ಸಫಾಯಿ ಕರ್ಮಚಾರಿಗಳ ಆರೋಗ್ಯ ತಪಾಸಣೆಯನ್ನು ಕಾಲಕಾಲಕ್ಕೆ ನಡೆಸುವುದರೊಂದಿಗೆ ಅವರ ಆರೋಗ್ಯ ರಕ್ಷಣೆಗೆ ಮುಂದಾಗಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಸಮಾಜದಲ್ಲಿ ನೈರ್ಮಲ್ಯ ಕಾಪಾಡುವಲ್ಲಿ ಅತ್ಯಮೂಲ್ಯ ಶ್ರಮ ವಹಿಸುವ ಸಫಾಯಿ ಕರ್ಮಚಾರಿಗಳ ಆರೋಗ್ಯ ತಪಾಸಣೆಯನ್ನು ಕಾಲಕಾಲಕ್ಕೆ ನಿಯಮಿತವಾಗಿ ನಡೆಸುವುದರೊಂದಿಗೆ ಅವರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿಯ ಮೊದಲನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪೌರಕಾರ್ಮಿಕರ ಆರೋಗ್ಯವನ್ನು ಕಾಪಾಡುವ ಹಿತದೃಷ್ಠಿಯಿಂದ ಪೌರಾಡಳಿತದ ನಿರ್ದೇಶನದಂತೆ ಪ್ರತೀ ಮೂರು ತಿಂಗಳಿಗೊಮ್ಮೆ ಆರೋಗ್ತ ತಪಾಸಣೆ ಹಾಗೂ ವರ್ಷಕ್ಕೆ ಒಂದು ಬಾರಿ ಮಾಸ್ಟರ್ ಹೆಲ್ತ್ ಚೆಕ್ ಮಾಡಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರುಗಳಿಗೆ ಆರೋಗ್ಯ ತಪಾಸಣೆ ನಡೆಸುವ ದಿನ ಹಾಗೂ ಸ್ಥಳಗಳ ಬಗ್ಗೆ ಸೂಚನಾ ಫಕಗಳಲ್ಲಿ ಪ್ರದರ್ಶಿಸಬೇಕು ಎಂದರು.

ಮಾನ್ಯುಯಲ್ ಸ್ಕ್ಯಾವೆಂಜರ್ಸ್ ಪದ್ಧತಿಗೆ ಈಗಾಗಲೇ ದೇಶಾದ್ಯಂತ ನಿಷೇಧವಿದೆ. ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾನ್ಯುಯಲ್ ಸ್ಕ್ಯಾವೆಂಜರ್ ಅನ್ನು ನೇಮಿಸಿಕೊಂಡು ಕೆಲಸ ಕಾರ್ಯವನ್ನು ಮಾಡಿಸಿದ್ದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಸಕ್ಕಿಂಗ್ ಹಾಗೂ ಜೆಟ್ಟಿಂಗ್ ಯಂತ್ರಗಳ ಬಳಕೆಯೊಂದಿಗೆ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕು. ಮನೆಗಳು, ಕಂಪನಿ, ಆಸ್ಪತ್ರೆ, ಅಪಾರ್ಟ್‍ಮೆಂಟ್ ಸೇರಿದಂತೆ ಇತರೆಡೆ ಮ್ಯಾನ್ ಹೋಲ್, ಸೆಪ್ಟಿಕ್ ಟ್ಯಾಂಕ್, ತೆರೆದ ಚರಂಡಿ, ಪಿಟ್ ಗುಂಡಿಗಳು ಕಟ್ಟಿಕೊಂಡಲ್ಲಿ ಸ್ವಚ್ಛಗೊಳಿಸಲು ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ 14420 ಮತ್ತು ಗ್ರಾಮಿಣ ಪ್ರದೇಶ ವ್ಯಾಪ್ತಿಯಲ್ಲಿ 9480985555 ಅನ್ನು ಸಂಪರ್ಕಿಸಬಹುದಾಗಿದ್ದು, ಈ ಸಹಾಯವಾಣಿಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.

ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್ ಹಾಗೂ ಚಾಲಕರುಗಳಿಗೆ ಪ್ರತೀ ಮಾಹೆಯ ವೇತನವನ್ನು ಸಕಾಲದಲ್ಲಿ ಪಾವತಿಸಿರುವ ಬಗ್ಗೆ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ವೇತನ ಪಾವತಿ, ಸಾಮಾಜಿಕ ಭದ್ರತೆ ಒದಗಿಸಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು ಎಂದರು.
ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಅರ್ಹರಿಗೆ ವಸತಿ ಸೌಲಭ್ಯಗಳನ್ನು ಆದ್ಯತೆಯ ಮೇಲೆ ನೀಡಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರುಗಳ ಮಕ್ಕಳಿಗೆ ಸರ್ಕಾರದ ಆದೇಶದಂತೆ ಪ್ರತಿಭಾ ಪುರಸ್ಕಾರವನ್ನು ವಿತರಿಸಬೇಕು ಎಂದರು.
ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ದೈನಂದಿನ ಸ್ವಚ್ಛತಾ ಕಾರ್ಯದ ಕರ್ತವ್ಯ ನಿರ್ವಹಿಸುವಾಗ ತಪ್ಪದೆ ಸುರಕ್ಷತಾ ಪರಿಕರಗಳನ್ನು ಧರಿಸಿ, ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ತಪ್ಪಿದ್ದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇವುಗಳ ಬಗ್ಗೆ ಮೇಲುಸ್ತುವಾರಿಯನ್ನು ಅಧಿಕಾರಿಗಳು ವಹಿಸಬೇಕು ಎಂದರು.

ಪ್ರತಿಯೊಬ್ಬ ಪೌರಕಾರ್ಮಿಕರು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಅನುಕೂಲವಾಗಲಿದೆ. ಆದ್ದರಿಂದ ಎಲ್ಲಾ ಅಧಿಕಾರಿಗಳು ತಮ್ಮ ಪೌರಕಾರ್ಮಿಕರಿಗೆ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಯವರಿಗೆ ಈ ಯೋಜನೆಯನ್ನು ಮಾಡಿಸಲು ಕ್ರಮವಹಿಸಬೇಕು ಎಂದರು.

ಸಭೆಯಲ್ಲಿ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಎ.ಎಸ್.ಪಿ ಸುಧಾಕರ ನಾಯಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ, ಸಮಿತಿಯ ಸದಸ್ಯರುಗಳಾದ ಪ್ರಶಾಂತಿ, ನಾಗರಾಜ, ಕೊಟ್ರಿಬಾಯಿ ಹಾಗೂ ಶಂಕರ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *