ಉಡುಪಿ: ಜಿಲ್ಲೆಯಲ್ಲಿ ಋತುಚಕ್ರ ಶುಚಿತ್ವ ನಿರ್ವಹಣೆ ಸಾಪ್ತಾಹಿಕ ಕಾರ್ಯಕ್ರಮವು ಮೇ 28 ರಿಂದ ಜೂನ್ 3 ರ ವರಗೆ ನಡೆಯಲಿದ್ದು, ಈ ಅವಧಿಯಲ್ಲಿ ಋತುಚಕ್ರದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಹೇಳಿದರು.ಅವರು ಉಡುಪಿ ಜಿಲ್ಲಾ ಪಂಚಾಯತ್ ಋತುಚಕ್ರ ಮಾಸಾಚರಣೆ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಋತುಚಕ್ರ ಎಂಬುದು ಮುಜುಗರ ಪಡೆಯುವ ವಿಷಯವಲ್ಲ, ಇದೊಂದು ನೈಸರ್ಗಿಕ ಪ್ರಕ್ರಿಯೆ, ಈ ಬಗ್ಗೆ ಇಂದಿಗೂ ಸ್ತ್ರೀಯರಿಗೆ ಹಲವು ನಿರ್ಬಂದಗಳಿವೆ , ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ, ಇಂದಿಗೂ 64% ಮಹಿಳೆಯರು ಋತುಚಕ್ರ ಸಂದರ್ಭದಲ್ಲಿ ಅಸುರಕ್ಷತಾ ವಿಧಾನಗಳನ್ನು ಬಳಸುತ್ತಿದ್ದು, 20% ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ, 64% ಮಹಿಳೆಯರು ಸೂಕ್ತ ರೀತಿಯಲ್ಲಿ ಪ್ಯಾಡ್ ಗಳನ್ನು ವಿಲೇವಾರಿ ಮಾಡುತ್ತಿಲ್ಲ ಮತ್ತು 77% ಮಹಿಳೆಯರಿಗೆ ಈಗಲೂ ಋತುಚಕ್ರದ ಸಂದರ್ಭದಲ್ಲಿ ಹಲವು ನಿರ್ಬಂದಗಳಿಗೆ ಒಳಗಾಗುತ್ತಾರೆ ಇವೆಲ್ಲದರ ಬಗ್ಗೆ ಅರಿವು ಮೂಡಿಸುವುದು ಈ ಸಾಪ್ತಾಹಿಕದ ಉದ್ದೇಶ ಎಂದು ಹೇಳಿದರು.
ಋತುಚಕ್ರವನ್ನು 28 ದಿನಗಳೆಂದು ಪರಿಗಣಿಸಿದ್ದು , ಇದಕ್ಕಾಗಿ ವಿಶೇಷವಾಗಿ ತಯಾರಿಸಲಾದ 28 ಮಣಿಗಳ ಬ್ರಾಸ್ ಲೆಟ್ ನ್ನು ಧರಿಸುವ ಮೂಲಕ ಋತುಚಕ್ರಕ್ಕಿರುವ ಕಳಂಕವನ್ನು ದೂರ ಮಾಡಿ, ಅದನ್ನು ಸಹಜವಾಗಿ ಸ್ವೀಕರಿಸಲು ಜಾಗೃತಿ ಮೂಡಿಸಬೇಕಿದ್ದು, ಈ ಬ್ರಾಸ್ ಲೆಟ್ ನ್ನು ಅಧ್ಯಕ್ಷ ದಿನಕರ ಬಾಬು ಸೇರಿದಂತೆ ಎಲ್ಲಾ ಸದಸ್ಯರು ಧರಿಸಿ, ಜಾಗೃತಿ ಮೂಡಿಸಿದರು.
ಉಪಾಧ್ಯಕ್ಷೆ ಶಿಲ್ಪಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೋಭಾ ಜಿ ಪುತ್ರನ್, ಪ್ರತಾಪ್ ಹೆಗ್ಡೆ ಮಾರಾಳಿ,ಸುಮಿತ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.