ಉಡುಪಿ: ದಾರ್ಶನಿಕರ ಜೀವನಾದರ್ಶಗಳು ಮನುಕುಲದ ಏಳಿಗೆಗೆ ದಾರಿದೀಪ – ಎಂ. ಎ. ಗಫೂರ್

ಉಡುಪಿ: ತಿಗಳ ಸಮುದಾಯದ ಆರಾಧ್ಯ ಧೈವ್ಯರಾದ ಶ್ರೀ ಅಗ್ನಿಬನ್ನಿರಾಯ ರಂತಹ ಮಹಾನ್ ದಾರ್ಶನಿಕರ ಜೀವನಾದರ್ಶಗಳು ಮನುಕುಲದ ಏಳಿಗೆಗೆ ದಾರಿದೀಪವಾಗಲಿದೆ ಎಂದು ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಪೂರ್ ಹೇಳಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಅಗ್ನಿ ಬನ್ನಿರಾಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಗ್ನಿ ಬನ್ನಿರಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.

ಶ್ರಮ ಜೀವನಕ್ಕೆ ಹೆಸರಾದ ತಿಗಳ ಸಮುದಾಯದವರು ಅಗ್ನಿಬನ್ನಿರಾಯ ಅವರನ್ನು ಸಮಾಜ ಸುಧಾರಕರು ಎಂದು ಆರಾಧಿಸುತ್ತಿದ್ದಾರೆ. ಸುಮಾರು 10, 11 ಹಾಗೂ 12 ನೇ ಶತಮಾನದಲ್ಲಿ ಹಲವಾರು ವಚನಕಾರರು, ಸಮಾಜ ಸುಧಾರಕರು, ದಾರ್ಶನಿಕರು ಜನಿಸಿ, ಸಮಾಜದಲ್ಲಿನ ಲೋಪದೋಷಗಳನ್ನು ಸರಿಪಡಿಸುವುದರೊಂದಿಗೆ ಸಮಸಮಾಜ ನಿರ್ಮಾಣಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ ಎಂದರು.
ಜೀವನದಲ್ಲಿ ಸತ್ಯವನ್ನು ಪ್ರತಿಪಾಧಿಸುತ್ತಿದ್ದ ಅಗ್ನಿಬನ್ನಿರಾಯರ ಮಾರ್ಗವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಶೋಷಣೆ ಮುಕ್ತ ಸಮಾಜಕ್ಕೆ ಶ್ರಮಿಸಿದ ಅಗ್ನಿಬನ್ನಿರಾಯರನ್ನು ಆದರ್ಶವಾಗಿಟ್ಟುಕೊಂಡು ಜೀವನ ರೂಪಿಸಿಕೊಳ್ಳಬೇಕು. ಕೃಷಿ, ಕಲೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದ ತಿಗಳೆ ಸಮುದಾಯವು ಸಮಾಜದ ಮುನ್ನೆಲೆಗೆ ಬರಬೇಕು ಎಂದರು.

