ಉಡುಪಿ: ವಚನಗಳ ಮೂಲಕ ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರಿದವರು ಶಿವಶರಣರು – ಎಂ.ಎ ಗಫೂರ್

ಉಡುಪಿ: ಹನ್ನೆರಡನೆಯ ಶತಮಾನವನ್ನು ವಚನ ಕ್ರಾಂತಿಯುಗ ಎನ್ನಲಾಗುತ್ತಿದ್ದು, ಅಂದಿನ ಕಾಲಘಟ್ಟದಲ್ಲಿ ಶಿವಶರಣೆಯರು ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸ್ಪೃಷ್ಯತೆ, ಜಾತೀಯತೆ, ಅಸಮಾನತೆಯನ್ನು ತೊಲಗಿಸಲು ತಮ್ಮದೇ ಶೈಲಿಯಲ್ಲಿ ಸರಳ ರೂಪದಲ್ಲಿ ವಚನಗಳನ್ನು ರಚಿಸುವ ಮೂಲಕ ಜನಸಾಮಾನ್ಯರು ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರಿದ್ದಾರೆ. ಅಂದು ಶಿವಶರಣರು ಪ್ರತಿಪಾದಿಸಿದ ವಚನ ಸಾರಗಳು ಸಮಾಜದಲ್ಲಿ ಇಂದಿಗೂ ಪ್ರಸ್ತುತವಾಗಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು.

ಅವರು ನಗರದ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಮಹಾಯೋಗಿ ವೇಮನ ಹಾಗೂ ಶ್ರೀ ಅಂಬಿಗರ ಚೌಡಯ್ಯರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
ನೇರ ನಿಷ್ಠುರವಾದಿಯಾಗಿ ಸಮ ಸಮಾಜ ನಿರ್ಮಾಣವನ್ನು ಪ್ರತಿಪಾದಿಸಿದ ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನ ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ಮಾದರಿಯಾಗಿ ಉಳಿದಿದೆ. ಶಿವಶರಣರ ವಚನಗಳ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ನಮ್ಮಲ್ಲಿ ಅಡಗಿರುವ ಅಜ್ಞಾನದ ಕತ್ತಲನ್ನು ಹೋಗಲಾಡಿಸಿಕೊಂಡು ಸನ್ಮಾರ್ಗದ ಹಾದಿಯಲ್ಲಿ ಸಾಗಬಹುದು ಎಂದರು.

ಸರಕಾರ, ಸಂತರ, ಕವಿಗಳ, ದಾರ್ಶನಿಕರ, ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸುತ್ತಾ ಬರುತ್ತಿದ್ದು, ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ಸಮಾಜವನ್ನು ಕೊಂಡೊಯ್ಯಲು ಇಂತಹ ಜಯಂತಿ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದ ಅವರು, ಯುವಜನರು ವಚನಕಾರರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಅಂಬಿಗರ ಚೌಡಯ್ಯ ಅವರು 12 ನೆ ಶತಮಾನದಲ್ಲಿಯೇ ಜಾತೀಯತೆ, ಮೌಢ್ಯತೆ, ವಿರೋಧಿಸಿದ್ದರು. ವಿಭಿನ್ನ ವ್ಯಕ್ತಿತ್ವದ ಶ್ರೇಷ್ಠ ವಚನಕಾರರಾದ ಇವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದೆ. ಹಾಗೆಯೇ ಸಮಾಜದಲ್ಲಿ ಕವಿದಿದ್ದ ಅಂಧಕಾರ ತೊಡೆದುಹಾಕಲು ಜ್ಞಾನದ ದೀವಿಗೆ ಹಿಡಿದು ಸಮಾಜ ಸುಧಾರಣೆಗೆ ಅವಿರತ ಶ್ರಮ ವಹಿಸಿ ಸಮಾಜ ಸುಧಾರಕರಾದ ಮಹಾಯೋಗಿ ವೇಮನ ರಂತಹ ಮಹನೀಯರುಗಳ ಆದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ ಎಂದರು.

