ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ಗೆ 15 ನೇ ಹಣಕಾಸು ಯೋಜನೆಯಡಿ ಹಂಚಿಕೆಯಾಗಿರುವ 400.15 ಲಕ್ಷ ರೂ ಅನುದಾನದ ವಿಂಗಡಣೆ, ಕ್ರಿಯಾಯೋಜನೆ ತಯಾರಿಗೆ ಅನುಮತಿ ನೀಡುವ ಕುರಿತಂತೆ ಜಿಲ್ಲಾ ಪಂಚಾಯತ್ ಅದ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆಯು ಶನಿವಾರ ನಡೆಯಿತು.
ಉಡುಪಿ ಜಿಲ್ಲಾ ಪಂಚಾಯತ್ ಗೆ ಬಿಡುಗಡೆಯಾಗಿರುವ ಒಟ್ಟು ಅನುದಾನದಲ್ಲಿ , ಮಾರ್ಗಸೂಚಿಯಂತೆ, 50% ನಿರ್ಬಂದಿತ ಅನುದಾನ ಮತ್ತು 50% ಅನಿರ್ಬಂದಿತ ಯೋಜನೆಗಳಿಗಾಗಿ ಕ್ರಿಯಾ ಯೋಜನೆ ತಯಾರಿಸಬೇಕಿದ್ದು, ಒಟ್ಟು ಅನುದಾನದಲ್ಲಿ 25% ಪ.ಜಾತಿ ಮತ್ತು ಪಂಗಡ ಮತ್ತು 5% ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡುವಂತೆ ತಿಳಿಸಿದ ಅಧ್ಯಕ್ಷ ದಿನಕರ ಬಾಬು , ನಿರ್ಬಂದಿತ ಅನುದಾನ ಸುಮಾರು 2.07 ಕೋಟಿ ಇದ್ದು, ಇದರಲ್ಲಿ ಕುಡಿಯುವ ನೀರು ಯೋಜನೆಗಳಿಗಾಗಿ 1.035 ಕೋಟಿ,ನೈರ್ಮಲ್ಯಕ್ಕೆ 1.035 ಕೋಟಿ ಮೊತ್ತದ ಕ್ರಿಯಾ ಯೋಜನೆ ಹಾಗೂ ಅನಿರ್ಬದಿತ ಅನುದಾನದಲ್ಲಿ 2.07 ಕೋಟಿ ಮೊತ್ತದ ವಿವಿಧ ಕಾಮಗಾರಿಗಾಗಿ ಕ್ರಿಯಾಯೋಜನೆ ತಯಾರಿಸುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ್ ನ 2019-20 ರ ಅನುದಾನದಲ್ಲಿ 13 ಕೋಟಿ ರೂ ವೆಚ್ವವಾಗದೇ ಲ್ಯಾಪ್ಸ್ ಆಗಿದ್ದು, ಕಾಮಗಾರಿ ಮುಕ್ತಾಯಗೊಂAಡು ಬಿಲ್ಲು ಸಲ್ಲಿಸಿದ್ದರೂ ಸಹ ಸಂಬoದಪಟ್ಟವರಿಗೆ ಹಣ ಪಾವತಿಯಾಗದೇ , ಲ್ಯಾಪ್ಸ್ ಆಗಿದೆ , ಈ ಕುರಿತು ಸಂಬoದಪಟ್ಟವರ ವಿರುದ್ದ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರಾದಿಯಾಗಿ ಎಲ್ಲಾ ಸದಸ್ಯರು ಕೋರಿದರು, ಈ ಕುರಿತಂತೆ ಈಗಾಗಲೇ ಸಂಬoದಪಟ್ಟವರಿಗೆ ಶೋಕಾಸ್ ನೋಟೀಸ್ ನೀಡಲಾಗಿದ್ದು, ಪ್ರಾತಮಿಕ ತನಿಖೆ ನಡೆಯುತ್ತಿದ್ದು, ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಓ ಪ್ರೀತಿ ಗೆಹಲೋತ್ ತಿಳಿಸಿದರು.
ಜಿಲ್ಲಾ ಪಂಚಾಯತ್ ನ ಸಿಬ್ಬಂದಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಪ್ರಕರಣದಲ್ಲಿ, ಆತನ ಹೆಸರು, ವಿಳಾಸದ ಸಮೇತ ವರದಿ ಪ್ರಸಾರವಾದ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ ಸದಸ್ಯೆ ಗೀತಾಂಜಲಿ ಸುವರ್ಣ, ಸಿಬ್ಬಂದಿಯ ಪರೀಕ್ಷಾ ವರದಿಯಲ್ಲಿ ಪದೇ ಪದೇ ಗೊಂದಲ ಸೃಷ್ಠಿ ಮಾಡಿದ್ದರಿಂದ, ಆತ ಮಾನಸಿಕವಾಗಿ ಜರ್ಜರಿತನಾಗಿದ್ದು, ಈ ಸಂದರ್ಭದಲ್ಲಿ ವರದಿಯ ಬಗ್ಗೆ ವಿಚಾರಿಸಿದಾಗ ಸಂಬoದಪಟ್ದ ವೈದ್ಯರೂ ಸಹ ತಮಗೆ ಸರಿಯಾದ ಮಾಹಿತಿ ನೀಡಿಲ್ಲ, ಪ್ರಸ್ತುತ ಮಾನಸಿಕವಾಗಿ ನೊಂದಿರುವ ಯುವಕನಿಗೆ ಜಿಲ್ಲಾ ಪಂಚಾಯತ್ ನಿಂದ ದೈರ್ಯ ತುಂಬವ ಕೆಲಸ ಆಗಬೇಕು ಮತ್ತು ಆತ ಪುನಃ ಇಲ್ಲಿಯೇ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷೆ ಶಿಲ್ಪಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೋಭಾ ಜಿ ಪುತ್ರನ್, ಪ್ರತಾಪ್ ಹೆಗ್ಡೆ ಮಾರಾಳಿ,ಸುಮಿತ್ ಶೆಟ್ಟಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.