ಇಂದು ವಿಶ್ವ ಅರಣ್ಯ ದಿನ, ನಾಳೆ ವಿಶ್ವ ಜಲ ದಿನ....ಆದರೆ ಈ ಎರಡು ದಿನಗಳು ಮಾತ್ರ ವನ, ಜಲ ಸಂರಕ್ಷಣೆಗೆ ಸೀಮಿತ ಅಲ್ಲ. ವರ್ಷಪೂರ್ತಿ ವನ ದಿನ - ಜಲ ದಿನವನ್ನಾಗಿ ಆಚರಿಸಬೇಕು ಅಂತಹ ಅನಿವಾರ್ಯತೆ ಇಂದು ನಮ್ಮೆದುರು ಇದೆ. ಜಲ ಸಂರಕ್ಷಣೆ ಆಗಬೇಕಾದರೆ ಪಶ್ಚಿಮ ಘಟ್ಟದಲ್ಲಿ ಇರುವ ನದೀ ಮೂಲದ ಜೀವ ನಾಡಿ ಆಗಿರುವ  ಮಳೆಕಾಡು ( ಶೋಲಾ ಅರಣ್ಯ ) ಉಳಿಯಬೇಕು, ಮಳೆಕಾಡು ಉಳಿದರೆ ಸಾಲದು ಮಳೆ ಕಾಡಿಗೆ ನೀರು ಸರಬರಾಜು ಮಾಡುವ ಬೆಟ್ಟದ ಮೇಲ್ಪದರದ ಹುಲ್ಲುಗಾವಲು ಉಳಿಯಬೇಕು. ಇವೆರಡೂ ಉಳಿದರೆ ನದಿ ನೆಮ್ಮದಿಯಾಗಿ ಹರಿದು ಜಲ ಸಂರಕ್ಷಣೆ ಆಗಬಹುದು. ಈ ಛಾಯಾ ಚಿತ್ರವನ್ನು ಗಮನಿಸಿ ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ವೈವಿದ್ಯ ಪ್ರದೇಶ ಇದು. ಬೆಟ್ಟಗಳ ಮೇಲ್ಭಾಗದಲ್ಲಿ ಎಲ್ಲೂ ಕಾಡು ಇಲ್ಲ, ಅಲ್ಲಿ ಕೇವಲ ಹುಲ್ಲುಗಾವಲು ಪ್ರದೇಶ,ಈ ಹುಲ್ಲು ಹೊದಿಕೆ ಬೆಟ್ಟಕ್ಕೆ ರಕ್ಷಣೆ ಅಂದ್ರೆ ಮನುಷ್ಯನ ಶರೀರಕ್ಕೆ ಚರ್ಮ ಹೇಗೆ ರಕ್ಷಣೆ ಅದೇ ರೀತಿ ಇದು ಬೆಟ್ಟದ ಭದ್ರತೆ. ಎರಡು ಬೆಟ್ಟಗಳ ನಡುವೆ ಇರುವ ಕಣಿವೆಗಳಲ್ಲಿ ದಟ್ಟ ಅರಣ್ಯ ಇದೆ ಇದು ನಿತ್ಯ ಹರಿದ್ವರ್ಣದ ಶೋಲಾ ಅರಣ್ಯ. ಅಂದರೆ ಬೆಟ್ಟದ ಮೇಲೆ ಬಿದ್ದ ಮಳೆ ನೀರನ್ನು ಹುಲ್ಲುಗಾವಲು ತನ್ನ ಒಳ ಪದರದಲ್ಲಿ ಇಂಗಿಸಿ ಕೊಂಡು ಈ ಶೋಲಾ ಅಡವಿಗೆ ಸರಬರಾಜು ಮಾಡುತ್ತವೆ , ಈ ಶೋಲಾ ಅಡವಿ ಆ ಮಳೆ ನೀರನ್ನು ತನ್ನ ಒಡಲಲ್ಲಿ ಶೇಖರಿಸಿ ಕೊಂಡು ಒಂದು ಮಳೆಗಾಲ ಡಿಂದ ಇನ್ನೊಂದು ಮಳೆಗಾಲ ತನಕ ಹಂತ ಹಂತವಾಗಿ ಹೊಳೆಗಳು ಜೀವಂತ ಆಗಿ ಇರುವಂತೆ ಹಾರಿಸುತ್ತಾ ಇರುತ್ತವೆ. ಇನ್ನು ಅಲ್ಲಿನ ಇರುವೆ ಯಿಂದ ಆನೆಯವರೆಗ ಹುಲ್ಲಿನಿಂದ ಹಿಡಿದು ಆಕಾಶದ ಎತ್ತರಕ್ಕೆ ಬೆಳೆದು ನಿಂತಿರುವ ಮರಗಳವರೆಗೆ ಕಣ್ಣಿಗೆ ಕಾಣದ ಪಾಚಿ, ಶಿಲೀಂದ್ರ ಎಲ್ಲವೂ ಕಾಡು ಮತ್ತು ನದಿಯ ಜೀವಂತಿಕೆಯ ಪಾತ್ರಧಾರಿಗಳು.  