ಒಬ್ಬ ವ್ಯಕ್ತಿಯ ಜೀವನ ಕೇವಲ ಕ್ಷಣಮಾತ್ರದಲ್ಲಿ ಬದಲಾಗಲು ಸಾಧ್ಯವಿಲ್ಲ. ಆ ಕ್ಷಣದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಮನಸ್ಸನ್ನು ಸ್ಥೀಮಿತದಲ್ಲಿ ಇಟ್ಟುಕೊಂಡು ತಮ್ಮ ಗುರಿ ಸಾಧನೆಗಳ ಕಡೆಗೆ ಗಮನಹರಿಸಬೇಕು. ಮನಸ್ಸಿನ ಮಾತಿಗಿಂತ ಮೆದುಳಿನ ಮಾತನ್ನು ಆಲಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಿವೃತ್ತ ಉಪನ್ಯಾಸಕಿ ನಳಿನಾದೇವಿ ಎಂ.ಆರ್ ಉಪನ್ಯಾಸ ನೀಡಿ ಮಾತನಾಡುತ್ತಾ, 12 ನೇ ಶತಮಾನದಲ್ಲಿ ವಚನ ಚಳುವಳಿಯ ಕ್ರಾಂತಿಯಿಂದಾಗಿ, ಲಿಂಗ ತಾರತಮ್ಯ, ಜಾತೀಯತೆ, ಅಂಧ ಆಚರಣೆಗಳನ್ನು ಮೀರಿ ಜನಸಾಮಾನ್ಯರಿಗೆ ಸಮಾನತೆಯನ್ನು ನೀಡಿದವರು ಬಸವಣ್ಣನವರು. ಪ್ರತಿಯೊಬ್ಬರೂ ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ಬದುಕಿನ ಸರಿ-ತಪ್ಪುಗಳನ್ನು ಅರಿತು ತಿದ್ದುಪಡಿಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟವರು ಅಂದಿನ ಕಾಲದ ವಚನಕಾರರು ಎಂದರು.

ಈ ಕಾಲಘಟ್ಟದಲ್ಲಿ ಕಂಗೊಳಿಸಿದ ಶರಣರು ನಿಷ್ಠುರವಾಗಿ, ನೇರ ನುಡಿಯ ಮೂಲಕ ಮೊನಚು ಮಾತುಗಳಲ್ಲಿ ಸಾಮಾಜಿಕ ಸ್ಥಿತಿಗತಿ, ಶೋಷಿತ ತಾರತಮ್ಯವನ್ನು ಹೋಗಲಾಡಿಸಲು ಶ್ರಮಿಸುವ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ನದಿ ದಾಟಿಸುವ ಕೆಲಸ ನಿರ್ವಹಿಸುತ್ತ ಶಿವನ ಆರಾಧಕರಾಗಿ ಲಿಂಗಪೂಜೆ ಮಾಡುತ್ತಿದ್ದ ಅಂಬಿಗರ ಚೌಡಯ್ಯರ ವಚನಗಳ ಸಂದೇಶಗಳು ತಪ್ಪಿತಸ್ಥರಿಗೆ ಬುದ್ಧಿ ಕಲಿಸುವ ಹಾಗೆ ಇತ್ತು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಸ್ಥಾನ ಪಡೆದಿದ್ದ ಇವರ ಹೆಸರಿನಲ್ಲಿ ಇಂದಿಗೂ ಉತ್ತರ ಕರ್ನಾಟಕದ ಕೆಲವು ಭಾಗಗಳ ಗವಿ, ಮಠಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿರುವುದನ್ನು ಕಾಣಬಹುದಾಗಿದೆ ಎಂದರು.

ಆಂದ್ರಪ್ರದೇಶದ ಕವಿಯಾದ ಮಹಾಯೋಗಿ ವೇಮನರು ಜನತಾ ಕವಿಯಾಗಿ ಸಮಾಜದ ಜನರ ಮನೋಭಾವನೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರು. ಸಮಾಜದಲ್ಲಿ ಕಂಡ ಅಸಮಾನತೆ, ದ್ವಂಧ್ವ ಅಂಧಶ್ರದ್ದೆಗಳನ್ನು ಸತ್ಯಭರಿತವಾದ ಸರಳ ಭಾಷೆಯಲ್ಲಿ ಹಾಡಿ, ಅರಿವಿನ ಬೀಜ ಬಿತ್ತಿದವರು. ಅವರ ತತ್ವಪದಗಳು ಕೇವಲ ಸಾಹಿತ್ಯವಾಗಿ ಉಳಿಯದೇ ಸಾಮಾಜಿಕ ಪರಿವರ್ತನೆಯ ಘೋಷಣೆಗಳಾಗಿದ್ದವು ಎಂದರು.
ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಚಿಕ್ಕಮಠ, ಶಾಲೆಯ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದದ್ರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವರ್ಷಾ ಬಿ ಕೋಟ್ಯಾನ್ ನಿರೂಪಿಸಿ, ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಕೆ. ಪೂರ್ಣಿಮಾ ವಂದಿಸಿದರು.

Leave a Reply

Your email address will not be published. Required fields are marked *