ಮೂಡುಬಿದಿರೆ: ನೆಲ, ಜಲ, ಕೃಷಿ ಅಭಿವೃದ್ಧಿಯ ಧ್ಯೇಯವನ್ನು ಹೊಂದಿರುವ ದಿಶಾ ಟ್ರಸ್ಟ್ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಫೆಬ್ರವರಿ 12ರಂದು ಎರೆ ಗೊಬ್ಬರ, ದ್ರವ ಗೊಬ್ಬರ ಹಾಗೂ ಸಾವಯವ ಕೃಷಿಯ ಕಾರ್ಯಗಾರವನ್ನು ಹಮ್ಮಿಕೊಂಡಿತ್ತು. ನೈಸರ್ಗಿಕ ಸಂಪನ್ಮೂಲವನ್ನು ರಕ್ಷಿಸುವ ನಿಟ್ಟಿನಲ್ಲಿ ರೈತರಿಗೆ ಸಾವಯವದ ಮಹತ್ವವನ್ನು ತಿಳಿಸಿಕೊಟ್ಟು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಪ್ರಯತ್ನವನ್ನು ಟ್ರಸ್ಟ್ ಮಾಡುತ್ತಿದೆ. ಕಳೆದ ಒಂದು ವರ್ಷದಿಂದ ಸುಮಾರು 2,000ಕ್ಕೂ ಹೆಚ್ಚು ರೈತರನ್ನು ಸಂದರ್ಶಿಸಿ ಮೂಡುಬಿದಿರೆ ತಾಲೂಕಿನ 6 ಪಂಚಾಯತ್ಗಳಲ್ಲಿ 12 ಗ್ರಾಮಗಳನ್ನು ಗುರುತಿಸಿ ಪ್ರತಿ ಗ್ರಾಮದಲ್ಲಿಯೂ ಮೂರು ಮೂರು ಗುಂಪುಗಳನ್ನು ರಚಿಸಿ ಟ್ರಸ್ಟಿನ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಸಂಯೋಜಕ ನಿಹಾಲ್ ಮಚಾದೊ ಪ್ರಸ್ತಾವನೆಯಲ್ಲಿ ತಿಳಿಸಿದರು.



ತರಬೇತಿ ಕಾರ್ಯಗಾರವನ್ನು ಗಿಡಕ್ಕೆ ಎರೆಹುಳು ಗೊಬ್ಬರವನ್ನು ಹಾಕುವುದರ ಮೂಲಕ ಸಾವಯವ ಕೃಷಿಕ ದಯಾನಂದ ಗುಡ್ಡಾಜೆ ಉದ್ಘಾಟಿಸಿದರು. ಅವರು ತಮ್ಮ ಭಾಷಣದಲ್ಲಿ ರೈತರು ಉತ್ತಮ ಮಣ್ಣಿಗಾಗಿ ಎರಹುಳುವನ್ನು ಹೆಚ್ಚಿಸುವ ಪ್ರಯತ್ನವನ್ನು ಸಾವಯವ ಕೃಷಿಯ ಮೂಲಕ ಮಾಡಬಹುದು. ದೇಸಿ ತಳಿಯ ಗೋಮಾತೆಯನ್ನು ಸಾಕುವುದರಿಂದ ರೈತರು ಸಾಕಷ್ಟು ಅಭಿವೃದ್ಧಿಯಾಗಬಹುದು ಎನ್ನುವುದನ್ನು ತಿಳಿಸಿಕೊಟ್ಟರು.


ಸಂಪನ್ಮೂಲ ವ್ಯಕ್ತಿ ಮಂಗಳೂರು ವಿಶ್ವವಿದ್ಯಾಲಯದ ತೋಟಗಾರಿಕಾ ವಿಭಾಗದ ಮುಖ್ಯಸ್ಥ, ತರಬೇತಿದಾರ ಲಕ್ಷ್ಮಣ ಡಿ ಅವರು ಪ್ರಾತ್ಯಕ್ಷಿಕೆಯ ಮೂಲಕ ಎರಗೊಬ್ಬರ ತಯಾರಿಕೆ, ನವ ಗೊಬ್ಬರದ ಮಹತ್ವ, ಸಾವಯವ ಕೃಷಿಯ ಮುಖ್ಯ ಅಂಶಗಳನ್ನು ವಿವಿಧ ಉದಾಹರಣೆಗಳ ಮೂಲಕ ಮನದಟ್ಟು ಮಾಡಿದರು. ಹಲವಾರು ಮಂದಿ ಪ್ರಶ್ನೆಗಳ ಮೂಲಕ ಸಂಶಯಗಳನ್ನು ನಿವಾರಿಸಿಕೊಂಡರು. 12 ಗ್ರಾಮಗಳ, ಆರು ಪಂಚಾಯತ್ಗಳ, 36 ಗುಂಪುಗಳ, ವಿವಿಧ ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.
ಕಾರ್ಯನಿರ್ವಾಹಕ ಟ್ರಸ್ಟಿ ಡಾ. ಐರಿನ್ ವೇಗಸ್ ಪರಿಚಯ ಗೈದರು. ಟ್ರಸ್ಟ್ ನ ಕ್ಷೇತ್ರ ಸಂಯೋಜಕರುಗಳಾದ ಪ್ರತಿಮಾ ಸ್ವಾಗತಿಸಿದರು. ಮೋಹಿನಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಭಾವತಿ ವಂದಿಸಿದರು.