ಆದ ಕಾರಣ ಪಶ್ಚಿಮ ಘಟ್ಟದ ಹುಲ್ಲುಗಾವಲು ಮತ್ತು ಶೋಲಾ ಅಡವಿ ಸಂರಕ್ಷಣೆ ಆದರೆ ಮಾತ್ರ ನಾಡು ನೆಮ್ಮದಿಯಾಗಿ ಉಳಿದೀತು. ಪಶ್ಚಿಮ ಘಟ್ಟದ ಈ ಹುಲ್ಲುಗಾವಲು, ಶೋಲಾ ಕಾಡು ಗಳಿಗೆ ಸಮಸ್ಯೆ ಆದ ಕಾರಣ ಭೂಕುಸಿತ, ಜಲ ಪ್ರವಾಹ, ಬರಗಾಲ , ಚಂ ಡ ಮಾರುತ ಮುಂತಾದ ಪ್ರಾಕೃತಿಕ ದುರಂತಗಳಿಗೆ ಆಮಂತ್ರಣ ಲಭಿಸುತ್ತವೆ. ನಮ್ಮ ಪುಟಗೋಸಿ ದರಿದ್ರ ರಾಜಕಾರಣಿಗಳು ಒಂದು ಕಡೆ ಕಾಡು ಉಳಿಸಿ, ನೀರು ಉಳಿಸಿ ಎಂದು ಭಾಷಣ, ಘೋಷಣೆ ಮಾಡುತ್ತಾ ಇನ್ನೊಂದು ಕಡೆ ಪಶ್ಚಿಮ ಘಟ್ಟದ ಕಾಡು, ನದೀ ಮೂಲವನ್ನು ನಾಶ ಮಾಡುವ ಮಾಫಿಯಾ ಗಳಿಗೆ ಅನುಮತಿ ನೀಡುತ್ತಾ ಸೂಟ್ಕೇಸ್ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುತ್ತಿವೆ. ನಾವು ಅಂತ ಭ್ರಷ್ಟ ರಾಜಕಾರಣಿಗಳಿಗೆ ಮತ ನೀಡುತ್ತಾ ಕಾಡು ನಾಶಕ್ಕೆ ನಾವೇ ಅಗೋಚರವಾಗಿ ಪಾತ್ರಧಾರಿ ಗಳಾಗುತ್ತಾ ನೈಸರ್ಗಿಕ ದುರಂತಗಳು ಆದಾಗ " ಅಯ್ಯೋ ಛೇ ಎಂದು ವಿಷಾಧ ವ್ಯಕ್ತಪಡಿಸಿ ದುರಂತದ ಇನ್ನೊಂದು ಪುಟವನ್ನು ತೆರೆಯುತ್ತಾ ಇರುತ್ತೇವೆ. ಪಶ್ಚಿಮ ಘಟ್ಟದ ಅರಣ್ಯ ಮಾತೆ, ಜಲ ಮಾತೆ ಅಳುತ್ತಾ ಇದ್ದಾಳೆ, ತಾಯಿ ಯ ಕಣ್ಣೀರು ರೋದನಕ್ಕೆ ಕಿವಿ ಆಗುವವರು ಕಡಿಮೆ ಆಗುತ್ತಿದ್ದಾರೆ. ತಾಯಿ ಇರುವವರೆಗೆ ಯಾರಿಗೂ ತಾಯಿಯ ಮಹತ್ವ ಅರ್ಥ ಆಗುವುದಿಲ್ಲ, ಅದೇ ತಾಯಿಯನ್ನು ಕಳೆದುಕೊಂಡ ಮೇಲೆ ತಾಯಿಯ ಮಹತ್ವ ಅರ್ಥ ಆಗುವುದು. ಅದೇ ರೀತಿ ಇಂದು ಪ್ರಕೃತಿ ಮಾತೆ ಅಳುತ್ತಿದ್ದರೂ ನಮ್ಮ ಮೌನ....!? ನೆನಪಿಡಿ ಮುಂದೊಂದು ಭಯಾನಕ ಸನ್ನಿವೇಶ ನಮ್ಮೆದುರು ಇದ್ದೇ ಇದೆ. ಆಗ ತಾಯಿಯ ವೇದನೆಗೆ ಕಿವಿ ಆಗದ ನಾವು, ನೀವು, ನಮ್ಮ ನಿಮ್ಮೆಲ್ಲರ ಮಕ್ಕಳು ಅನುಭವಿಸಲೇಬೇಕು. ವಿಶ್ವ ಅಡವಿ ದಿನ, ವಿಶ್ವ ಜಲ ದಿನ ದ ಶುಭಾಶಯ ಹೇಳುವುದಾದರೂ ಹೇಗೆ ? ಯಾರಿಗೆ ಶುಭಾಶಯ ಹೇಳಬೇಕೋ ಅವರೇ ಅಳುತ್ತಿರುವಾಗ.....!??