಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದಾನಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು. ಪ್ರಮೋದ್ ಕುಮಾರ್ ಉಜಿರೆಯವರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.