ಸಾಂಸ್ಕೃತಿಕ ಚಿಂತಕ ಡಾ.ಶ್ರೀಕಾಂತ್ ಸಿದ್ಧಾಪುರ ಉಪನ್ಯಾಸ ನೀಡಿ ಮಾತನಾಡಿ, ಜನಪದ ಹಾಗೂ ಪೌರಾಣಿಕ ಮೂಲದಿಂದ ಅಗ್ನಿ ಬನ್ನಿರಾಯ ಬಗ್ಗೆ ಕಥೆಗಳು ನಮಗೆ ದೊರಕುತ್ತವೆ. ಭಾಷಾವಾರು ಪ್ರಾಂತ್ಯ ರಚನೆ ಆಗುವ ಮೊದಲು ತಿಗಳರು ತಮ್ಮ ರಾಜ್ಯ ರಕ್ಷಣೆ ಹಾಗೂ ಸ್ವಾಮಿ ನಿಷ್ಠೆಗಾಗಿ ಸೈನ್ಯ ಸೇರಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ ಎಂದು ಶಾಸನದಲ್ಲಿ ತಿಳಿದು ಬರುತ್ತದೆ ಎಂದ ಅವರು, ತಿಗಳ ಸಮುದಾಯದವರನ್ನು ಹೆಚ್ಚಾಗಿ ಬೆಂಗಳೂರು, ಮೈಸೂರು, ಮಂಡ್ಯ ಭಾಗದಲ್ಲಿ ಕಾಣಬಹುದಾಗಿದೆ. ಲಕ್ಷಾಂತರ ಜನರನ್ನು ಹೊಂದಿದ ಈ ಸಮುದಾಯದ ಅಭಿವೃದ್ಧಿಗಾಗಿ ಸರಕಾರವು ತಿಗಳ ಸಮುದಾಯ ಅಭಿವೃದ್ಧಿ ನಿಗಮವನ್ನು ಸಹ ಸ್ಥಾಪಿಸಿದೆ ಎಂದರು.

ತೋಟಗಾರಿಕೆಯಲ್ಲಿ ಕೌಶಲ ಹೊಂದಿದ ತಿಗಳರು ಬೆಂಗಳೂರಿನ ಲಾಲ್‍ಬಾಗ್ ಉದ್ಯಾನವನ ನಿರ್ಮಾಣಕ್ಕೆ ಕಾರಣೀಕರ್ತರಾಗಿದ್ದು, ಅಲ್ಲಿನ ಕೈತೋಟಗಳ ರಚನೆಗಳು ಇಂದು ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಪ್ರಾಮಾಣಿಕೆಯಿಂದ ನಿರ್ವಹಿಸುತ್ತಿದ್ದ ತಿಗಳರು ನಿಜಕ್ಕೂ ಶ್ರಮಜೀವಿಗಳು ಎಂದ ಅವರು, ಉತ್ತಮ ಹವ್ಯಾಸಗಳನ್ನು ದೈನಂದಿನ ಜೀವನದಲ್ಲಿ ಮೈಗೂಡಿಸಿಕೊಂಡಲ್ಲಿ ಒತ್ತಡ ರಹಿತವಾಗಿ ಜೀವಿಸಲು ಸಾಧ್ಯ ಎಂದು ಸಲಹೆ ನೀಡಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಮಾತನಾಡಿ, ವಿವಿಧ ಸಮುದಾಯದಲ್ಲಿ ಸೇವೆ ಸಲ್ಲಿಸಿದ ಸಂತರ, ಚಿಂತಕರ ಜಯಂತಿಗಳನ್ನು ಸರಕಾರದ ವತಿಯಿಂದ ಕಾಲಕಾಲಕ್ಕೆ ಆಚರಿಸಲಾಗುತ್ತಿದೆ. ಅವರುಗಳು ನಾಡಿಗೆ ನೀಡಿದ ಉದಾತ್ತ ಕೊಡುಗೆಗಳನ್ನು ಸ್ಮರಿಸುತ್ತಾ, ಅದನ್ನು ಸ್ಪೂರ್ತಿಯಾಗಿ ಯುವಜನರು ತೆಗೆದುಕೊಳ್ಳಬೇಕು. ಅವರ ಉದಾತ್ತ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ, ಜಯಂತಿ ಆಚರಣೆಗಳಲ್ಲಿ ಸಾರ್ಥಕತೆ ಕಾಣಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ನವನೀತ್, ಜಿಲ್ಲಾಡಳಿತದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಇಲಾಖೆಯ ಸಿಬ್ಬಂದಿ ವರ್ಷಾ ಬಿ ಕೋಟ್ಯಾನ್ ನಿರೂಪಿಸಿ, ಉಪನ್ಯಾಸಕ ರಾಮಾಂಜಿ ವಂದಿಸಿದರು.

Leave a Reply

Your email address will not be published. Required fields are marked *