ಬಹಳಷ್ಟು ಮಂದಿ ಮನುಷ್ಯನ ಜೀವನಾವಧಿ ಕಡಿಮೆ ಅಂದುಕೊಳ್ಳುತ್ತಾರೆ!  ಕೆಲವರು ಅಬ್ಬಬ್ಬಾ ಎಂದರೆ 60 ವರುಷ ಬದುಕಬಹುದು ಎಂದು ಮೊದಲೇ ಲೆಕ್ಕಚಾರ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಪಾಪ ಪುಣ್ಯದ ಮೇಲೆ ನಮ್ಮ ಬದುಕಿನ ಬಂಡಿ ಸಾಗುತ್ತದೆ ಎಂದು ಹೇಳುತ್ತಾರೆ.

ವಿಪರ್ಯಾಸವೇನೆಂದರೆ ಮನುಷ್ಯನ ಜೀವನಾವಧಿ ಎಂದಿಗೂ ಕಡಿಮೆಯಾಗಿಲ್ಲ. ಬದಲಾಗಿ ಆತನಲ್ಲಿರುವ ಅಹಂಕಾರ, ಅಸೂಯೆ, ಕೋಪ, ಇವೆಲ್ಲ ಮನೆ ಮಾಡಿದ ಕಾರಣ ಅವನಿಗೆ ಜೀವನಾವಧಿ ಕಡಿಮೆ ಎಂದು ಅನ್ನಿಸಿರಬಹುದು. ಜೊತೆಗೆ ಕಾಲದ ಓಡುವಿಕೆ ಎಂದಿಗೂ ನಿಂತಿಲ್ಲ ಎಂಬುದನ್ನು ಮರೆಯಬಾರದಲ್ಲವೇ?

ಭೂಮಿಯ ಮೇಲೆ ವಾಸವಿರುವ ಸಕಲ ಜೀವಿಗಳಲ್ಲಿ ಮನುಷ್ಯನೊಬ್ಬ ಭಿನ್ನ. ಹಸಿವು ಇಲ್ಲದ್ದಿದ್ದರು ಊಟ ಮಾಡುತ್ತಾನೆ. ನಿದ್ದೆ ಬರದಿದ್ದರು ಮಲಗುತ್ತಾನೆ. ಕೆಟ್ಟವರ ಸಂಗ ಮಾಡುತ್ತಾನೆ. ತಪ್ಪು ಎಂದು ತಿಳಿದರೂ ಅದನ್ನೇ ಮಾಡುತ್ತಾನೆ. ನಾವು ಅನ್ನೋದು ಮರೆತು ಹೋಗುತ್ತಾನೆ, ನಾನು ಎಂದು ಬೆಳೆಸಿಕೊಳ್ಳುತ್ತಾನೆ. ನಾನೊಬ್ಬ ಶ್ರೇಷ್ಠ ಉಳಿದವರು ಕನಿಷ್ಠ ಎಂದು ತಿರಸ್ಕಾರ ಮಾಡುತ್ತಾನೆ. ಪಕ್ಕದ ಮನೆಯವರು ಬೈಕ್ ಖರೀದಿಸಿದರೆ ಈತ ಕಾರ್ ಖರೀದಿಸುತ್ತಾನೆ. ಇನ್ನೊಬ್ಬರನ್ನು ಮೆಚ್ಚಿಸಲು ಪ್ರಯತ್ನಮಾಡುತ್ತಾನೆ. ಹೀಗೆ ಬದುಕಿನುದ್ದಕ್ಕೂ ಅಸೂಯೆಯಿಂದಲೇ ಬದುಕುತ್ತಾನೆ.

ಸಂಪತ್ತನ್ನು ಒಬ್ಬ ಕೆಟ್ಟ ವ್ಯಕ್ತಿಗೆ ನೀಡಿದರೆ ಅದು ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ. ಆದನ್ನೇ ಒಬ್ಬ ಒಳ್ಳೆಯ ವ್ಯಕ್ತಿಗೆ ನೀಡಿದರೆ ಆ ಸಂಪತ್ತು ಇನ್ನೂ ವೃದ್ಧಿಯಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಹಾಗಾಗಿ ನಾವು ನಮ್ಮ ಜೀವನಾವಧಿಯನ್ನು ಸಕ್ರಮವಾಗಿ ಉಪಯೋಗ ಮಾಡಿದರೆ ಮಾತ್ರ ಸಾರ್ಥಕವಾಗುತ್ತದೆ.

ನಿಜಕ್ಕೂ ಮಿತ್ರರೇ, ನಾವು ನಮ್ಮ ಬದುಕನ್ನು ಅರ್ಧದಷ್ಟು ಕಳೆದಿದ್ದೇವೆ. ಅಸೂಯೆಗೆ ಬಲಿಯಾಗಿದ್ದೆವೆ. ಪ್ರೀತಿ, ವಾತ್ಸಲ್ಯವನ್ನು ಮರೆತು ಹೋಗಿದ್ದೇವೆ. ಒಬ್ಬರನ್ನು ನೋಡಿದರೆ ಮತ್ತೊಬ್ಬರಿಗೆ ಆಗದಷ್ಟು ಕ್ರೋಧಗೊಂಡಿದ್ದೇವೆ. ಸಹನೆ ಮೀತಿ ಮೀರಿದೆ. ಕೆಟ್ಟ ಆಲೋಚನೆಗೆ ಒಳಗಾಗಿದ್ದೇವೆ. ಯಾರದೋ ಜೀವನದಲ್ಲಿ ನಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದೇವೆ. ಆದರೆ, ನಾವು ನಮ್ಮ ಜೀವನವನ್ನು ಎಷ್ಟು ಸಾರ್ಥಕಗೊಳಿಸಿಕೊಂಡಿದ್ದೇವೆ, ನಮಗಾಗಿ ಎಷ್ಟು ದಿನ ಬದುಕ್ಕಿದ್ದೇವೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಹಾಗಾಗಿ ಇರುವ ಅರ್ಧ ಕಾಲವನ್ನು, ಸಮಯವನ್ನು ಕಳೆಯೋಣ. ಇರುವಷ್ಟು ಕಾಲ ಸುಖದಿಂದ,  ಇತರರನ್ನು ಸುಖದಲ್ಲಿರಿಸಿ ಬದುಕು ಸಾಗಿಸೋಣ. ಆಗ ಮಾತ್ರ  ಜೀವನ ಸಾರ್ಥಕವಾಗುತ್ತದೆ ಮತ್ತು ಮನುಷ್ಯನ ಜೀವನಾವಧಿ ಕಡಿಮೆ ಅಲ್ಲ ಎಂದು ನೀವೇ ಉದ್ಗರಿಸುವಿರಿ !


-By ಪ್ರಮೀಳಾ 

ದ್ವಿತೀಯ ಬಿಎ (ಪತ್ರಿಕೋದ್ಯಮ)

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು